ಧಾರವಾಡ:ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಈ ಹಿಂದೆ ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೀಗ ಗ್ರಾಮೀಣ ಪ್ರದೇಶದಿಂದ ಹಿಡಿದು ನಾಡಿನ ವಿವಿಧ ಭಾಗಗಳಲ್ಲಿಯೂ ಯುವಪಡೆ ಸೇರಿದಂತೆ ಎಲ್ಲ ವರ್ಗದ ಜನರು ಸಹ ದಸರಾ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ಮಹಿಳಾ ಮುಖಂಡರಾದ ಹೇಮಾಕ್ಷಿ ಕಿರೇಸೂರ ಮಾತನಾಡಿ, ಮಹಿಳೆಯರೇ ನಾಡಿನ ನಿಜವಾದ ಶಕ್ತಿ. ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಕಾರ‍್ಯವೂ ಅಸಾಧ್ಯವಲ್ಲ. ಕಳೆದ ಹತ್ತು ವರ್ಷಗಳಿಂದ ಕಲಾಶಕ್ತಿ ಫೌಂಡೇಶನ್‌ನ ಕಾರ‍್ಯವೈಖರಿಯನ್ನು ಗಮನಿಸುತ್ತಿದ್ದು, ಸಂಸ್ಥೆಯು ಮಹಿಳೆಯರಿಗೆ ಉತ್ತಮ ತರಬೇತಿ ನೀಡುವುದರ ಜತೆಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಸಂಘಟಕ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ನೂರಾರು ಮಹಿಳೆಯರನ್ನು ಒಂದೇ ವೇದಿಕೆಯಡಿ ಸೇರಿಸಿ ದಾಂಡಿಯಾ ತರಬೇತಿ ನೀಡುವುದು ಸುಲಭದ ಕೆಲಸವಲ್ಲ. ಬಾಲ್ಯದಿಂದಲೂ ನೃತ್ಯದ ಕನಸು ಕಂಡ ಅನೇಕ ಮಹಿಳೆಯರಿಗೆ ತಮ್ಮ ಆಸಕ್ತಿಯನ್ನು ಈ ಮೂಲಕ ಸಾಕಾರಗೊಳಿಸಿಕೊಳ್ಳಲು ಕಲಾಶಕ್ತಿ ಫೌಂಡೇಶನ್ ಉತ್ತಮ ವೇದಿಕೆ ಕಲ್ಪಿಸುತ್ತಿದೆ ಎಂದರು.ಕಲಾಶಕ್ತಿ ಫೌಂಡೇಶನ್‌ನ ಮುಖ್ಯಸ್ಥ ಮಲ್ಲನಗೌಡ ಪಾಟೀಲ, ಹಬ್ಬದ ಅಂಗವಾಗಿ ನಾವು ಅ. 18ರಂದು ಸಂಜೆ 6ಕ್ಕೆ ನಗರದಲ್ಲಿ ‘ಕಲಾಶಕ್ತಿ ದಾಂಡಿಯಾ ಉತ್ಸವ ಆಯೋಜಿಸಿದೆ ಎಂದರು. ಸಿ.ಎಸ್. ಪಾಟೀಲ, ಜಯಂತಿಲಾಲ ಜೈನ್, ಶಶಿಕಲಾ ಹೆಬ್ಳೀಕರ್, ರಾಕೇಶ ನಾಝರೆ, ಶೇಖರ್ ಕವಳಿ, ಸಲೀಂ ರಿಜವಾಲೆ ಹಾಗೂ ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷೆ ಅನ್ನಪೂರ್ಣಾ ಪಾಟೀಲ ಇದ್ದರು. ಕಲಾವಿದ ಶ್ರೀನಿವಾಸ ಇಂಚೂರ ಸ್ವಾಗತಿಸಿದರು. ಪೂಜಾ ಪಾಟೀಲ ನಿರೂಪಿಸಿದರು. ಅಮೃತಾ ಪಾಟೀಲ ವಂದಿಸಿದರು.