- ಜೀವನ ಸಂಗಾತಿ ಎಸ್ಸೆಸ್ಸೆಂ ನನ್ನ ರೋಲ್ ಮಾಡೆಲ್ ಎಂದ ಸಂಸದೆ । ಮುಖಂಡರಿಂದ ಸಚಿವರ ಗುಣಗಾನ
ದಾವಣಗೆರೆ ಮಗಳನ್ನು, ದಾವಣಗೆರೆ ಸೊಸೆಯನ್ನು ಇಡೀ ಲೋಕಸಭಾ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದು, ತಮ್ಮ ಜೀವನ ಸಂಗಾತಿ, ತಮ್ಮ ರೋಲ್ ಮಾಡೆಲ್ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಮಾವನವರಾದ ಡಾ.ಶಾಮನೂರು ಶಿವಶಂಕರಪ್ಪ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಜನ್ಮದಿನ ಹಾಗೂ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಹಳ್ಳಿ ಹಳ್ಳಿಯಲ್ಲೂ ಸಾಕಷ್ಟು ಜನ ಕೆಲಸ ಮಾಡಿದ್ದೀರಿ, ನಿಮ್ಮೆಲ್ಲರ ಪರಿಶ್ರಮದಿಂದ 25 ವರ್ಷದ ನಂತರ ಕಾಂಗ್ರೆಸ್ ಬಾವುಟ ಲೋಕಸಭಾ ಕ್ಷೇತ್ರದಲ್ಲಿ ಹಾರಿಸಿದ್ದೀರಿ ಎಂದು ಶ್ಲಾಘಿಸಿದರು.ಪಂಚಾಯಿತಿ ಚುನಾವಣೆಗಳಿಗೆ ಸಜ್ಜಾಗಿ:
ಕುಂದುವಾಡ ಕೆರೆ, ವೃತ್ತಗಳು, 20 ಸಾವಿರ ಆಶ್ರಯ ಮನೆ, ಏಷ್ಯಾದ ನಂಬರ್ ಒನ್ ಗಾಜಿನ ಮನೆ, ಸಿಸಿ ರಸ್ತೆ, ನಗರ, ಗ್ರಾಮೀಣ ಸಿಸಿ ರಸ್ತೆ ಹೀಗೆ ಭೂಪಟದಲ್ಲಿ ಎದ್ದು ಕಾಣುವಂತೆ ಅಭಿವೃದ್ಧಿ ಕಾರ್ಯಗಳನ್ನು ಎಸ್.ಎಸ್. ಮಲ್ಲಿಕಾರ್ಜುನ ಮಾಡಿದ್ದಾರೆ. ಕುಂದುವಾಡ ಕೆರೆ ಸೇರಿದಂತೆ ನೀರಿನ ವಿಚಾರದಲ್ಲಿ ಪರಿಪೂರ್ಣ ಕೆಲಸ ಮಾಡುತ್ತಾರೆ ಎಂದು ಸಂಸದರು ತಿಳಿಸಿದರು.
ಎಸ್ಸೆಸ್ ಮಲ್ಲಿಕಾರ್ಜುನ ಜನ್ಮದಿನಕ್ಕಾಗಿ 5555 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇತ್ತು. 3 ಸಾವಿರಕ್ಕೂ ಅಧಿಕ ಜನ ರಕ್ತದಾನ ಮಾಡಿದ್ದಾರೆ. ಈ ವರ್ಷ ಪೂರ್ತಿ ರಕ್ತದಾನ ಶಿಬಿರ ನಡೆಯಲಿದೆ. ರಾಜ್ಯದ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸುವೆ. ಕಳೆದ ಸಲ ಕಾಂಗ್ರೆಸ್ಸಿನ ಒಬ್ಬ ಎಂಪಿ ಇದ್ದರು. ಈಗ ನಾವು 9 ಸಂಸದರಿದ್ದೇವೆ. ಮಲತಾಯಿ ಧೋರಣೆ, ತೆರಿಗೆ ಹಂಚಿಕೆಯಲ್ಲಿ, ಕೇಂದ್ರದ ಅನುದಾನ ನೀಡುವಲ್ಲಿ, ಐಐಟಿ ಬಗ್ಗೆ, ನಗರ ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಾವೂ ಅನುದಾನ ಕೇಳುತ್ತಿದ್ದೇವೆ. ಸಿಎಂ. ಡಿಸಿಎಂ ನೇತೃತ್ವದಲ್ಲಿ ಪ್ರಧಾನಿ, ಹಣಕಾಸು ಸಚಿವರನ್ನೂ ಭೇಟಿ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
(ಸಂಸದೆ ಡಾ.ಪ್ರಭಾ)