ಹೊಸಕೋಟೆ: ನಗರದಲ್ಲಿರುವ ಪ್ರತಿಯೊಂದು ಮನೆ, ನಿವೇಶನ ಸೇರಿದಂತೆ ಎಲ್ಲಾ ರೀತಿಯ ಸ್ವತ್ತುಗಳಿಗೂ ಇ-ಖಾತೆ ಮಾಡಿಸುವುದೇ ನಮ್ಮ ಗುರಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ಆಯೋಜಿಸಿದ್ದ ಇ-ಖಾತೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ನಾನು ಪ್ರಥಮ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆ ಸಂದರ್ಭದಲ್ಲಿ ಸದನದಲ್ಲಿ ಇ ಖಾತೆ ಬಗ್ಗೆ ಧ್ವನಿಯೆತ್ತಿದ್ದೆ. ಆದರೆ ಅಂದಿನ ಸರ್ಕಾರ ಅದನ್ನು ಸಾಕಾರ ಮಾಡಿಲ್ಲ. ಈಗಿನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ಸಾಕಾರ ಮಾಡಿದೆ. ಹೊಸಕೋಟೆ ನಗರದಲ್ಲಿ 18,502 ಆಸ್ತಿಗಳಿದ್ದು, 12537 ಎ ಖಾತಾ, 5962 ಬಿ ಖಾತಾಗೆ ಸೇರಿದೆ. ಇನ್ನು ಸರ್ಕಾರ ಕೈಗೊಂಡಿರುವ ಇ ಖಾತೆ ಅಭಿಯಾನದಲ್ಲಿ ಹೊಸಕೋಟೆ ತಾಲೂಕು ಶೇ.68.57 ಸಾಧನೆ ಮಾಡುವುದರ ಮೂಲಕ ಪ್ರಥಮ ಸ್ಥಾನದಲ್ಲಿದೆ. ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ.45.07 ಈ ಖಾತೆ ಪ್ರಗತಿ ಕಂಡಿದೆ. ಹೊಸಕೋಟೆ ನಗರದಲ್ಲಿ ಬಾಕಿ ಇರುವ 3500 ಇ ಖಾತೆಗಳನ್ನು ಮಾಡುವುದರ ಮೂಲಕ ರಾಜ್ಯದಲ್ಲಿ ಶೇಕಡ ನೂರರಷ್ಟು ಈ ಖಾತೆ ಮಾಡಿಕೊಟ್ಟ ಹೆಗ್ಗಳಿಕೆ ಹೊಸಕೋಟೆಗೆ ದಕ್ಕಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿ ಎಂದರು.ಮೂಲ ಸೌಕರ್ಯಕ್ಕೆ ಆದ್ಯತೆ: ಹೊಸಕೋಟೆ ನಗರಸಭೆ ವ್ಯಾಪಕವಾಗಿ ಬೆಳೆಯುತ್ತಿದ್ದು ಪ್ರತಿ ತಿಂಗಳು ಬೆಸ್ಕಾಂಗೆ 1.17 ಕೋಟಿ ವಿದ್ಯುತ್ ಬಿಲ್ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಒಟ್ಟು ಎರಡು ಕೋಟಿ ವೆಚ್ಚವಾಗುತ್ತಿದೆ. ನಗರದ ನಾಗರಿಕರಿಗೆ ಸಮರ್ಪಕ ಮೂಲ ಸೌಕರ್ಯ ಒದಗಿಸುವುದೇ ನಮ್ಮ ಉದ್ದೇಶವಾಗಿದ್ದು, ಸರ್ಕಾರದ ಆದೇಶಗಳಿಗೆ ಜನರ ಸಹಕಾರ ಬೇಕು ಎಂದರು.
ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಮಾತನಾಡಿ, ಸಾರ್ವಜನಿಕರು ಇ ಖಾತೆಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು 2016ರಲ್ಲಿ ಇ ಖಾತೆ ಅಭಿಯಾನ ಜಾರಿಗೆ ಸರ್ಕಾರ ಜಾರಿಗೆ ತಂದಿತು. ಆಗ ಎಲ್ಲಾ ರೀತಿಯ ಸ್ವತ್ತುಗಳಿಗೂ ಇ ಖಾತೆ ಮಾಡಲಾಗುತ್ತಿತ್ತು. 2017ರಲ್ಲಿ ಅನಧಿಕೃತ ಬಡಾವಣೆ ಇ ಖಾತೆ ಸ್ಥಗಿತಕ್ಕೆ ಸರ್ಕಾರ ಸೂಚನೆ ನೀಡಿತ್ತು ಈಗ ಬಿ-ಖಾತೆ ಜಾರಿ ಮಾಡಿದ್ದು ನಗರಸಭೆಯಲ್ಲಿ ಮಧ್ಯವರ್ತಿಗಳನ್ನು ತಡೆಗಟ್ಟಲು ಹೆಲ್ಪ್ ಲೈನ್ ಮಾಡಿ 4 ತಿಂಗಳಿಂದ ಕೆಲಸ ಮಾಡಿದ್ದೇವೆ. ಇಡೀ ಜಿಲ್ಲೆಯಲ್ಲಿ ಹೊಸಕೋಟೆ ಇ-ಖಾತೆ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮುಂದಿನ ದಿನಗಳಲ್ಲಿ ನಗರದ ಪ್ರತಿ ಸ್ವತ್ತಿಗೂ ಇ-ಖಾತೆ ಮಾಡಿಕೊಡುವುದು ನಿಶ್ಚಿತ ಎಂದರು.ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ನಗರಸಭೆ ಸದಸ್ಯರಾದ ಗೌತಮ್, ಗುಳ್ಳು ನಾಗರಾಜ್, ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ನಾಗರಾಜ್, ಅಮ್ಜದ್, ರಮಾದೇವಿ, ಗಣೇಶ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಭೈರೇಗೌಡ, ವಹ್ನಿಕುಲ ತಿಗಳ ಸಂಘದ ರಾಜ್ಯ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್, ನಗರಸಭೆ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.
ಬಾಕ್ಸ್ ..................ನಗರಾಭಿವೃದ್ಧಿಗೆ ಅಗತ್ಯ ಕ್ರಮ
ಹೊಸಕೋಟೆ ನಗರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 100 ಕೋಟಿ ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಅಮಾನಿಕೆರೆಯಲ್ಲಿ 10 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೋಲಾರ್ ಅಳವಡಿವಡಿಸಿದ್ದು, ಮುಂದಿನ ದಿನಗಳಲ್ಲಿ 10 ಮೆಗಾ ವ್ಯಾಟ್ನ ವಿದ್ಯುತ್ ನಗರಕ್ಕೆ ಬಳಸಲು ಚಿಂತನೆ ನಡೆಸಿದ್ದೇವೆ. ತ್ಯಾಜ್ಯ ನಿರ್ವಹಣೆಗೆ 60 ಕೋಟಿ ವೆಚ್ಚದಲ್ಲಿ 3 ಎಸ್‌ಟಿಪಿ ಪ್ಲಾಂಟ್ ನಿರ್ಮಾಣ, ಹೊಸಕೋಟೆ ನಗರಕ್ಕೆ ಕಾವೇರಿ ನೀರು, ಮೆಟ್ರೋ ತರುವಲ್ಲಿಯೂ ಅಗತ್ಯ ಕ್ರಮಗಳನ್ನು ಸರ್ಕಾರದ ಮಟ್ಟದಲ್ಲಿ ಕೈಗೊಂಡಿದ್ದೇನೆ ಎಂದು ಶಾಸಕ ಶರತ್ ಬಚ್ಚೇಗೌಡ ನಿಲ್ಲಿಸಿದರು.ಫೋಟೋ: 10 ಹೆಚ್‌ಎಸ್‌ಕೆ 1
ಹೊಸಕೋಟೆ ನಗರದ ಅಂಭೆಡ್ಕರ್ ಭವನದಲ್ಲಿ ನಡೆದ ಇ ಖಾತೆ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಸ್ವತ್ತಿನ ಮಾಲೀಕರಿಗೆ ಇ-ಖಾತೆ ವಿತರಿಸಿದರು.