ಕನ್ನಡಪ್ರಭ ವಾರ್ತೆ ಹೊನ್ನಾವರ
ಯಾವುದೇ ಕಲೆಯಲ್ಲಿ ಸತತವಾದ ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಕಲಾದೇವತೆ ಒಲಿಯುತ್ತಾಳೆ. ಎಂ.ಬಿ.ಎ. ಪದವೀಧರೆ ವಿದುಷಿ ಸಿರಿ ಭಟ್ಟ ನೃತ್ಯಪಟುವಾಗಿ, ನೃತ್ಯ ಗುರುವಾಗಿ ಬೆಳೆದು ನಾಡಿನ ಸಂಪತ್ತಾಗಿದ್ದಾರೆ ಎಂದು ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಹೇಳಿದರು.ಪಟ್ಟಣದ ಹವ್ಯಕ ಸಭಾಭವನದಲ್ಲಿ ಡಾ. ರಾಜೇಶ ಕಿಣಿ ಮತ್ತು ಡಾ. ರೇಖಾ ಕಿಣಿ ಆಯೋಜಿಸಿದ್ದ ನುಪೂರ ಸಿರಿ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾವಿದ ಕಲೆಯ ಮೂಲಕ ತಾನು ಸಂತೋಷ ಪಟ್ಟು ಜನರಿಗೂ ಸಂತೋಷ ನೀಡುತ್ತಾನೆ. ಪಾಲಕರು ತಮ್ಮ ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಮಕ್ಕಳ ಆಸಕ್ತಿಯ ಕಲೆಯನ್ನು ಕಲಿಸಿದಾಗ ಅವರ ವ್ಯಕ್ತಿತ್ವ ಪೂರ್ಣ ವಿಕಾಸವಾಗುತ್ತದೆ. ಡಾ. ಕಿಣಿ ಕುಟುಂಬದ ಕಲಾಪ್ರೇಮ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಡಾ. ಪ್ರಮೋದ ಫಾಯ್ದೆ ಮಾತನಾಡಿ, ಯುವಜನಾಂಗ ಕಲೆಯನ್ನು ಪ್ರೀತಿಸುತ್ತಿರುವುದು ಸಂತೋಷದ ಸಂಗತಿ ಎಂದರು. ಶಿಕ್ಷಕರಾದ ಸುಬ್ರಹ್ಮಣ್ಯ ಹೆಗಡೆ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರಗೆ ಬರುವಂತೆ ಪ್ರೋತ್ಸಾಹ ನೀಡಬೇಕು ಎಂದರು.
ಗುರುವಂದನೆ ಕಾರ್ಯಕ್ರಮದಲ್ಲಿ ನೃತ್ಯ ಗುರು ಡಾ. ಸಹನಾ ಭಟ್ಟ ಮತ್ತು ಭರತನಾಟ್ಯದ ಸಾಹಿತ್ಯ ರಚನೆಕಾರ ಪ್ರದೀಪ್ ಭಟ್ಟ ಹುಬ್ಬಳ್ಳಿ ಅವರನ್ನು ಗೌರವಿಸಲಾಯಿತು. ಡಾ. ಸಹನಾ ಭಟ್ಟ ದಂಪತಿ ಶಿಷ್ಯೆ ವಿದುಷಿ ಸಿರಿ ಭಟ್ಟರನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಆಶೀರ್ವದಿಸಿದರು.ನಂತರ ನಡೆದ ವಿದುಷಿ ಸಿರಿ ಭಟ್ಟ ಅವರ ಭರತನಾಟ್ಯ ಎಲ್ಲರ ಮನಸೂರೆಗೊಂಡಿತು. ಪ್ರದೀಪ್ ಭಟ್ಟ ವಿರಚಿತ ಕೈಕೇಯಿ ನೃತ್ಯ ರೂಪಕದಲ್ಲಿ ಸಿರಿ ಮನೋಜ್ಞವಾದ ಅಭಿನಯವನ್ನು ಪ್ರದರ್ಶಿಸಿದರು. ಹಿನ್ನೆಲೆಯಲ್ಲಿ ಕಲಾಶ್ರೀ ಬಾಲಸುಬ್ರಹ್ಮಣ್ಯ ಶರ್ಮ, ಪಂಚಮ್ ಉಪಾಧ್ಯಾಯ, ರಘು ಸಿಂಹ, ಅರುಣಕುಮಾರ್ ರಂಗಕ್ಕೆ ಮೆರಗು ತಂದರು.
ಡಾ. ರಾಜೇಶ್ ಕಿಣಿ ಮತ್ತು ಡಾ. ರೇಖಾ ಕಿಣಿ ಎಲ್ಲರನ್ನು ಸ್ವಾಗತಿಸಿದರು. ಪ್ರಶಾಂತ್ ಮೂಡಲಮನೆ ನಿರೂಪಿಸಿದರು. ಐ.ಟಿ. ಉದ್ಯೋಗಿ, ಸಿರಿ ಭಟ್ಟರ ಪತಿ ಪ್ರತೀಕ್ ಭಟ್ಟ ವಂದಿಸಿದರು.