ಪರ್ಯಾಯ ಶ್ರೀಗಳ ಪೀಠಾರೋಹಣ ಸುವರ್ಣ ಮಹೋತ್ಸವ

KannadaprabhaNewsNetwork |  
Published : Apr 17, 2024, 01:15 AM IST
ಪುತ್ತಿಗೆ15 | Kannada Prabha

ಸಾರಾಂಶ

ವಿದೇಶಗಳಲ್ಲಿ ಭಾರತೀಯ ಗೋತಳಿಯನ್ನು ರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ನಿರ್ಮಾಣವಾದ ವಿಶಾಲವಾದ ಗೋಶಾಲೆಯ ಆವರಣದಲ್ಲಿ ಈ ಯಾಗ ನಡೆಯಿತು. ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರದ್ಧಾ ಭಕ್ತಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ಅಂಗವಾಗಿ ಅಮೆರಿಕದ ಹೂಸ್ಟನ್‌ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ಶಿಷ್ಯರಿಂದ ಭಕ್ತರ ಸಹಕಾರದಲ್ಲಿ ಬೃಹತೀ ಸಹಸ್ರ ಯಾಗ ಸಂಪನ್ನಗೊಂಡಿತು.

ವಿದೇಶಗಳಲ್ಲಿ ಭಾರತೀಯ ಗೋತಳಿಯನ್ನು ರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ನಿರ್ಮಾಣವಾದ ವಿಶಾಲವಾದ ಗೋಶಾಲೆಯ ಆವರಣದಲ್ಲಿ ಈ ಯಾಗ ನಡೆಯಿತು. ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರದ್ಧಾ ಭಕ್ತಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಟೆಕ್ಸಾಸ್ ಗೋ ಶಾಲಾ ಮತ್ತು ಗೀತಾ ಚಿಂತನ ಸಭಾ ಅವರಿಂದ ಈ ಕಾರ್ಯಕ್ರಮ ಆಯೋಜಿತವಾಗಿತ್ತು. ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀ ಪುತ್ತಿಗೆ ಮಠದ ಹೂಸ್ಟನ್ ಶಾಖೆಯ ಪ್ರಧಾನ ಅರ್ಚಕ ರಘುರಾಮ ಭಟ್ ನಿರ್ವಹಿಸಿದ್ದರು. ಶ್ರೀ ಮಠದ ವಿದೇಶಿ ಶಾಖೆಗಳ ಪ್ರಧಾನ ಕಾಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.

ವೇದಮೂರ್ತಿ ಅತ್ತೂರು ರವೀಂದ್ರ ಭಟ್ ಮಾರ್ಗದರ್ಶನದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಾದಿರಾಜ್ ಭಟ್, ಅವಿನಾಶ್ ಭಟ್ ಮತ್ತು ತ್ರಿವಿಕ್ರಮ ಭಟ್ ಅವರು ಯಾಜಕರಾಗಿ ಸಹಕರಿಸಿದರು.

ಸಾಂಪ್ರದಾಯಿಕ ಅರಣಿ ಮಥನ ಕಾರ್ಯಕ್ರಮದೊಂದಿಗೆ ಅಗ್ನಿಜನನ ಮಾಡಲಾಯಿತು. ಗೋಶಾಲೆಯ ದೇಶೀ ದನಗಳ ಗೋಮಯದಿಂದಲೇ ಯಜ್ಞವೇದಿಕೆಯನ್ನು ಸಾರಿಸಲಾಗಿತ್ತು. ಹೋಮಾವಸಾನದಲ್ಲಿ ಯಜ್ಞ ಮಂಟಪದ ಬಳಿಯೇ ಗಿರ್ ಜಾತಿಯ ದನಗಳಿಗೆ ಗೋಪೂಜೆ ಸಲ್ಲಿಸಲಾಯಿತು.

360 ಇಟ್ಟಿಗೆಗಳಿಂದ ಗರುಡ ಮಾದರಿಯ ಯಜ್ಞ ಕುಂಡವನ್ನು ನಿರ್ಮಿಸಲಾಯಿತು. ಪ್ರತಿಯೊಂದು ಇಟ್ಟಿಗೆಯಲ್ಲಿ ವಿಷ್ಣುವಿನ ಸಹಸ್ರನಾಮಾವಳಿಯಲ್ಲಿರುವ ನಾಮಗಳನ್ನು ಭಕ್ತರು ಬರೆದು ಸಂಗ್ರಹಿಸಿದ್ದರು. 54 ಬಗೆಯ ವಿವಿಧ ಅಪೂರ್ವ ಔಷಧಿ ಮತ್ತು ವನಸ್ಪತಿಗಳನ್ನು ಯಜ್ಞಕ್ಕಾಗಿಯೇ ಭಾರತದಿಂದ ತರಿಸಿಕೊಳ್ಳಲಾಗಿತ್ತು.

ಪೂಜ್ಯ ಪುತ್ತಿಗೆ ಶ್ರೀಪಾದರ ಅನುಗ್ರಹ ವೀಡಿಯೋ ಸಂದೇಶವನ್ನು ನೆರೆದ ಭಕ್ತರು ಆಲಿಸಿದರು. ಸಾವಿರಾರು ಮಂದಿ ಉಡುಪಿಯ ಭೋಜನಪ್ರಸಾದವನ್ನು ಸ್ವೀಕರಿಸಿದರು. ಪೂಜ್ಯ ಶ್ರೀಪಾದರ ಪೀಠಾರೋಹಣ ಸುವರ್ಣ ಮಹೋತ್ಸವದ ಪ್ರಾರಂಭವು ಉಡುಪಿಯಲ್ಲಿ ಮತ್ತು ವಿದೇಶದಲ್ಲಿಯೂ ಸಮಾನ ದಿನದಂದು ವೈಭವದಿಂದ ಆಚರಣೆ ಗೊಂಡದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುರ್ತು ಸಂಪುಟ ಸಭೆ ತೀರ್ಮಾನ : ಜಿ ರಾಮ್‌ ಜಿ ವಿರುದ್ಧ 22ರಿಂದ ಸಮರಾಧಿವೇಶನ
ಮುಜರಾಯಿ ದೇಗುಲಗಳಲ್ಲಿ ಇಂದು ಭಕ್ತರಿಗೆ ಎಳ್ಳು-ಬೆಲ್ಲ