ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ : ಸಚಿವ ಎಂ.ಬಿ. ಪಾಟೀಲ

KannadaprabhaNewsNetwork |  
Published : Sep 06, 2026, 03:15 AM IST
CDN

ಸಾರಾಂಶ

ಚಡಚಣ: ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾದ ಪ್ರಜಾಸೇವೆ ಆಂದೋಲನವನ್ನು ಸ್ಥಳೀಯ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಸಚಿವ ಎಂ.ಬಿ. ಪಾಟೀಲ ಸಸಿಗೆ ನೀರುಣಿಸುವ ಮೂಲಕ ಶನಿವಾರ ಉದ್ಘಾಟಿಸಿದರು.

ಚಡಚಣ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕನಸಾದ ಪ್ರಜಾಸೇವೆ ಆಂದೋಲನ ಯಶಸ್ವಿಗೊಳಿಸಲು ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬೃಹತ್ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾದ ಪ್ರಜಾಸೇವೆ ಆಂದೋಲನವನ್ನು ಸ್ಥಳೀಯ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಸಸಿಗೆ ನೀರುಣಿಸುವ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

130 ಸೀಟುಗಳಲ್ಲಿ ಆರಿಸಿ ತಂದಿದ್ದೀರಿ

ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ತಾವೆಲ್ಲರೂ ಆಶೀರ್ವದಿಸಿ 130 ಸೀಟುಗಳಲ್ಲಿ ಆರಿಸಿ ತಂದಿದ್ದೀರಿ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಾವು ಪ್ರಥಮ ಬಾರಿಗೆ ಪಂಚ ಗ್ಯಾರಂಟಿಗಳನ್ನು ತಂದಾಗ ಇಡೀ ದೇಶವೇ ನಮ್ಮನ್ನು ಹೀಯಾಳಿಸಿತ್ತು. ಆದರೆ ನಾವು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜನರ ಕುಂದುಕೊರತೆ ಆಲಿಸಲು ಅಧಿಕಾರಿ, ಜನಪ್ರತಿನಿಧಿಗಳ ಬಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಲು ಪ್ರಜಾಸೇವೆ ಆಂದೋಲನ ಹೆಸರಿನಲ್ಲಿ ಒಂದು ದೊಡ್ಡ ಆಂದೋಲನ ಪ್ರಾರಂಭಿಸಿದ್ದಾರೆ. ನಮ್ಮ ಜಿಲ್ಲಾಧಿಕಾರಿಗಳು ಮೊದಲು ಬಬಲೇಶ್ವರದಲ್ಲಿ ಪ್ರಜಾಸೇವೆ ಆಂದೋಲನ ಮಾಡೋಣ ಎಂದಿದ್ದರು. ಆದರೆ ನಾನು ನಮ್ಮ ರೈತರು ಹಾಗೂ ಸಾರ್ವಜನಿಕರು ಜಿಲ್ಲಾ ಕೇಂದ್ರದಿಂದ ದೂರವಿರುವ ಸ್ಥಳದಲ್ಲಿ ಆಯೋಜಿಸೋಣ ಎಂದು ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ನೀರಾವರಿಯಿಂದ ವಂಚಿತಗೊಂಡ ಹಾಗೂ ಮೂಲ ಸೌಕರ್ಯಗಳಿಂದ ವಂಚಿತಗೊಂಡ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಡಚಣ ಪಟ್ಟಣದಲ್ಲಿ ಪ್ರಜಾಸೇವೆ ಆಂದೋಲನ ಉದ್ಘಾಟಿಸಿದ್ದೇನೆ ಎಂದು ಹೇಳಿದರು.

ಪ್ರಜಾಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು.

ಪ್ರಜಾಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಒಬ್ಬ ನಿರ್ಗತಿಕನಿಗೆ ಪಿಂಚಣಿ ಕೊಡುವ ಕಾರ್ಯ ನಮ್ಮಿಂದಾದರೆ ನಾವೇ ಧನ್ಯರು. ಇದು ಸಾರ್ವಜನಿಕರ ಯೋಜನೆಯಾಗಿದ್ದು, ತಾವು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಆಂದೋಲನದಲ್ಲಿ ನೋಂದಣಿಯಾದ ತಮ್ಮ ಅರ್ಜಿ ಆನ್ ಲೈನ್‌ ಮೂಲಕ ದಾಖಲಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುವುದು. ನೀವು ಮನೆಯಲ್ಲಿಯೇ ಕುಳಿತು ತಮ್ಮ ಅರ್ಜಿಯ ಸ್ಥಿತಿಗತಿ ಪರಿಶೀಲಿಸಬಹುದು ಎಂದ ಅವರು, ಎಲ್ಲರೂ ಕೂಡಿ ಆಂದೋಲನ ಯಶಸ್ವಿಗೊಳಿಸೋಣ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಸಾರ್ವಜನಿಕರ ಕೆಲಸ ಮಾಡಲು ಹಿಂದೇಟು ಹಾಕಿದ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಅದಕ್ಕೆ ನಮ್ಮ ಬೆಂಬಲವೂ ಇದೆ. ನಾವು ಯಾವುದೇ ರೀತಿಯ ಒತ್ತಡ ತರುವದಿಲ್ಲ ಎಂದು ಹೇಳಿದರು.210 ಅರ್ಜಿಗಳು ಸ್ವೀಕೃತ:

ಪ್ರಜಾಸೇವೆ ಆಂದೋಲನ ಉದ್ಘಾಟನೆಯ ದಿನವೇ ರೈತರ, ಸಾರ್ವಜನಿಕರ ಹಾಗೂ ವಿಕಲಚೇತನರು ಸೇರಿ ವಿವಿಧ ಇಲಾಖೆಗಳಿಗೆ ಒಟ್ಟು 210 ಅರ್ಜಿಗಳು ಸ್ವೀಕೃತವಾಗಿವೆ. ಅವುಗಳಲ್ಲಿ ಬಹುತೇಕ ಅರ್ಜಿಗಳು ಚಡಚಣ ತಾಲೂಕು ಬರಪೀಡಿತ ಘೋಷಣೆ, ತಾಲೂಕು ಕೇಂದ್ರಕ್ಕೆ ಬೇಕಾಗಿರುವ ಮೂಲ ಸೌಕರ್ಯ, ನೀರಾವರಿಗೆ ಸಂಬಂಧಪಟ್ಟ ಅರ್ಜಿಗಳಾಗಿದ್ದವು. ಅವುಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಬುಧವಾರ ಪರಿಶೀಲಿಸಿ ಇತ್ಯರ್ಥಗೊಳಿಸಲಿದ್ದಾರೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಇದೇ ವೇಳೆ ಕಂದಾಯ ಇಲಾಖೆಯಿಂದ ಕೊಡಮಾಡುವ ಸಾಮಾಜಿಕ ಭದ್ರತಾ ಯೋಜನೆಯ ಪ್ರಮಾಣ ಪತ್ರ, ತಾಪಂ ವತಿಯಿಂದ ಜಾಬ್ ಕಾರ್ಡ್‌, ವಿಕಲಚೇತನರಿಗೆ ಯು.ಡಿ.ಐ.ಡಿ. ಕಾರ್ಡ್‌, ಶಿಶು ಅಭಿವೃದ್ಧಿ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಬುಕ್‌ ವಿತರಿಸಲಾಯಿತು.

ಸರ್ವರ್ ಸಮಸ್ಯೆ : ರೈತರು, ಸಾರ್ವಜನಿಕರು ಪ್ರಜಾಸೇವೆ ಆಂದೋಲನದ ಪ್ರಯೋಜನ ಪಡೆಯಲು ಬಂದ ವೇಳೆ ಸರ್ವರ್ ಸಮಸ್ಯೆ ಉಂಟಾಗಿ ಅರ್ಜಿ ಸಲ್ಲಿಸಲು ಬಂದವರಿಗೆ ತೀವ್ರ ತೊಂದರೆಯಾಯಿತು.

ಪ್ರಜಾಸೇವೆ ಆಂದೋಲನದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್. ಗಿರೀಶ, ಜಿಪಂ ಸಿ.ಎಸ್. ಡಾ.ರಿಷಿ ಆನಂದ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಣ್ಣನ ಸಾವಿನ ನಂತ್ರ ತಂಗಿ ಸಾವು!
ಕೃಷ್ಣಾ ಮಡಿಲಲ್ಲಿ ಭಕ್ತಿ ಬೆಳಕು; ವೈಭವದ ಕೃಷ್ಣಾರತಿ