ಶಿಕಾರಿಪುರ ಯಾತ್ರಿನಿವಾಸ ನಿರ್ವಹಣೆ ಮರೆತ ಸರ್ಕಾರ: ಕೃಷ್ಣ ಹುಲಗಿ ಆರೋಪ

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಸಾರ್ವಜನಿಕರ ಆಸ್ತಿ ಆಗಿರುವ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಸ್ಥಳೀಯ ಸಂಘ ಸಂಸ್ಥೆಗೆ ವಹಿಸಿದಲ್ಲಿ ಸರ್ಕಾರಕ್ಕೆ ಆದಾಯದ ಜತೆಗೆ, ಸಾರ್ವಜನಿಕರಿಗೂ ಉಪಯೋಗವಾಗಲಿದೆ. ಯಾತ್ರಿ ನಿವಾಸದಲ್ಲಿನ ಅವ್ಯವಸ್ಥೆಯಿಂದಾಗಿ ಸುತ್ತಮುತ್ತಲಿನ ದೇವಸ್ಥಾನ, ಉದ್ಯಾವನ, ಮಠ ಮಂದಿರದ ಮಹತ್ವ, ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಪರಸ್ಥಳದಿಂದ ನಿತ್ಯ ನೂರಾರು ಭಕ್ತರು ಶ್ರೀ ಹುಚ್ಚುರಾಯನ ದರ್ಶನಕ್ಕೆ ಧಾವಿಸುತ್ತಿದ್ದಾರೆ. ಇವರಿಗೆ ತಂಗಲು ಯಾತ್ರಿ ನಿವಾಸ ಇಲ್ಲದೇ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪಟ್ಟಣದ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನ, ಉದ್ಯಾನವನ, ಪುಷ್ಕರಿಣಿ ಬಳಿ ಅತಿಥಿ ಗಣ್ಯರಿಗಾಗಿ ಕೋಟ್ಯಂತರ ರು. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಿದ್ದಾರೆ. ಆದರೆ, ಸೂಕ್ತ ನಿರ್ವಹಣೆ ಕೊರತೆಯಿಂದ ಕಟ್ಟಡ ಪಾಳುಬಿದ್ದಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಹುಲಗಿ ಆರೋಪಿಸಿದರು.

ಬುಧವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಿ ಕಟ್ಟಡವು, ಅನೈತಿಕ ಚಟುವಟಿಕೆ ತಾಣವಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರ ಹಣ ಪೋಲಾಗಿದೆ. ಇದು ಅಭಿವೃದ್ದಿ ಕಾರ್ಯಗಳಿಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ ಎಂದು ದೂರಿದರು.

ಕಟ್ಟಡದ ಸ್ಥಳದಲ್ಲಿ ಮದ್ಯದ ಬಾಟಲಿ, ಸಿಗರೇಟ್, ಕಾಂಡೋಮ್ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕೊಠಡಿಯ ಬೆಲೆಬಾಳುವ ಬಾಗಿಲು, ಕಿಟಕಿ ಧ್ವಂಸವಾಗಿದೆ. ರೈತರ ಭೂಸ್ವಾಧೀನದಿಂದ ನಿರ್ಮಿಸಲಾದ ಭವನ ದುರುಪಯೋಗ ಆಗುತ್ತಿದೆ. ಜೂಜುಕೋರರ ಅಡ್ಡೆಯಾಗಿದೆ. ಯಾತ್ರಿ ನಿವಾಸ ಆರಂಭದಲ್ಲಿ ಪ್ರವಾಸೋದ್ಯಮ ಇಲಾಖೆ, ನಂತರದಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರ ನಿಗಮ, ಇದೀಗ ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ. ಆದರೆ, ಕಟ್ಟಡ ಹಾಳಾಗಿದ್ದರೂ, ಸಂಬಂಧಿಸಿದ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಜಾಣಗುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಆಸ್ತಿ ಆಗಿರುವ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಸ್ಥಳೀಯ ಸಂಘ ಸಂಸ್ಥೆಗೆ ವಹಿಸಿದಲ್ಲಿ ಸರ್ಕಾರಕ್ಕೆ ಆದಾಯದ ಜತೆಗೆ, ಸಾರ್ವಜನಿಕರಿಗೂ ಉಪಯೋಗವಾಗಲಿದೆ. ಯಾತ್ರಿ ನಿವಾಸದಲ್ಲಿನ ಅವ್ಯವಸ್ಥೆಯಿಂದಾಗಿ ಸುತ್ತಮುತ್ತಲಿನ ದೇವಸ್ಥಾನ, ಉದ್ಯಾವನ, ಮಠ ಮಂದಿರದ ಮಹತ್ವ, ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಪರಸ್ಥಳದಿಂದ ನಿತ್ಯ ನೂರಾರು ಭಕ್ತರು ಶ್ರೀ ಹುಚ್ಚುರಾಯನ ದರ್ಶನಕ್ಕೆ ಧಾವಿಸುತ್ತಿದ್ದಾರೆ. ಇವರಿಗೆ ತಂಗಲು ಯಾತ್ರಿ ನಿವಾಸ ಇಲ್ಲದೇ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಶಿವಯ್ಯ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಇಮ್ರಾನ್, ನಗರಾಧ್ಯಕ್ಷ ಮುಕ್ರಂ, ಪ್ರಕಾಶ್, ಮಹೇಶ್, ತಯ್ಯಬ್ ಅಹ್ಮದ್, ಇದಾಯತ್, ಹುಸೇನ್‌ ಸಾಬ್ ಉಪಸ್ಥಿತರಿದ್ದರು.

- - - ಬಾಕ್ಸ್‌ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ಸಾರ್ವಜನಿಕರ ತೆರಿಗೆ ಹಣ ದುರುಪಯೋಗಕ್ಕೆ ಪ್ರತ್ಯಕ್ಷ ಸಾಕ್ಷಿ ಆಗಿರುವ ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ಸರ್ಕಾರದ ಹಣ ಲೂಟಿ ಆಗಿರುವುದಕ್ಕೆ ಉತ್ತಮ ಸಾಕ್ಷಿಯಾಗಿದೆ. ಮಾಜಿ ಮುಖ್ಯಮಂತ್ರಿ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರ ಸ್ವಕ್ಷೇತ್ರದಲ್ಲಿನ ಸರ್ಕಾರಿ ಕಟ್ಟಡದ ಅವ್ಯವಸ್ಥೆ ರಾಜ್ಯ ಮಟ್ಟದಲ್ಲಿ ಪ್ರತಿಧ್ವನಿಸುವ ಮುನ್ನ ಸ್ಥಳೀಯ ಆಡಳಿತ ಎಚ್ಚೆತ್ತು, ಕಟ್ಟಡ ಸದುಪಯೋಗಕ್ಕೆ ಸೂಕ್ತ ಕ್ರಮ ಜರುಗಿಸಬೇಕು. ಈ ಕೂಡಲೇ ಭವನದ ಸುತ್ತ ಕಾಂಪೌಂಡ್‌ ನಿರ್ಮಿಸಿ, ಸೂಕ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸರ್ಕಾರ ಗಮನಹರಿಸಿ ಕಟ್ಟಡ ಸದ್ಬಳಕೆಯಾಗಲು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಕೃಷ್ಣ ಹುಲಗಿ ಎಚ್ಚರಿಕೆ ನೀಡಿದರು.

- - --6ಕೆಎಸ್‌ಕೆಪಿ3.ಜೆಪಿಜಿ:

ಯಾತ್ರಿ ನಿವಾಸದ ಅವ್ಯವಸ್ಥೆ ಸರಿಪಡಿಸುವಂತೆ ಜಯಕರ್ನಾಟಕ ಜನಪರ ವೇದಿಕೆ ಕೃಷ್ಣ ಹುಲಗಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

Share this article