ಶಿವಮೊಗ್ಗ: "ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು " ಎಂಬ ತತ್ವವೇ ಕಾಂಗ್ರೆಸ್ ಸರ್ಕಾರದ ಮೂಲಮಂತ್ರವಾಗಿದ್ದು, ನಮ್ಮ ಸರ್ಕಾರ ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳು ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಿ, ನಮ್ಮ ಜಿಲ್ಲೆಗೆ 3024 ಕೋಟಿ ರು. ಹಾಗೂ ರಾಜ್ಯದಲ್ಲಿ 1.13 ಲಕ್ಷ ಕೋಟಿ ರು. ಹಣವನ್ನು ತಲುಪಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಹೊಸ ಅಧ್ಯಾಯ ಬರೆದು ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಕಿದ್ವಾಯಿ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಆಸ್ಪತ್ರೆ, ಹೈಟೆಕ್ ಶವಾಗಾರ, ಎಂ.ಸಿ.ಎ ಬ್ಲಾಕ್, ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿನ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಲಯ ಕಟ್ಟಡ, ತುರ್ತು ನಿಗಾಘಟಕ ಕಟ್ಟಡದ ಕಾಮಗಾರಿಗಳು ಅನುಮೋದನೆಗೊಂಡಿದೆ. ಹೊರ ರೋಗಿ ವಿಭಾಗ ಮತ್ತು ಡಾರ್ ಮೆಟ್ರಿ ಬ್ಲಾಕ್, ಟ್ರಾಮಾ ಸೆಂಟರ್ ನಿರ್ಮಾಣ ಕಾಮಗಾರಿಗಳು ಸರ್ಕಾರದ ಹಂತದಲ್ಲಿದ್ದು ಶೀಘ್ರವೇ ಅನುಮೊದನೆ ಪಡೆಯಲಾಗುವುದು ಎಂದು ಹೇಳಿದರು.ಭೂಮಿ ಹಕ್ಕು:
ದಶಕಗಳಿಂದ ಬಾಕಿ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥಕ್ಕೆ ನಾವು ವಿಶೇಷ ಆಸಕ್ತಿ ವಹಿಸಿದ್ದೇವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸಮೀಕ್ಷಾ ಕಾರ್ಯ ಮುಗಿದಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಸಂತ್ರಸ್ತರಿಗೆ ಶಾಶ್ವತ ನ್ಯಾಯ ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಮೂಲ ಸೌಕರ್ಯಗಳ ಅಭಿವೃದ್ಧಿ:ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಸೇರಿದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪಶುಸಂಗೋಪನೆ ಇಲಾಖೆಯಿಂದ ಶಿವಮೊಗ್ಗ ಜಿಲ್ಲೆಗೆ 5 ಪಶು ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಆನುಮೋದನೆ ನೀಡಲಾಗಿದೆ ಎಂದರು.
ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಸ್ಮಾರಕ ಸ್ಥಳವಾದ ''''''''ಬಂಗಾರಧಾಮ''''''''ವೂ ಸೇರಿದಂತೆ ಜಿಲ್ಲೆಯ 64 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಒಂದು ಜಿಲ್ಲೆ ಒಂದು ತಾಣ ಯೋಜನೆ ಅಡಿಯಲ್ಲಿ ಗುಡವಿ ಪಕ್ಷಿಧಾಮವನ್ನು ಅಭಿವೃದ್ಧಿಪಡಿಸಲಾಗುವುದು. ಶ್ರೀ ಚಂದ್ರಗುತ್ತಿ ರೇಣುಕಾಂಬದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲೆಗೆ 19 ಕೆಪಿಎಸ್ ಶಾಲೆ:
ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡುವ ''''''''ಕರ್ನಾಟಕ ಪಬ್ಲಿಕ್ ಶಾಲೆಗಳು'''''''' ನಮ್ಮ ಸರ್ಕಾರದ ಪ್ರಮುಖ ಯೋಜನೆ. ರಾಜ್ಯದಲ್ಲಿ ಹೊಸದಾಗಿ 900 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ 19 ಶಾಲೆಗಳನ್ನು ನೀಡಲಾಗಿದೆ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೊಸ ಕೊಠಡಿಗಳು, ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ 500 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ರಾಜ್ಯ ಜವಳಿ ಮೂಲಸೌಲಭ್ಯ(ವಿದ್ಯುತ್ ಮಗ್ಗಗಳ) ಕೆ.ಚೇತನ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ದೇವಿ ಕುಮಾರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಇತರರಿದ್ದರು.
ಪಥಸಂಚಲನ: ಕನ್ನಡದಲ್ಲಿ ಆದೇಶ
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಪಿಎಸ್ ಕವಾಯತು ದಂಡ ನಾಯಕಿ ಮೇಘಾ ಅಗರ್ವಾಲ್ ಕನ್ನಡದಲ್ಲಿ ಆದೇಶ ನೀಡಿದರು.ಶಿಸ್ತಿನ ಪಥಸಂಚಲನ ಪ್ರದರ್ಶಿಸಿದ ಕಸ್ತೂರಿಬಾ ಬಾಲಿಕಾ ಪ್ರೌಢಶಾಲೆಯ ಎಸ್‌ಸಿಸಿ ತಂಡ ಪ್ರಥಮ, ಗಾಜನೂರು ಮೊರಾರ್ಜಿ ದೇಸಾಯಿ (ಬಾಲಕಿಯರ ತಂಡ)ವಸತಿ ಶಾಲೆ ದ್ವಿತೀಯ, ಜವಾಹರ ನವೋದಯ ವಸತಿ ಬಾಲಕರ ವಿಭಾಗ ಮೂರನೇ ಸ್ಥಾನ ಪಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗೆ ಪ್ರಥಮ, ರಾಮಕೃಷ್ಣ ವಿದ್ಯಾನಿಕೇತನ ಶಾಲೆಗೆ ದ್ವಿತೀಯ, ತೃತೀಯ ಬಹುಮಾನ ಜ್ಞಾನದೀಪ ಶಾಲೆ ಪಡೆಯಿತು.