ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಂಗಳವಾರ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಭೂಕುಸಿತ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೫ರ ಹತ್ತು ಕಿ.ಮೀ. ವ್ಯಾಪ್ತಿಯ ಹಲವೆಡೆ ಭೂಕುಸಿತ ಸಂಭವಿಸಿದ್ದು, ತಡೆಗೋಡೆ ಕಾಮಗಾರಿ ಬಹುತೇಕ ಕಳಪೆಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೆದ್ದಾರಿಯಲ್ಲಿ ನಿತ್ಯ ಭೂಕುಸಿತ ಸಂಭವಿಸುತ್ತಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಕಾಮಗಾರಿ ಬಗ್ಗೆ ನಿಗಾ ವಹಿಸಬೇಕಿರುವ ಸಚಿವರು ಕಾಣೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದಲೇ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.
ಸಚಿವರು ಕಾಲಹರಣ ಮಾಡುತ್ತಿದ್ದಾರೆ:ಈ ಹಿಂದಿನ ಸರ್ಕಾರಗಳು ಮಳೆಗಾಲಕ್ಕೂ ಮುನ್ನ ಸಾಂಭವ್ಯ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಿ ಪರಿಹಾರದ ಮೊತ್ತವನ್ನು ಘೋಷಿಸುವ ಮೂಲಕ ಜಿಲ್ಲಾಡಳಿತ ಸಕ್ರಿಯವಾಗಿ ಕೆಲಸ ಮಾಡುವಂತೆ ಆದೇಶ ನೀಡುತ್ತಿದ್ದವು. ಆದರೆ, ಸಿದ್ದರಾಮಯ್ಯನವರ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಸಭೆ ನಡೆಸದೆ ಕೇವಲ ಎರಡು ವರ್ಷದ ಸಾಧನ ಸಮಾವೇಶ ನಡೆಸುವುದರಲ್ಲಿ ಮೈಮರೆತಿದ್ದು ಸಚಿವರು ಐಪಿಎಲ್ ವೀಕ್ಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದರು.
ನೀತಿ ಆಯೋಗದ ಸಭೆಗೆ ಹೋಗದ ಮುಖ್ಯಮಂತ್ರಿಗಳು ಅನಾವಶ್ಯಕವಾಗಿ ಅನುದಾನ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಪಕ್ಕದ ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಾಜಸ್ಥಾನದಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಹೋಗಲು ಸರ್ಕಾರದ ಪ್ರತಿನಿಧಿಗಳಿಗೆ ಸಮಯವಿದೆ, ನೀತಿ ಆಯೋಗದ ಸಭೆಗೆ ಹೋಗಲು ಸಮಯವಿಲ್ಲವ? ಎಂದು ಪ್ರಶ್ನಿಸಿದರು. ಇದರಿಂದ ಸಿದ್ದರಾಮಯ್ಯನವರಿಗೆ ಯಾವುದೇ ನಷ್ಟವಿಲ್ಲ ನಷ್ಟವೆಲ್ಲ ರಾಜ್ಯದ ಜನರಿಗೆ. ಇಂತಹ ದುರಹಂಕಾರದ ಸರ್ಕಾರವನ್ನು ಕಿತ್ತುಹಾಕುವ ಸಮಯ ಶೀಘ್ರವೇ ಬರಲಿದೆ ಎಂದರು.
ಉಚ್ಚಾಟಿಸಿರುವುದು ಸ್ವಾಗತಾರ್ಹ:
ತಾಲೂಕಿನ ಆನೇಮಹಲ್ ಗ್ರಾಮದ ಅಡಾಣಿಗುಡ್ಡದಲ್ಲಿರುವ ನಿವಾಸಿಗಳನ್ನು ತೆರುವುಗೊಳಿಸುವಂತೆ ಆದೇಶ ನೀಡಿದ್ದರೂ ಏಕೆ ತೆರವುಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ತಹಸೀಲ್ದಾರ್‌ರನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಗ್ರಾ.ಪಂ ಸದಸ್ಯರೊಬ್ಬರು ಪರಿಹಾರ ನೀಡದೇ ಎಲ್ಲಿಗೆ ಹೋಗುವುದು ಪರಿಹಾರ ನೀಡಿರುವ ಕುಟುಂಬಗಳು ಈಗಾಗಲೇ ಸ್ಥಳಾಂತರಗೊಂಡಿವೆ. ಪರಿಹಾರ ನೀಡಿದರೆ ಮನೆಗಳನ್ನು ತೆರವುಗೊಳಿಸಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣವಿದೆ. ಆದರೆ, ನ್ಯಾಯಾಲಯ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಆಕ್ರೋಶಗೊಂಡ ಜಿಲ್ಲಾಧಿಕಾರಿ ನಿವ್ಯಾರ್ರಿ ಮಾತನಾಡಲು, ಮಾತನಾಡಬೇಡಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸಿಮೆಂಟ್ ಮಂಜು ಜನರಿಗೆ ಮಾತನಾಡುವ ಹಾಗೂ ನೋವು ಹೇಳಿಕೊಳ್ಳುವ ಹಕ್ಕಿದೆ ಮಾತನಾಡಲಿ ಬಿಡಿ ಎಂದರು. ಪರಿಹಾರ ನೀಡುವವರೆಗೆ ಮನೆಗಳನ್ನು ತೆರವುಗೊಳಿಸಬೇಡಿ ಎಂದು ಆರ್ ಅಶೋಕ್ ಹೇಳಿದ ನಂತರ ವಾಗ್ವದ ಅಂತ್ಯಗೊಂಡಿತು.
ಲೀಡ್ ಪ್ಯಾಕೇಜ್..................... ಬಿಡುವು ನೀಡಿ ಮತ್ತೆ ಸುರಿದ ಜಡಿಮಳೆ
ಮಂಗಳವಾರ ಮುಂಜಾನೆಯಿಂದ ಮಧ್ಯಾಹ್ನದವರಗೆ ಬಿಡುವು ನೀಡಿದ್ದ ಮಳೆ ಕೆಲಕಾಲ ಬಿಸಿಲಿನ ದರ್ಶನವನ್ನು ಮಾಡಿಸಿತ್ತು. ಆದರೆ ಮಧ್ಯಾಹ್ನದ ನಂತರ ಆಕಾಶವೇ ಬಿರುಕುಬಿಟ್ಟಂತೆ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿದ್ದರೆ ಸಾಕಷ್ಟು ಮನೆಗಳಿಗೂ ಹಾನಿಯಾಗಿದೆ. ಅತ್ತಿಹಳ್ಳಿ ಗ್ರಾಮದಲ್ಲಿ ಮನೆಯೊಂದು ಮುರಿದು ಬಿದ್ದಿದ್ದು ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಹಾನುಬಾಳ್ ಗ್ರಾಮದ ಆರೋಗ್ಯ ಕೇಂದ್ರದ ತಡೆಗೋಡೆ ಕುಸಿದಿದೆ. ಕೆಸಗಾನಹಳ್ಳಿ ಗಾಮದ ಕಮಲ ಎಂಬುವವರ ಮನೆ ಮೇಲ್ಚಾವಣಿ ಸಂಪೂರ್ಣ ಹಾರಿಹೋಗಿದೆ. ಕೆಲಗಳಲೆ ಗ್ರಾಮದ ಕವಿತಾ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಗೊಂಡಿದೆ. ದೇಖ್ಲಾ ಗ್ರಾಮದ ಮನೆಯೊಂದರ ಗೋಡೆ ಕುಸಿದು ಹಾನಿ ಸಂಭವಿಸಿದೆ. ಹೆನ್ನಲಿ ಗ್ರಾಮದಲ್ಲಿ ತಡೆಗೋಡೆಯೊಂದು ಕುಸಿದು ಹಾನಿಸಂಭವಿಸಿದೆ. ಕೃಷ್ಣಪುರ ಗ್ರಾಮದಲ್ಲಿ ತೆರದ ಬಾವಿಯ ಕಲ್ಲುಕಟ್ಟಡ ಕುಸಿದಿದೆ. ಇದಲ್ಲದೆ ಸಾಕಷ್ಟು ವಿದ್ಯುತ್ ಕಂಬಗಳು ಧರೆಗುರುಳಿದ್ದು ತಾಲೂಕಿನ ಸಾಕಷ್ಟು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.ಫೋಟೋ