ಮುಕ್ತ ಮಾರುಕಟ್ಟೆ ಬೆಲೆಗಳಿಗಿಂತ ಪ್ರತಿಶತ 50ರಿಂದ 90ರಷ್ಟು ಅಗ್ಗದ ದರದಲ್ಲಿ ಔಷಧಿ ಲಭ್ಯವಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನ ಸ್ಥಗಿತಗೊಳಿಸುವ ಆದೇಶ ಹೊರಡಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
ಗದಗ: ಮುಕ್ತ ಮಾರುಕಟ್ಟೆ ಬೆಲೆಗಳಿಗಿಂತ ಪ್ರತಿಶತ 50ರಿಂದ 90ರಷ್ಟು ಅಗ್ಗದ ದರದಲ್ಲಿ ಔಷಧಿ ಲಭ್ಯವಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನ ಸ್ಥಗಿತಗೊಳಿಸುವ ಆದೇಶ ಹೊರಡಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.ಜಿಲ್ಲಾ ಆಸ್ಪತ್ರೆ ಮುಂದೆ ಶನಿವಾರ ಜಿಲ್ಲಾ ಬಿಜೆಪಿ ಹಾಗೂ ಗದಗ ಗ್ರಾಮೀಣ ಮಂಡಲ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೋಗ ಯಾವುದೇ ಇರಲಿ, ಪೂರೈಕೆಯಲ್ಲಿರುವ ಔಷಧಿಯನ್ನೇ ವೈದ್ಯರು ಬರೆದು ಕೊಡುವ ಅನಿವಾರ್ಯ ಪರಿಸ್ಥಿತಿಯನ್ನ ಸರ್ಕಾರ ನಿರ್ಮಾಣ ಮಾಡಿದೆ. ಅವಶ್ಯಕ ಔಷಧಿಗಳನ್ನು ಬೇಡಿಕೆ ತಕ್ಕಂತೆ ಒದಗಿಸಿದೆ. ಒಂದೇ ತೆರನಾದವುಗಳನ್ನು ಪೂರೈಸುತ್ತಿರುವುದು ದುರ್ದೈವದ ಸಂಗತಿ. ಹೀಗಾದರೆ ರೋಗಿಯ ಕಾಯಿಲೆ ವಾಸಿಯಾಗುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು. ಜನೌಷಧಿ ಕೇಂದ್ರಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸ್ವಾಮ್ಯದ ಸಂಸ್ಥೆಗಳೆ ಔಷಧಿ ಪೂರೈಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಪ್ರಮಾಣಿಕೃತವಾಗಿವೆ. ಮಧುಮೇಹ, ಹೃದಯ ಸಂಬಂಧಿ ಮುಂತಾದ ದೀರ್ಘ ಅವಧಿ ಕಾಯಿಲೆಗಳ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ವಿತರಣೆ ಆಗದಿದ್ದಾಗ ರೋಗಿಯು ಅಗ್ಗದ ದರದಲ್ಲಿ ಜನೌಷಧಿ ಕೇಂದ್ರಗಳಲ್ಲಿ ಖರೀದಿಸುತ್ತಾರೆ. ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಿ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿ ಜೊತೆಗೆ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಬಾರದೆಂದು ಆಗ್ರಹಿಸಿದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜನಹಿತವನ್ನು ಕಾಪಾಡಬೇಕಾದ ಸರ್ಕಾರವೇ ಜನರ ರಕ್ತ ಹೀರುತ್ತಿರುವದು ತುಂಬಾ ನಾಚಿಕೆ ಸಂಗತಿ. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಹೆಚ್ಚಾಗಿ ಬಡವರು, ಆರ್ಥಿಕ ಅನುಕೂಲ ಇಲ್ಲದವರು, ಅಂತವರ ಬವಣೆ ಅರಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 16 ವರ್ಷಗಳ ಹಿಂದೆಯೇ ಇಂತಹ ಯೋಜನೆಯನ್ನು ಜಾರಿಗೆ ತಂದಿದ್ದು ದೇಶದಾದ್ಯಂತ ಹದಿನೈದು ಸಾವಿರಕ್ಕಿಂತಲೂ ಹೆಚ್ಚು ಕೇಂದ್ರಗಳು ತೆರೆಯಲ್ಪಟ್ಟಿವೆ. ಕೋಟ್ಯಂತರ ಜನರಿಗೆ ಇದರ ಸದುಪಯೋಗವಾಗಿದೆ. ಮೊದಲಿನಂತೆ ಜನೌಷಧಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಔಷಧಿ ಲಾಬಿಗೆ ಮಣಿದ ರಾಜ್ಯ ಸರ್ಕಾರ ಹಣ ಮಾಡಿಕೊಳ್ಳುವ ಉದ್ದೇಶದಿಂದ ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದು ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಇನ್ನು ಹೆಚ್ಚಿನ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡರಾದ ಶ್ರೀಪತಿ ಉಡುಪಿ, ರವಿ ದಂಡಿನ, ಬಸವಣ್ಣೆಪ್ಪ ಚಿಂಚಲಿ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ನಗರಸಭಾ ಸದಸ್ಯರಾದ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮುಂತಾದವರು ಮಾತನಾಡಿದರು.ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ವಿನಾಯಕ ಮಾನ್ವಿ, ಅಶೋಕ ಸಂಕಣ್ಣವರ, ವಿದ್ಯಾವತಿ ಗಡಗಿ, ಲಕ್ಷ್ಮಿ ಕಾಕಿ, ವಿಜಯಲಕ್ಷ್ಮಿ ಮಾನ್ವಿ, ಸುಧೀರ ಕಾಟಿಗೇರ, ನಾಗರಾಜ ತಳವಾರ, ಭದ್ರೇಶ ಕುಸಲಾಪೂರ, ವಾಯ್.ಪಿ.ಅಡನೂರ, ಮಂಜುನಾಥ ಮುಳಗುಂದ, ಎಂ.ಎಂ.ಹಿರೇಮಠ, ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಬಿ.ಎಸ್.ಚಿಂಚಲಿ, ನಿಂಗಪ್ಪ ಹುಗ್ಗಿ, ಪಕ್ಕಿರೇಶ ರಟ್ಟಿಹಳ್ಳಿ, ವಿನೋದ ಹಂಸನೂರ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.