ಕನ್ನಡಪ್ರಭ ವಾರ್ತೆ, ಕಡೂರು
ಶನಿವಾರ ಕಡೂರು ಪಟ್ಟಣದ ಪ್ರವಾಸಿಮಂದಿರದಲ್ಲಿ ಮೂಡಿಗೆರೆಯ ‘ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟಕ್ಕೆ ಕಡೂರಿ ನಿಂದ ನೂರಾರು ಸಂತ್ರಸ್ತ ರೈತರ ಜೊತೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಈ ಹಿಂದೆ ಶಾಸಕರಾಗಿದ್ದ ಡಾ.ವೈ.ಸಿ.ವಿಶ್ವನಾಥ್, ಬೆಳ್ಳಿ ಪ್ರಕಾಶ್ ಮತ್ತು ನನ್ನ ಅವಧಿಯಲ್ಲಿ ನೀಡಿದ ಮಂಜೂರಾತಿ ಸರ್ಕಾರ ರದ್ದುಪಡಿಸಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಮಂಜೂರಾತಿ ನೀಡಿದ ಭೂಮಿ ಅರಣ್ಯದಲ್ಲಿದೆ. ಯಾವುದೋ ಅವ್ಯವಹಾರ ನಡೆದಿದೆ ಎಂಬ ಕಾರಣ ನೀಡಿ ರದ್ದುಪಡಿಸಿದೆ. ಇದರಿಂದ ಒಂದಿಷ್ಟು ಭೂಮಿ ಪಡೆದ ಬಡ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಾಗುವಳಿ ಯಿಂದ ಬಂದ ಜಮೀನು ನಮ್ಮದಾಗಿಯೇ ಉಳಿಯಬೇಕು ಎಂಬ ನಿಟ್ಟಲ್ಲಿ ಹೋರಾಟ ಅನಿವಾರ್ಯ ವಾಗಲಿದೆ. ಶಾಸಕಾಂಗದಿಂದ ನ್ಯಾಯ ದೊರಕುವ ವಿಶ್ವಾಸ ಕುಂದಿದೆ. ಸಂತ್ರಸ್ತ ರೈತರ ಜೊತೆಗೂಡಿ ಮೂಡಿಗೆರೆಯಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಎಂಬ ರೈತ ಸಮಾವೇಶ ಆಯೋಜಿಸಲಾಗಿದೆ. ರೈತರಿಂದ ನ್ಯಾಯಾಲಯಕ್ಕೆ ವಕಾಲತ್ತು ಹಾಕುವ ಮೂಲಕ ನ್ಯಾಯಾಂಗದ ಬಾಗಿಲು ತಟ್ಟುವ ಕಾರ್ಯ ಮಾಡುತ್ತಿದ್ದೇವೆ. ಈ ಹೋರಾಟ ಪಕ್ಷಾತೀತ ಹಾಗೂ ರಾಜಕೀಯೇತರವಾಗಿದೆ. ನಮ್ಮ ಗಮನ ಮುಖ್ಯವಾಗಿ ರೈತರ ಕಷ್ಟಕ್ಕೆ ನ್ಯಾಯಾಂಗದ ಮೂಲಕ ಪರಿಹಾರ ಮಾಡಿಕೊಳ್ಳುವುದಾಗಿದೆ ಎಂದರು.ನ್ಯಾಯಾಂಗ ಹೋರಾಟ ಮಾತ್ರವಲ್ಲ ಶಾಸಕಾಂಗದ ಮೇಲೂ ಒತ್ತಡ ತರಲು ರೂಪು ರೇಷೆ, ಕಡೂರಿನಲ್ಲಿ ಸಂತ್ರಸ್ತ ರೈತರ ಸಮಾವೇಶವನ್ನು ರೂಪುಗೊಳಿಸಲಾಗುತ್ತದೆ. ಸರ್ಕಾರದ ನಡೆ ಖಂಡಿಸಿ ನಡೆಯುತ್ತಿರುವ ಪಕ್ಷಾತೀತ ಹೋರಾಟ ನ್ಯಾಯ ಸಿಗುವವರೆಗೂ ಮುಂದುವರಿಯುತ್ತದೆ ಎಂದರು.3-4 ದಶಕದಿಂದ ರೈತ ಪರ ಹೋರಾಟ ಕಂಡಿದ್ದೇನೆ. ರೈತರ ವಿರುದ್ಧ ಹೋದ ಯಾವ ಸರ್ಕಾರವೂ ಯಶಸ್ವಿಯಾಗಿಲ್ಲ. ಈ ಹೋರಾಟ ಯಶಸ್ವಿಯಾಗುತ್ತದೆ ಎಂಬ ಆತ್ಮವಿಶ್ವಾಸ ನಮ್ಮದಾಗಿದೆ. ನ್ಯಾಯಾಂಗದ ಮೇಲೆ ವಿಶ್ವಾಸ ವಿಟ್ಟು ಕಡೂರಿನಿಂದ 2500 ರೈತರೂ ಸೇರಿದಂತೆ ಮೂಡಿಗೆರೆ ಎಲ್ಲ ರೈತ ಸಂತ್ರಸ್ತರಿಂದ ನ್ಯಾಯಾಲಯಕ್ಕೆ ವಕಾಲತ್ತು ಹಾಕಿಸುವ ಕಾರ್ಯ ನಡೆಯಲಿದೆ. ಈ ಹೋರಾಟದ ಕುರಿತು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅವರಿಗೂ ವಿವರಿಸಲಾಗಿದೆ ಎಂದರು. ಪ್ರವಾಸಿ ಮಂದಿರದಿಂದ ಕನಕ ವೃತ್ತದವರೆಗೆ ಮಾಜಿ ಶಾಸಕ ದತ್ತ ನೇತೃತ್ವದಲ್ಲಿ ಸಂತ್ರಸ್ತ ರೈತರು ಕಾಲ್ನಡಿಗೆ ಮೂಲಕ ಮೂಡಿಗೆರೆಗೆ ತೆರಳಿದರು. ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಚ್. ಪ್ರೇಮ್‌ಕುಮಾರ್, ಯರದಕೆರೆ ಎಂ.ರಾಜಪ್ಪ, ಬಿ.ಟಿ.ಗಂಗಾಧರ ನಾಯ್ಕ, ರತ್ನ, ಅನುಸೂಯ, ಪ್ರಭು, ಸಂತೋಷ್, ಚಂದು, ಸಂಜೀವ್, ಸತೀಶ್, ಶ್ರೀನಿವಾಸ್, ಧನುಷ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡನಕಟ್ಟೆಹಳ್ಳಿ ಚಿದಾನಂದ ಮೂರ್ತಿ, ಕಡೂರು ಕ್ಷೇಮಾಭಿವೃದ್ಧಿ ವೇದಿಕೆ ಅಧ್ಯಕ್ಷ ಕಳ್ಳಿಹೊಸಹಳ್ಳಿ ಹರೀಶ್ , ಸೇರಿದಂತೆ ರೈತ ಮುಖಂಡರು, ಸಂತ್ರಸ್ತ ರೈತರು ಇದ್ದರು.
23ಕೆಕೆಡಿಯು1.ನಮ್ಮ ಭೂಮಿ ನಮ್ಮ ಹಕ್ಕು ಹೋರಾಟಕ್ಕೆ ಕಡೂರಿನಿಂದ ಸಂತ್ರಸ್ತ ರೈತರ ಜೊತೆ ಮೂಡಿಗೆರೆಗೆ ತೆರಳುವ ಮುನ್ನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿದರು. ಬಿದರೆ ಜಗದೀಶ್, ಯರದಕೆರೆ ಎಂ ರಾಜಪ್ಪ, ಪ್ರೇಮ್‌ಕುಮಾರ್, ಹರೀಶ್ ಮತ್ತಿತರಿದ್ದರು.