ಕಾಶ್ಮೀರಿ ಹಿಂದೂಗಳಿಗೆ ಸರ್ಕಾರ ರಕ್ಷಣೆ, ಸವಲತ್ತು ಒದಗಿಸಲಿ

KannadaprabhaNewsNetwork |  
Published : Jul 09, 2025, 12:18 AM IST
ಪ್ರಮೋದ ಮುತಾಲಿಕ್‌. | Kannada Prabha

ಸಾರಾಂಶ

ಈ ಸಮಾವೇಶದಲ್ಲಿ ಮುಖ್ಯವಾಗಿ ಐದು ಲಕ್ಷ ಕಾಶ್ಮೀರಿ ಹಿಂದೂಗಳಿಗೆ ಸವಲತ್ತುಗಳು ಒದಗಿಸಿ, ರಕ್ಷಣೆ ನೀಡುವುದು, ಹಿಂದೂಗಳ ಮನೆ, ತೋಟ, ಗುಡಿ, ಮಠ ಹಾಗೂ ಪವಿತ್ರ ಕ್ಷೇತ್ರಗಳನ್ನು ಒದಗಿಸಬೇಕು. ಸರ್ಕಾರದಿಂದ ಮನೆಗೆ ಶಸ್ತ್ರ ಒದಗಿಸುವುದು, ಕಾಶ್ಮೀರಿ ಹಿಂದೂಗಳಿಗೆ ರಾಜಕೀಯ ಪ್ರತಿನಿಧಿ ಮೀಸಲು ಕೊಡಬೇಕು ಎಂದು ಒತ್ತಾಯಿಸಲಾಗುವುದು.

ಹುಬ್ಬಳ್ಳಿ: ಕಳೆದ 35 ವರ್ಷದಿಂದ ಕಾಶ್ಮೀರದ ಹಿಂದೂಗಳ ಸುರಕ್ಷತೆಗಾಗಿ ಹೋರಾಡುತ್ತಿರುವ ಪನೂನು ಕಾಶ್ಮೀರ ಸಂಘಟನೆಗೆ ಬೆಂಬಲಿಸಲು ಜು. 13ರಂದು ಕಾಶ್ಮೀರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 35 ವರ್ಷಗಳಿಂದ ಐದು ಲಕ್ಷಕ್ಕೂ ಅಧಿಕ ಕಾಶ್ಮೀರಿ ಹಿಂದೂಗಳು ಅತಂತ್ರರಾಗಿದ್ದಾರೆ. ಅವರು ತಮ್ಮ ಮೂಲ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಮನೆ, ದೇವಸ್ಥಾನ ಪುನಃ ನಿರ್ಮಿಸಲಾಗುತ್ತಿಲ್ಲ. ಅಷ್ಟೇ ಅಲ್ಲದೇ ಅವರು ತೋಟ, ಗದ್ದೆಗಳನ್ನು ಪಡೆಯಲಾಗುತ್ತಿಲ್ಲ, ಅಲ್ಲಿನ ಕಾಶ್ಮೀರಿ ಹಿಂದೂಗಳು ಸಂತ್ರಸ್ತರಾಗಿದ್ದಾರೆ. ಅವರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ, ಈ ದಿಸೆಯಲ್ಲಿ ಕೇಂದ್ರ ಹಾಗೂ ಸ್ಥಳೀಯ ರಾಜ್ಯ ಸರ್ಕಾರ ಕಾಶ್ಮೀರಿ ಹಿಂದೂಗಳಿಗೆ ರಕ್ಷಣೆ ಹಾಗೂ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಮಾವೇಶದಲ್ಲಿ ಮುಖ್ಯವಾಗಿ ಐದು ಲಕ್ಷ ಕಾಶ್ಮೀರಿ ಹಿಂದೂಗಳಿಗೆ ಸವಲತ್ತುಗಳು ಒದಗಿಸಿ, ರಕ್ಷಣೆ ನೀಡುವುದು, ಹಿಂದೂಗಳ ಮನೆ, ತೋಟ, ಗುಡಿ, ಮಠ ಹಾಗೂ ಪವಿತ್ರ ಕ್ಷೇತ್ರಗಳನ್ನು ಒದಗಿಸಬೇಕು. ಸರ್ಕಾರದಿಂದ ಮನೆಗೆ ಶಸ್ತ್ರ ಒದಗಿಸುವುದು, ಕಾಶ್ಮೀರಿ ಹಿಂದೂಗಳಿಗೆ ರಾಜಕೀಯ ಪ್ರತಿನಿಧಿ ಮೀಸಲು ಕೊಡಬೇಕು ಎಂದು ಒತ್ತಾಯಿಸಲಾಗುವುದು. ಅಂದು ಮುಂದಿನ ಹೋರಾಟದ ಕುರಿತಾಗಿ ಪ್ರಮುಖ ಚರ್ಚೆಗಳನ್ನು ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾಕ್, ಬಾಂಗ್ಲಾ ಜತೆ ಆಟ ನಿಷೇಧಿಸಿ: ಪೆಹಲ್ಗಾಂನಲ್ಲಿ ನಡೆದ ಘಟನೆ ನಂತರ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಎಲ್ಲ ರೀತಿಯ ಬಹಿಷ್ಕಾರ ಹಾಕಿದೆ. ಹೀಗಿರುವಾಗ ಪಾಕಿಸ್ತಾನದ ಜತೆ ಹಾಕಿ ಆಟವನ್ನು, ಬಾಂಗ್ಲಾದೇಶದ ಜತೆಗೆ ಕ್ರಿಕೆಟ್ ಆಟವಾಡಲು ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಪೆಹಲ್ಗಾಂ ಗಾಯ, ನೋವು ಇನ್ನೂ ಮಾಯವಾಗಿಲ್ಲ, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಆಟದ ಮೂಲದ ಹಣಕಾಸಿನ ವ್ಯವಹಾರ ಮುಖ್ಯವೋ? ಅಥವಾ ಜನರ ಸುರಕ್ಷತೆ ಮುಖ್ಯವೋ? ಎಂಬುದನ್ನು ಸರ್ಕಾರ ಉತ್ತರ ನೀಡಬೇಕು. ಕೇಂದ್ರ ಸರ್ಕಾರದ ಸ್ವಾರ್ಥಕ್ಕೆ ಇನ್ನೆಷ್ಟು ಹಿಂದೂಗಳ ನೆತ್ತರು ಬೇಕು ಎಂದು ಹರಿಹಾಯ್ದರು.

ಇನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಶೋಚನೀಯವಾಗಿದೆ. ಕೂಡಲೇ ಸರ್ಕಾರ ಈ ಎರಡು ದೇಶದ ಜೊತೆಗೆ ಆಟವನ್ನು ನಿಷೇಧ ಮಾಡಬೇಕು ಎಂದರು.

ನೇಹಾ ಹಿರೇಮಠ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಆದರೂ ಕೊಲೆ ಆರೋಪಿಗೆ ಶಿಕ್ಷೆ ಆಗಿಲ್ಲ. ಕೊಲೆ ನಡೆದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ, ಮುಸ್ಲಿಂ ಅಡ್ವೋಕೇಟ್ ಗಳು ಆರೋಪಿ ಪರವಾಗಿ ವಾದ ಮಾಡಲು ಯಾರೂ ಮುಂದೆ ಬರಬಾರದು ಎಂದು ಹೇಳಿದ್ದಾರೆ. ಆದರೆ, ಇದೀಗ ಕೊಲೆ ಆರೋಪಿಗೆ ಜಾಮೀನು ಕೊಡಿಸಲು ಮುಸ್ಲಿಂ ವಕೀಲರು ಮುಂದೆ ಬಂದಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕಲ್ಲಿ ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ಅಪ್ಪಣ್ಣ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ್, ಮಹಾನಗರ ಅಧ್ಯಕ್ಷೆ ಪೂರ್ಣಿಮಾ ಕಾಡಮ್ಮನವರ ಸೇರಿದಂತೆ ಹಲವರಿದ್ದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?