ಜಾತಿ, ಆದಾಯ ಪ್ರಮಾಣಪತ್ರ ನಿರಾಕರಣೆ: ಹಾಸನ ಡಿಸಿಗೆ ದಂಡ

KannadaprabhaNewsNetwork |  
Published : Jul 09, 2025, 12:18 AM IST

ಸಾರಾಂಶ

ಬೆಂಗಳೂರು: ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗೆ ಗಂಡನ ಆದಾಯ ಪ್ರಮಾಣ ಪರಿಗಣಿಸಿ ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಪ್ರಕರಣ ಸಂಬಂಧ ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷ (ಜಿಲ್ಲಾಧಿಕಾರಿ) ಮತ್ತು ಸದಸ್ಯರಿಗೆ ಎರಡು ಲಕ್ಷ ರು. ದಂಡ ವಿಧಿಸಿ ಹೈಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

ಬೆಂಗಳೂರು: ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗೆ ಗಂಡನ ಆದಾಯ ಪ್ರಮಾಣ ಪರಿಗಣಿಸಿ ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಪ್ರಕರಣ ಸಂಬಂಧ ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷ (ಜಿಲ್ಲಾಧಿಕಾರಿ) ಮತ್ತು ಸದಸ್ಯರಿಗೆ ಎರಡು ಲಕ್ಷ ರು. ದಂಡ ವಿಧಿಸಿ ಹೈಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ. ತಮಗೆ ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಚನ್ನರಾಯಪಟ್ಟ ತಾಲೂಕು ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಮತ್ತು ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯ ಕ್ರಮ ಪ್ರಶ್ನಿಸಿ ಬಿ.ಎನ್‌.ಮುತ್ತುಲಕ್ಷ್ಮಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಮಹಿಳಾ ಅಭ್ಯರ್ಥಿಯ ಜಾತಿ, ಆದಾಯ ಪ್ರಮಾಣ ಪತ್ರ ವಿತರಿಸುವಾಗ ತಂದೆಯ ಆದಾಯ ಪರಿಗಣಿಸಬೇಕು ಎಂದು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಹಲವು ತೀರ್ಪು ನೀಡಿವೆ. ಪ್ರಕರಣದಲ್ಲಿ ಅರ್ಜಿದಾರರ ಪತಿ ಆದಾಯ ಹೆಚ್ಚಿರುವ ಕಾರಣ ನೀಡಿ, ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ನಿರಾಕರಿಸಲಾಗಿದೆ. ಸ್ಪಷ್ಟವಾದ ಕಾನೂನುಗಳಿದ್ದರೂ ಅವುಗಳನ್ನು ಪಾಲಿಸದೆ ಅಧಿಕಾರಿ ವರ್ಗ ಅರಿವಿನ ಕೊರತೆಯಿಂದ ಬಳಲುತ್ತಿದೆ. ಅಜ್ಞಾನದಿಂದ ಮುಚ್ಚಿಹೋಗಿರುವ ಅಧಿಕಾರಿಗಳ ಕರ್ತವ್ಯಲೋಪವನ್ನು ನ್ಯಾಯಾಲಯ ಮನ್ನಿಸುವುದಿಲ್ಲ. ಅಧಿಕಾರ ವರ್ಗದ ಈ ನಡೆ ಅಕ್ಷಮ್ಯ. ಹಾಗಾಗಿ, ಅರ್ಜಿದಾರರಿಗೆ ಪರಿಹಾರ ನೀಡಲು ಮಾತ್ರವಲ್ಲದೆ ಸಾರ್ವಜನಿಕ ಹುದ್ದೆ ಹೊಂದಿರುವ ಪ್ರತಿಯೊಬ್ಬರಿಗೆ ಎಚ್ಚರಿಕೆಯ ಕರೆಯಾಗಲಿ ಎಂಬ ಉದ್ದೇಶದಿಂದ ದಂಡ ವಿಧಿಸಲಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಅಲ್ಲದೆ, ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಮತ್ತು ಸದಸ್ಯರು, ಎರಡು ಲಕ್ಷ ರು. ದಂಡ ಮೊತ್ತವನ್ನು ನಾಲ್ಕು ವಾರದಲ್ಲಿ ಅರ್ಜಿದಾರರಿಗೆ ಸರ್ಕಾರದ ನಿಧಿಯ ಬದಲು ತಮ್ಮ ಸ್ವಂತ ನಿಧಿಯಿಂದ ಪಾವತಿಸಬೇಕು. ಅರ್ಜಿದಾರರು ವೇತನ ಮತ್ತು ಇತರೆ ಹಣಕಾಸು ಸೌಲಭ್ಯ ಹೊರತುಪಡಿಸಿ ಇನ್ನಿತರ ಎಲ್ಲ ಸಾಂದರ್ಭಿಕ ಸವಲತ್ತು ಪಡೆಯಲು ಅರ್ಹರಾಗಿದ್ದಾರೆ ಎಂದು ಪೀಠ ಆದೇಶಿಸಿದೆ.

ಪ್ರಕರಣದ ವಿವರ:

ರಾಜ್ಯ ಪ್ರಾಸಿಕ್ಯೂಷನ್‌ ನಿರ್ದೇಶನಾಲಯ 181 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ 2019ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. 3ಎ ಪ್ರವರ್ಗದ ಅಡಿ ಮುತ್ತುಲಕ್ಷ್ಮೀ ಆಯ್ಕೆಯಾಗಿದ್ದರು. ಆಯ್ಕೆಯಾದ ನಂತರ ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಸಿಂಧುತ್ವ ಪ್ರಮಾಣ ಪತ್ರ ವಿತರಿಸುವಾಗ ಅರ್ಜಿದಾರೆಯ ಪತಿ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಿದ್ದಾರೆ. ಇವರಿಬ್ಬರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರು. ಮೀರಿರುವ ಕಾರಣ ಮುತ್ತುಲಕ್ಷ್ಮಿ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅನರ್ಹರಾಗಿದ್ದಾರೆ ಎಂದು ತಿಳಿಸಿ, ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ವಿತರಿಸಲು ಚನ್ನರಾಯಪಟ್ಟಣ ತಾಲೂಕು ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ನಿರಾಕರಿಸಿತ್ತು.

ಈ ಆದೇಶ ಪ್ರಶ್ನಿಸಿ ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದ ಮುತ್ತುಲಕ್ಷ್ಮಿ, ಕಾನೂನು ಪ್ರಕಾರ ತಂದೆ ಆದಾಯ ಪರಿಗಣಿಸಬೇಕು. ನನ್ನ ಗಂಡನ ಆದಾಯ ಪರಿಗಣಿಸಬಾರದು. ಆದ್ದರಿಂದ, ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ವಿತರಿಸಲು ನಿರಾಕರಿಸಿದ ಕ್ರಮ ರದ್ದುಪಡಿಸಬೇಕು ಎಂದು ಕೋರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!