ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ವಜ್ರಖಚಿತ ಕಿರೀಟ ಸಮರ್ಪಿಸಿ ತಮ್ಮದೇ ಹೆಸರಲ್ಲಿ ಭಕ್ತಿಪೂರ್ವಕವಾಗಿ ಆರಂಭಿಸಿರುವ ಆಷಾಢ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಾಲ್ಕನೇ ತಿರುನಾಳ್ ಅಂಗವಾಗಿ ಶ್ರೀದೇವಿ- ಭೂದೇವಿ ಸಮೇತ ಗರುಡಾರೂಢನಾದ ಶ್ರೀಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ತೊಡಿಸಿ ವೈಭವದಿಂದ ತಿರುವೀದಿಗಳಲ್ಲಿ ಉತ್ಸವ ನೆರವೇರಿಸಲಾಯಿತು.
ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ಸಂಜೆ 5 ಗಂಟೆ ವೇಳೆಗೆ ಬಂದ ಶ್ರೀ ಕೃಷ್ಣರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಪಲ್ಲಕ್ಕಿ ಮೂಲಕ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು.ರಾತ್ರಿ 7 ಗಂಟೆಗೆ ಕೃಷ್ಣರಾಜ ಒಡೆಯರ್ ಮಂಟಪದಲ್ಲಿ ಪಾರ್ಕಾವಣೆ ಮಾಡಿ ವಜ್ರಖಚಿತ ಕೃಷ್ಣರಾಜಮುಡಿ ಮತ್ತು ಗಂಡಭೇರುಂಡ ಪದಕವನ್ನು ಸ್ಥಾನೀಕರು, ಅರ್ಚಕ ಪರಿಚಾರಕರ ವಶಕ್ಕೆ ನೀಡಲಾಯಿತು.
ಭವ್ಯ ದಿವ್ಯಪ್ರಬಂಧ ಪಾರಾಯಣ ಹಾಗೂ ಯತಿರಾಜದಾಸರ್ ಗುರುಪೀಠದ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ನಿಯೋಜಿಸಿದ್ದ ವಿಶೇಷ ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಕೃಷ್ಣರಾಜಮುಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ನಂತರ ದೇವಾಲಯದಲ್ಲಿ ಪಡಿಯೇತ್ತ ಕಾರ್ಯಕ್ರಮಗಳು ನಡೆದವು. ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಸ್ಥಾನಾಚಾರ್ಯ ಮತ್ತು ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ, ಪರಿಚಾರಕ ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ರಾತ್ರಿ ೧೦ಗಂಟೆಯವರೆಗೆ ನಡೆದ ಉತ್ಸವ ಭಕ್ತರ ಮನಸೂರೆಗೊಂಡಿತು. ಕೃಷ್ಣರಾಜಮುಡಿ ಉತ್ಸವಕ್ಕೂ ಮುನ್ನ ಸಂಜೆ ನಾಗವಲ್ಲಿ ಮಹೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು.
ಮೈಸೂರು ಅರಸ ಮುಮ್ಮಡಿ ಕೃಷ್ಣ ರಾಜ ಒಡೆಯರ್ ತಮ್ಮ ಮನೆದೇವರಾದ ಶ್ರೀಚೆಲುವನಾರಾಯಣ ಸ್ವಾಮಿಗೆ ಭಕ್ತಿಯಿಂದ ಅರ್ಪಿಸಿರುವ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾಂಛನವುಳ್ಳ ಕೃಷ್ಣರಾಜಮುಡಿ, ಮತ್ತು ಗಂಡಭೇರುಂಡ ಪದಕ ದರ್ಶನ ಮಾಡಿದ ಭಕ್ತರ ಸಂಭ್ರಮೋಲ್ಲಾಸ ಮೇರೆ ಮೀರಿತ್ತು.
-------------