ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮದಲ್ಲಿ ಜಾತ್ರ ಮಹೋತ್ಸವ ಅಂಗವಾಗಿ ಕಳೆದ ೪ ದಿನಗಳಿಂದ ದೇವರ ಮೂರ್ತಿಗಳಿಗೆ ವಿವಿಧ ಪುಷ್ಪಲಂಕಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು. ಭಾನುವಾರ ಬೆಳಿಗ್ಗೆ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ತರಹೇವಾರಿ ಹೂಗಳಿಂದ ಮಾಡಿದ ಅಲಂಕಾರ ಎಲ್ಲರ ಗಮನ ಸೆಳೆಯಿತು. ನಂತರ ಅಲಂಕೃತ ರಥದಲ್ಲಿ ಶ್ರೀ ಉಡುಸಲಮ್ಮ ದೇವಿಯವರನ್ನು ಆರೋಹಣ ಮಾಡಲಾಯಿತು. ಕ್ಷೇತ್ರದ ಚಿಕ್ಕಯ್ಯ ಸ್ವಾಮಿ ಹಾಗೂ ಧೂತರಾಯ ಸ್ವಾಮಿಯವರು ರಥಕ್ಕೆ ಪೂಜೆ ಸಲ್ಲಿಸಿ ಗಾಲಿಗಳಿಗೆ ತೆಂಗಿನಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಿ ನಾಮಸ್ಮರಣೆಯೊಂದಿಗೆ ಭಕ್ತರು ತೇರನ್ನು ಭಕ್ತಿಯಿಂದ ಎಳೆದು ಸಂಭ್ರಮಿಸಿದರು.
ಜಾತ್ರಾ ಪ್ರಯುಕ್ತ ಗ್ರಾಮವು ವಿದ್ಯುತ್ ದೀಪಲಂಕಾರ ಹಾಗೂ ದೇವಸ್ಥಾನವು ಹಸಿರು ತಳಿರು ತೋರಣ ಸೇರಿದಂತೆ ಹೂವಿನ ಅಲಂಕಾರ ಮಾಡಲಾಗಿತ್ತು. ತುಂತುರು ಮಳೆಯಲ್ಲೂ ಭಕ್ತಾಧಿಗಳು ರಥೋತ್ಸವ ಹಾಗೂ ದೇವರ ಕುಣಿತವು ವೀಕ್ಷಿಸಿದ್ದು ವಿಶೇಷವಾಗಿತ್ತು.ಜಾತ್ರ ಮೈದಾನದಲ್ಲಿ ಶ್ರೀ ಚಿಕ್ಕಯ್ಯ ಸ್ವಾಮಿ ಹಾಗೂ ಧೂತರಾಯ ಸ್ವಾಮಿಯವರ ದೇವರ ಕುಣಿತವು ನೆರೆದಿದ್ದ ಭಕ್ತರ ಮನಸೂರೆಗೊಂಡಿತು. ರಥೋತ್ಸವದಲ್ಲಿ ಕೆಲ್ಲಂಗೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಆಗಮಿಸಿ ದೇವಿಯವರಿಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.