ಮುತ್ತತ್ತಿ ಗ್ರಾಮದ ಆರಾಧ್ಯ ದೇವ ಶ್ರೀಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 1 ಆರಂಭಗೊಂಡು ನಾಲ್ಕು ದಿನಗಳ ಕಾಲ ವಿಭಿನ್ನ ಹಾಗೂ ವೈಭವ ಪೂರಕವಾಗಿ ನಡೆಯಲಿದೆ. ಕಾವೇರಿ ನದಿ ದಡದ ಪುರಾಣ ಪ್ರಸಿದ್ಧ ಮುತ್ತತ್ತಿರಾಯ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮ, ಹಾಲರವಿ ಸೇವೆ ಮತ್ತು ಜಾತ್ರೋತ್ಸವ ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರು
ಮುತ್ತತ್ತಿ ಗ್ರಾಮದ ಆರಾಧ್ಯ ದೇವ ಶ್ರೀಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 1 ಆರಂಭಗೊಂಡು ನಾಲ್ಕು ದಿನಗಳ ಕಾಲ ವಿಭಿನ್ನ ಹಾಗೂ ವೈಭವ ಪೂರಕವಾಗಿ ನಡೆಯಲಿದೆ.
ಕಾವೇರಿ ನದಿ ದಡದ ಪುರಾಣ ಪ್ರಸಿದ್ಧ ಮುತ್ತತ್ತಿರಾಯ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮ, ಹಾಲರವಿ ಸೇವೆ ಮತ್ತು ಜಾತ್ರೋತ್ಸವ ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಜಾತ್ರೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸೆ.1 ರಂದು ಬೆಳಗ್ಗೆ ಪಾದಧಾರೆಯಲ್ಲಿ ಉಪವಾಸ, ದೇವರಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಲಿವೆ. ನಂತರ ದೇವರ ಉತ್ಸವ ನಡೆಯಲಿದೆ. ಸೆ.2 ರಂದು ಮಧ್ಯಾಹ್ನ ಪಾದಧಾರೆಯಲ್ಲಿ ಹಾಲರವಿ ಸೇವೆ, ಕಾಯಿ ಹೊಡೆಯುವ ಸೇವೆ ಮತ್ತು ದೇವರ ಉತ್ಸವಗಳು ನಡೆಯಲಿವೆ.
ಇದೇ ದಿನ ದೊಡ್ಡ ಮುತ್ತತ್ತಿಯಲ್ಲಿ ಉಪವಾಸ, ದೇವರರಥ ಮತ್ತು ದೇವರಿಗೆ ಹೂವಿನ ಅಲಂಕಾರ ಮತ್ತು ಪೂಜಾ ಕೈಂಕರ್ಯ ನಡೆಯಲಿವೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಜಾನಪದ ಗಾಯಕ ಯರಹಳ್ಳಿ ಪುಟ್ಟಸ್ವಾಮಿ ಮತ್ತು ಶ್ರೀನಿವಾಸ್ ತಂಡದವರಿಂದ ಜಾನಪದ ಗೀತಾ ಗಾಯನ ನಡೆಯಲಿದೆ.
ಸೆ.3ರಂದು ಗುರುವಾರ ಹಾಲರವಿ ಸೇವೆ ಮತ್ತು ಬೆಳಗ್ಗೆ 10ರಿಂದ 12 ಗಂಟೆವರೆಗೆ ದಿವ್ಯ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ಏಳಗಳ್ಳಿ ಮುತ್ತೇಗೌಡರಿಂದ ಹಾಲರವಿ ತರುವ ಸೇವಾರ್ಥ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹೆಸರಾಂತ ತಮಟೆ ಕಲಾವಿದ ಕುಂತೂರು ಕುಮಾರ್ ಕಲಾ ತಂಡದಿಂದ ವೀರಗಾಸೆ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ಪೂಜಾ ಕುಣಿತ, ಆದಿ ಜಾಂಬವ ಜನಾಂಗದವರಿಂದ ಹಾಲರವಿ ಮತ್ತು ಕಾಯಿ ಒಡೆಯುವ ಸೇವೆ, ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಉತ್ಸವ, ರಾತ್ರಿ 7 ಗಂಟೆಗೆ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮಸ್ಥರಿಂದ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಸೆ.4 ರಂದು ಶುಕ್ರವಾರ ಹಲಗೂರು ಪೊಲೀಸ್ ಠಾಣೆ ಸಿಬ್ಬಂದಿಯಿಂದ ಮುತ್ತತ್ತಿರಾಯನಿಗೆ ವಿಶೇಷ ಪೂಜೆಯೊಂದಿಗೆ 4 ದಿನಗಳ ಜಾತ್ರೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಮುತ್ತತ್ತಿ ಎಂದರೇ ಮಾಂಸದೂಟ ಎಂದೇ ಚಿರಪರಿಚಿತ.
ಶ್ರಾವಣ ಮಾಸದ ಕೊನೇ ಶನಿವಾರ ಮುತ್ತತ್ತಿರಾಯನಿಗೆ ಭಕ್ತಾದಿಗಳಿಂದ ಮೇಕೆ, ಕೋಳಿ ಇತ್ಯಾದಿ ಭಕ್ತರ ಶಕ್ತಾನುಸಾರವಾಗಿ ಮಾಂಸದೂಟ ತಯಾರಿಸಿ ಕಾವೇರಿ ನದಿ ತಟದಲ್ಲಿ ಎಡೆ ಹಾಕಿದ ನಂತರ ಬಂಧುಗಳು ಮತ್ತು ಭಕ್ತಾದಿಗಳಿಗೆ ಊಟ ಬಡಿಸಲಾಗುತ್ತದೆ.ಭಕ್ತರು ಮುಂಜಾಗೃತೆ ವಹಿಸಬೇಕು: ಪೊಲೀಸರ ಎಚ್ಚರಿಕೆ
ಮುತ್ತತ್ತಿ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳು ಕಾವೇರಿ ನದಿ ದಡದಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಬೇಕು. ಆದರೆ, ನದಿಯಲ್ಲಿ ಈಜುವುದನ್ನು ನಿಷೇಧಿಸಲಾಗಿದೆ. ನದಿಯಲ್ಲಿ ಮೊಸಳೆಗಳಿದ್ದು, ಅಪಾಯದ ಸುಳಿವುಗಳಿವೆ. ಯಾರೂ ಕೂಡ ಕಾವೇರಿ ನದಿಗೆ ಇಳಿಯಬಾರದು. ಜಾತ್ರೆಗೆ ಬಂದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಬಾರದು. ಮದ್ಯಪಾನ ಮಾಡಬಾರದು. ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಲಗೂರು ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಡಿ.ಎಸ್ ಶ್ರೀಧರ್ ತಿಳಿಸಿದ್ದಾರೆ.
ಮುತ್ತತ್ತಿಗೆ ಹೋಗುವ ಮಾರ್ಗಮಾಧ್ಯೆ ಸಿಗುವ ಕೆಸರಕ್ಕಿ ಹಳ್ಳದ ತಿರುವು ಭಾರೀ ಅಪಾಯಕಾರಿಯಾಗಿದೆ. ಹೊಸದಾಗಿ ಬರುವ ವಾಹನ ಚಾಲಕರು ಈ ತಿರುವಿನಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಸೇರಿದಂತೆ 4 ಜನ ಸಬ್ ಇನ್ಸ್ ಪೆಕ್ಟರ್, 5 ಜನ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹಾಗೂ 15 ಹೆಡ್ ಕಾನ್ಸ್ ಟೇಬಲ್, 60 ಪೋಲೀಸ್ ಪೇದೆ, ಒಂದು ಡಿ.ಆರ್ ವ್ಯಾನ್ ಸಿಬ್ಬಂದಿ ಸೇರಿದಂತೆ ಬಂದೋ ಬಸ್ತ್ ಏರ್ಪಡಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.