ಬಸವರಾಜ ಹಿರೇಮಠಧಾರವಾಡ:
ಇಲ್ಲಿಯ ಮಂಗಳವಾರ ಪೇಟೆಯಲ್ಲಿರುವ ಕಟ್ಟಿಮಠವು ಸುಮಾರು 200 ವರ್ಷಗಳ ಇತಿಹಾಸದ ಮನೆತನ ಇದೆ. ಚೆನ್ನಮ್ಮನ ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರು ಇವರು. ಹೀಗಾಗಿ ಇವರ ಮನೆಯಲ್ಲಿ ತಲೆ-ತಲಾಂತರಗಳಿಂದ ನವರಾತ್ರಿ ಆಚರಿಸುತ್ತ ಬರಲಾಗಿದೆ. ಈ ಕುಟುಂಬದ ಈಗಿನ ಕುಡಿ ಕಾರ್ತಿಕ ಕಟ್ಟಿಮಠ, ನವರಾತ್ರಿಯ ಅಂಗವಾಗಿ ಕಾಶಿ ಕಾ ಹೆಸರಿನಲ್ಲಿ ದೇವಿ ಅಲಂಕಾರದ ಜತೆಗೆ ಕಾಶಿಯ ದೇವಸ್ಥಾನಗಳ ವೈಭವನ್ನು ಧಾರವಾಡದ ಜನತೆಗೆ ತೆರೆದಿಟ್ಟಿದ್ದಾರೆ.
ಐಐಟಿ ಪದವೀಧರರ:ಕಾರ್ತಿಕ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಕಾನ್ಪುರದಲ್ಲಿ ಐಐಟಿ ಮುಗಿಸಿ ಸದ್ಯ ಮುಂಬೈನಲ್ಲಿ ವೃತ್ತಿಯಲ್ಲಿದ್ದಾರೆ. ಕಳೆದ 18 ವರ್ಷಗಳಿಂದ ದೇವಿ ಆರಾಧನೆ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೇ ಮುಂಚೆಯೇ ಧಾರವಾಡಕ್ಕೆ ಆಗಮಿಸಿ ಒಂಭತ್ತು ದಿನ ಸ್ವತಃ ದೇವಿಗೆ ತಮ್ಮದೇ ಕಲ್ಪನೆಯಲ್ಲಿ ವಿಭಿನ್ನವಾದ ಅಲಂಕಾರ ಮೂಲಕ ನವರಾತ್ರಿ ಹಬ್ಬಕ್ಕೆ ಕಳೆ ತರುತ್ತಿದ್ದಾರೆ. ದೇಶದ ಐತಿಹಾಸಿಕ ಹಾಗೂ ಪೌರಾಣಿಕ ದೇವಸ್ಥಾನಗಳನ್ನು ತಮ್ಮ ಮನೆಯಲ್ಲಿ ಕಲಾತ್ಮಕವಾಗಿ ಸೃಷ್ಟಿಸಿ, ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.
ಈ ಬಾರಿ ‘ಕಾಶಿಕಾ ನವರಾತ್ರಿ ಉತ್ಸವ’ ನಡೆಯುತ್ತಿದ್ದು, ಮನೆಯ ಮಧ್ಯೆದಲ್ಲಿ ನಿತ್ಯ ದೇವಿಗೆ ಅಲಂಕಾರ ನಡೆಯುತ್ತಿದ್ದು, ಅಂಗಳದಲ್ಲಿ ಕಾಶಿಯ ಧಾರ್ಮಿಕ ಪರಂಪರೆ ಹಾಗೂ ವೈಶಿಷ್ಟ್ಯವನ್ನು ಪರಿಚಯಿಸಿದ್ದಾರೆ. ಕಾಶಿ ವಿಶ್ವನಾಥ ಸೇರಿದಂತೆ ಢುಂಡೀರಾಜ ವಿನಾಯಕ, ಶಂಕರಾಚಾರ್ಯ ದ್ವಾರ, ಶ್ರೀ ಆದಿಕೇಶವ, ರತ್ನೇಶ್ವರ ಮಹಾದೇವ ಮಂದಿರ, ಶ್ರೀ ಆದಿತ್ಯ ಸ್ಥಾನ, ಕಾಶಿ ಕೋತ್ವಾಲ್ ಶ್ರೀ ಕಾಲಭೈರವ, ಶ್ರೀ ದಂಡಪಾಣಿ, ದ್ವಾದಶ ಜ್ಯೋತಿರ್ಲಿಂಗ್, ಛಪ್ಪನ್ ವಿನಾಯಕ, ಅನ್ನಪೂರ್ಣ ದೇವಿ, ನವಚಂಡಿ, ನವದುರ್ಗಾ, ನವಗೌರಿ, ಚೌಸಠ್ ಯೋಗಿನಿ ಮಾತಾ, ಸಾಕ್ಷಿ ವಿನಾಯಕ, ಮೂಲ ದೇವತಾ, ನಂದಾದೀಪ ಸೇರಿದಂತೆ 23 ದೇವಸ್ಥಾನಗಳನ್ನು ಸೆಟ್ ರೂಪದಲ್ಲಿ ಕಾರ್ತಿಕ್ ಸೃಷ್ಟಿಸಿದ್ದಾರೆ.
ಕಾರ್ತಿಕ್ ಎರಡು ವರ್ಷದವನಿದ್ದಾಗಲೇ ದೇವಿ ಚಿತ್ರ ಬಿಡಿಸುವುದು ಸೇರಿದಂತೆ ಕಲೆಯಲ್ಲಿ ತುಂಬ ಆಸಕ್ತಿ ಇತ್ತು. ಇದೀಗ ಅದು ನವರಾತ್ರಿ ಉತ್ಸವಕ್ಕೆ ಬಂದು ನಿಂತಿದೆ. ಪ್ರತಿ ವರ್ಷ ಕಾರ್ತಿಕ್ ದೇವಿ ಅಲಂಕಾರವನ್ನು ವಿಭಿನ್ನ ಕಲ್ಪನೆಯಲ್ಲಿ ಮಾಡುತ್ತಿದ್ದು, ಅದಕ್ಕಾಗಿ ತಿಂಗಳುಗಟ್ಟಲೇ ಸಮಯ, ಸಂಶೋಧನೆ ಹಾಗೂ ಸಾಕಷ್ಟು ವೆಚ್ಚ ಸಹ ಮಾಡುತ್ತಿದ್ದಾನೆ. ಯಾರ ಸಹಾಯ ಇಲ್ಲದೇ ದೇವಿಯ ಆರಾಧನೆಯ ಕಾರ್ಯ ಮಾಡುತ್ತಿರುವ ಕಾರ್ತಿಕ್ ಕಾರ್ಯವನ್ನು ಧಾರವಾಡ ಜನತೆ ಸಹ ಮೆಚ್ಚಿದೆ ಎಂದು ಎಂದು ವಿಜಯಲಕ್ಷ್ಮಿ ಕಟ್ಟಿಮಠ ಹೆಮ್ಮೆ ವ್ಯಕ್ತಪಡಿಸಿದರು.
ಕಾಶಿಕಾ ಉತ್ಸವದ ಕಲ್ಪನೆ..
ಕಾರ್ತಿಕ್ ಕಟ್ಟಿಮಠ, ದೇವಿ ಆರಾಧಕರು