ರಾಮನಗರ: ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ಕಡಿತಗೊಳಿಸಿರುವ ಬಗ್ಗೆ ಮಾತ್ರ ಹೇಳುತ್ತಿದ್ದಾರೆ. ಅವರೆಲ್ಲರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಎಷ್ಟು ಅನುದಾನ ಕೊಟ್ಟಿದ್ದರು ಎಂಬುದನ್ನೂ ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರಾದ ಮುನಿರತ್ನ ಮತ್ತು ಆರ್ .ಅಶೋಕ್ ಅವರು ತಮ್ಮ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿದ್ದಾರೆಂದು ಹೇಳುತ್ತಿದ್ದಾರೆ. ಅವರು ಸೇರಿದಂತೆ ಸೋಮಣ್ಣ, ಬಸವಾರಾಜು, ಲಿಂಬಾವಳಿ ಎಲ್ಲರೂ ಮಂತ್ರಿಗಳಾಗಿದ್ದವರು. ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ದರು ಎಂದು ಹೇಳಬೇಕು ಅಲ್ವಾ ಎಂದು ಪ್ರಶ್ನಿಸಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನನ್ನ ಕ್ಷೇತ್ರಕ್ಕೆ 400 ಕೋಟಿ ಅನುದಾನ ನೀಡಿದ್ದರು. ಬಿಜೆಪಿ ಸರ್ಕಾರ ಬಂದ ನಂತರ ಕ್ಷೇತ್ರಕ್ಕೆ ಕೊಟ್ಟಿದ್ದ 260 ಕೋಟಿ ಅನುದಾನ ಕಡಿತ ಮಾಡಿದರು. ಕಾಂಗ್ರೆಸ್ ಶಾಸಕರಿಗೆ ನೀಡಿದ್ದ 7 ಸಾವಿರ ಕೋಟಿ ಹಣದಲ್ಲಿ 5 ಸಾವಿರ ಹಣ ಕಟ್ ಮಾಡಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರಿನ 14 ಜನ ಬಿಜೆಪಿ ಶಾಸಕರು 9 ಸಾವಿರ ಕೋಟಿ ಅನುದಾನ ತೆಗೆದುಕೊಂಡಿದ್ದರು. 12 ಮಂದಿ ಕಾಂಗ್ರೆಸ್ ಶಾಸಕರಿಗೆ ಕೇವಲ1450 ಕೋಟಿ ಕೊಟ್ಟಿದ್ದರು. ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು. ಬಿಜೆಪಿಯವರು ಮಾಡಿದ್ದನ್ನು ನಾವು ಜನರಿಗೆ ಹೇಳಬೇಕಾಗಿದೆ. ಬಿಜೆಪಿ ಶಾಸಕ ಮುನಿರತ್ನ ಅವರ ಕ್ಷೇತ್ರದಿಂದ ಗ್ರ್ಯಾಂಟ್ ತೆಗಿದಿದ್ದಾರೆ ಅಂತಾ ಹೇಳುತ್ತಿದ್ದಾರೆ. ಅನುದಾನ ತೆಗೆದಿರೋದು ನಿಜ. ಅವರಿಗೆ ಅನುದಾನ ಕೊಡುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ನಾನೂ ಹೇಳುತ್ತೇನೆ. ಶಾಸಕ ಎಸ್.ಟಿ ಸೋಮಶೇಖರ್ ಮನವಿ ಮೇರೆಗೆ ಕ್ಷೇತ್ರಕ್ಕೆ ಅನುದಾನ ನೀಡಿರಬಹುದು. ಮುನಿರತ್ನರವರು ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಹೊರ ರಾಜ್ಯದವರನ್ನು ನೇಮಿಸಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಬಿಜೆಪಿಯವರು ನಮ್ಮ ರಾಜ್ಯದವರನ್ನೇ ಸಮಿತಿಗೆ ನೇಮಕ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆ ದೊಡ್ಡ ವ್ಯಕ್ತಿಯನ್ನು ನೇಮಕ ಮಾಡಿದ ಮೇಲೆ ಏನೆಲ್ಲಾ ಆಯಿತೆಂಬುದೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಬಾಕ್ಸ್....... ಲೋಡ್ ಶೆಡ್ಡಿಂಗ್ ಗೆ ಮಳೆ ಕೊರತೆ ಕಾರಣ ರಾಜ್ಯದಲ್ಲಿ ಮಳೆ ಕೂಡ ಕಡಿಮೆಯಾಗಿದೆ. ಹೀಗಾಗಿ ಸ್ವಲ್ಪ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಮಳೆ ಆಗಿದ್ದರೆ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ. ರಾಜ್ಯದಲ್ಲಿ ಬರಗಾಲ ಕೂಡ ಇದೆ. ಜಲಾಶಯಗಳಲ್ಲಿ ನೀರು ಕೂಡ ಕಡಿಮೆ ಇರುವುದರಿಂದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಹಾಗಾಗಿ ಬೇರೆ ರಾಜ್ಯದ ಮೊರೆ ಹೋಗಿದ್ದೇವೆ. ಇಂಧನ ಸಚಿವ ಜಾರ್ಜ್ ಅವರು ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಾಕ್ಸ್......... ಹೆಚ್ಚು ಲೀಡ್ ಕೊಡುವ ಬೂತ್ ಗೆ ಹೆಚ್ಚು ಆಸಕ್ತಿ: ಬಾಲಕೃಷ್ಣ ರಾಮನಗರ: ಜನರು ವೋಟು ಹಾಕುವುದು ನಾವು ಕೆಲಸ ಮಾಡಲಿ ಅಂತ. ಕೆಲಸ ಮಾಡಬೇಕು ಅಂದರೆ ವೋಟು ಹಾಕಬೇಕು ಅಂತ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ವೋಟು ಹಾಕಿದ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ವೋಟು ಹಾಕಿಲ್ಲ ಅಂದರೆ ಆಲೋಚನೆ ಮಾಡುತ್ತೇವೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ಎಚ್.ಸಿ.ಬಾಲಕೃಷ್ಣ, ನಾನು ತಪ್ಪೇನು ಹೇಳಿದ್ದೇನೆ ಎಂದು ಪ್ರಶ್ನಿಸಿದರು. ನಾನು ಕೆಲಸ ಮಾಡಲ್ಲ ಅಂತ ಹೇಳಿದ್ದೀನಾ. ನಾನು ವೋಟ್ ಹಾಕದೇ ಇರುವವರಿಗೆ ಕೆಲಸ ಮಾಡಲ್ಲ ಅಂತ ನಾನು ಹೇಳಿಲ್ಲ. ಆಲೋಚನೆ ಮಾಡುತ್ತೇನೆ ಅಂತ ಹೇಳಿದ್ದೀನಿ. ಹೆಚ್ಚು ಲೀಡ್ ಕೊಡುವ ಬೂತ್ ಗೆ ಹೆಚ್ಚು ಆಸಕ್ತಿ ವಹಿಸುತ್ತೇವೆ. ಕಡಿಮೆ ಲೀಡ್ ಕೊಡುವ ಬೂತ್ ಗೆ ಕಡಿಮೆ ಆಸಕ್ತಿ ವಹಿಸುತ್ತೇವೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ. ನಾನೇನು ಜಗಳ ಮಾಡೋಕೆ ಹೋಗಿದ್ದೀನಾ ಎಂದು ಬಾಲಕೃಷ್ಣ ಹೇಳಿದರು. 12ಕೆಆರ್ ಎಂಎನ್ 3,4.ಜೆಪಿಜಿ 3.ಸಚಿವ ರಾಮಲಿಂಗಾರೆಡ್ಡಿ 4.ಎಚ್ .ಸಿ.ಬಾಲಕೃಷ್ಣ