ನರೇಗಲ್ಲ: ಕೋಡಿಕೊಪ್ಪದ ವೀರಪ್ಪಜ್ಜನವರು ಹಠಯೋಗಿಗಳು, ಮಹಾನ್ ಪುಣ್ಯ ಪುರುಷರು ಅವರ ನೀಡಿರುವ ಯಾವುದು ಹೌದು ಅದು ಅಲ್ಲಾ, ಯಾವುದು ಅಲ್ಲಾ ಅದು ಹೌದು ಎನ್ನುವಂತ ಸತ್ಯದರ್ಶನ ತೋರ್ಪಡಿಸಿದ ಮಹಾನ್ ಪುರುಷರು, ಇಂತಹ ಮಹಾಮಹಿನ ಕ್ಷೇತ್ರದ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ನೀವುಗಳೆಲ್ಲರು ಪುಣ್ಯವಂತರೆಂದು ಮುಂಡರಗಿಯ ನಾ.ಜ.ಶ್ರೀಅನ್ನದಾನೀಶ್ವರ ಸ್ವಾಮಿಗಳು ಹೇಳಿದರು.
ಎಂದಿಗೂ ಯಾವುದು ಹಳಿತು ಎನ್ನಿಸುವುದಿಲ್ಲವೋ ಅದು ಪುರಾಣ.ಜಗತ್ತಿನಲ್ಲಿ ಅದೆಷ್ಟೋ ಪುರಾಣಗಳಿವೆ. ಅವೆಲ್ಲದರಲ್ಲಿಯೂ ಶ್ರೀವೀರಪ್ಪಜ್ಜನವರ ಪುರಾಣವು ಬಹಳಷ್ಟು ವೈಶಿಷ್ಟ್ಯೆತೆಯಿಂದ ಕೂಡಿದೆ. ನಿತ್ಯವೂ ಅದನ್ನು ಕೇಳಿ ನೀವುಗಳೆಲ್ಲ ಪುನೀತರಾಗಿ. ಜೀವನದಲ್ಲಿ ನೆಮ್ಮದಿಯಿಂದ ಬದುಕಲು ದೇವರಿದ್ದಾನೆ ಮತ್ತು ನಾವುಗಳು ಖಂಡಿತ ಸಾಯುತ್ತೇವೆ ಎಂಬ ಎರಡು ವಿಷಯ ನೆನಪಿನಲ್ಲಿಡಬೇಕು, ನಾವು ಬೇರೆಯವರಿಗೆ ಮಾಡಿದ ಉಪಕಾರ, ಬೇರೆಯವರಿಂದ ನಮಗಾದ ಅಪಕಾರ ಮರೆಯಬೇಕೆಂದು ತಿಳಿಸಿದರು.
ಓಂಕಾರಗಿರಿ ಮಠದ ಶ್ರೀ ಫಕೀರೇಶ್ವರ ಪಟ್ಟಾಧ್ಯಕ್ಷರು ಆಶೀರ್ವಚನ ನೀಡಿ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇದನ್ನೇ ಶ್ರೀ ವೀರಪ್ಪಜ್ಜನವರು ತಮ್ಮ ವೇದ ವಾಕ್ಯದಲ್ಲಿ ತಿಳಿಸಿದ್ದಾರೆ. ಇದನ್ನು ಅರ್ಥಮಾಡಿಕೊಂಡವರು ಜೀವನದಲ್ಲಿ ಗೆದ್ದಂತೆ. ಶ್ರೀ ವೀರಪ್ಪಜ್ಜನವರು ತಮ್ಮನ್ನು ತಾವು ಸುಟ್ಟುಕೊಂಡು ಈ ಜಗತ್ತಿಗೆ ಬೆಳಕು ನೀಡಿದ ಮಹಾಮಹಿರು ಎಂದರು.ಸಾನಿಧ್ಯ ವಹಿಸಿದ್ದ ಕಪೋತಗಿರಿಯ ಶ್ರೀ ಶಿವಕುಮಾರ ಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ವೀರಪ್ಪಜ್ಜನವರು ಹುಚ್ಚರಲ್ಲ. ಅವರನ್ನು ಹುಚ್ಚರೆಂದು ಕರೆಯುತ್ತಿರುವ ನಾವುಗಳು ಹುಚ್ಚರು. ಸಂಸಾರದ ಹಿಂದೆ ಬಿದ್ದು ಆಧ್ಯಾತ್ಮ ಮರೆತು ಬಾಳುತ್ತಿರುವ ನಾವುಗಳು ಮೂಢರು. ಪುರಾಣ ಶ್ರವಣದಿಂದ ಜ್ಞಾನ ಸಿಗುತ್ತದೆ. ಅದರಲ್ಲಿಯೂ ಶ್ರೀ ವೀರಪ್ಪಜ್ಜನವರ ಪುರಾಣ ಖಂಡಿತ ನಿಮ್ಮ ಬಾಳಿಗೆ ಬೆಳಕು ನೀಡುತ್ತದೆ. ನಿತ್ಯವೂ ಕೇಳಿ ಬಾಳಿಗೆ ಬೆಳಕು ತಂದುಕೊಳ್ಳಿರಿ. ಶ್ರೀ ವೀರಪ್ಪಜ್ಜನವರಿಂದ ನರೇಗಲ್ಲ ಮತ್ತು ಕೋಡಿಕೊಪ್ಪಕ್ಕೆ ಈ ನಾಡಿನಲ್ಲಿ ದೊಡ್ಡ ಹೆಸರಿದೆ. ವೀರಪ್ಪಜ್ಜನವರ ಜ್ಞಾನ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿ ನೀವುಗಳೆಲ್ಲರೂ ಪುಣ್ಯವಂತರಾಗಿರಿ ಎಂದರು.
ರೋಣ ಬೂದೀಶ್ವರ ಮಠದ ಡಾ.ವಿಶ್ವನಾಥ ಸ್ವಾಮಿಗಳು ಪುರಾಣ ಪ್ರಾರಂಭಿಸಿದರು. ಚಿಕ್ಕಮನ್ನಾಪುರದ ಹನುಮಂತ ಮೇಟಿ ಸಂಗೀತ ಮತ್ತು ಬರದೂರಿನ ಶಾಂತಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಪುಣ್ಯಾರಾಧನೆ ಶತಮಾನೋತ್ಸವಕ್ಕೆ ದಾನ ನೀಡಿದ ಮಹನೀಯರುಗಳನ್ನು ಸನ್ಮಾನಿಸಲಾಯಿತು. ಧುರೀಣ ರವಿ ದಂಡಿನ ಮಾತನಾಡಿದರು.ಕುಕನೂರಿನ ಗುದ್ನೆಪ್ಪ ಮಠದ ಸ್ವಾಮಿಗಳು, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಇದ್ದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ನಿವೃತ್ತ ಪ್ರಾ.ಬಿ.ಆರ್. ಜಾಲೀಹಾಳ ಸ್ವಾಗತಿಸಿದರು.