ಸಂಡೂರು: ಜ್ಞಾನಗುಮ್ಮಟವಾಗಿದ್ದ ಸಿದ್ಧೇಶ್ವರ ಸ್ವಾಮೀಜಿ ಅವರು ನುಡಿದಂತೆ ನಡೆದ ಮಹಾನ್ ಸಂತರು ಎಂದು ಎಸ್.ಇ.ಎಸ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಗದೀಶ್ ಬಸಾಪುರ ಅಭಿಪ್ರಾಯಪಟ್ಟರು. ಪಟ್ಟಣದ ಬಿಕೆಜಿ ಕಚೇರಿಯ ಒಳ ಕ್ರೀಡಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಕಾಯಕ ಯೋಗಿಗಳಾಗಿದ್ದ ಸಿದ್ಧೇಶ್ವರ ಸ್ವಾಮೀಜಿ ಅವರು ವಸ್ತ್ರದ ಬಗ್ಗೆ ನಿರ್ಮೋಹಿಯಾಗಿದ್ದರು. ೧೯ನೇ ವಯಸ್ಸಿನಲ್ಲಿಯೇ ಸಿದ್ಧಾಂತ ಶಿಖಾಮಣಿಯ ಕುರಿತು ಪ್ರವಚನ ನೀಡಿದರು. ಅವರ ಪ್ರವಚನಗಳು ಆಸ್ತಿಕರಿಗೂ ಹಾಗೂ ನಾಸ್ತಿಕರಿಗೂ ಸಮಾನವಾಗಿ ರುಚಿಸುವಂತಿರುತ್ತಿದ್ದವು. ನಿಸರ್ಗ ಹಾಗೂ ಜೀವ ಸಂಕುಲವನ್ನು ಪ್ರೀತಿಸುತ್ತಿದ್ದ ಅವರು ನಿಸರ್ಗದ ಸಂರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದ್ದರು. ಪದ್ಮಶ್ರೀ, ಗೌರವ ಡಾಕ್ಟರೆಟ್ ಮುಂತಾದ ಸನ್ಮಾನಗಳನ್ನು ಗೌರವಪೂರ್ವಕವಾಗಿಯೇ ತಿರಸ್ಕರಿಸಿದ್ದರು. ಅವರ ಸರಳ ಜೀವನ, ಸಂಸ್ಕಾರ, ಸಾಮಾಜಿಕ ಚಿಂತನೆಗಳು, ನಿಸರ್ಗ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹಲವು ನಿದರ್ಶನಗಳ ಮೂಲಕ ವಿವರಿಸಿದರಲ್ಲದೆ, ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವುದು ಅಗತ್ಯವಿದೆ ಎಂದು ತಮ್ಮ ನುಡಿನಮನ ಸಲ್ಲಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿ ಸರಳ ಜೀವನ ಹಾಗೂ ಪ್ರವಚನಗಳು ಜನರ ಜೀವನದ ದಿಕ್ಕನ್ನೆ ಬದಲಾಯಿಸುವ ಶಕ್ತಿಯನ್ನು ಹೊಂದಿದ್ದವು. ಅವರ ಸರಳ ಜೀವನ ಎಲ್ಲರಿಗೂ ಆದರ್ಶವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು. ಆರಂಭದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಅವರ ಜೀವನಗಾಥೆಯ ಚಿತ್ರಣ ಪ್ರದರ್ಶಿಸಲಾಯಿತು. ಬಿಕೆಜಿ ಕಂಪನಿಯ ಅಧಿಕಾರಿ ರಾಜಶೇಖರ್ ಬೆಲ್ಲದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾವಿತ್ರಿ ಪ್ರಾರ್ಥಿಸಿದರು. ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿದರು. ಜಿ. ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ನಳಿನಿ ಅವರು ವಂದಿಸಿದರು.ಕದಳಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಜಿ. ನೀಲಾಂಬಿಕಾ ಗೌಡರು, ತಾಲೂಕು ಘಟಕದ ಅಧ್ಯಕ್ಷೆ ಕುಸುಮಾ ಹಿರೇಮಠ, ಮುಖಂಡರಾದ ಬಪ್ಪಕಾನ್ ಕುಮಾರಸ್ವಾಮಿ, ಬಸವರಾಜ ಮಸೂತಿ, ಎಂ.ಪಿ.ಎಂ. ಸುರೇಂದ್ರನಾಥ್, ವೆಂಕಟಸುಬ್ಬಯ್ಯ, ಎಸ್.ಡಿ. ಪ್ರೇಮಲೀಲಾ, ಪುಷ್ಪಾ, ಮಂಗಳಗೌರಮ್ಮ, ಯರಿಸ್ವಾಮಿ, ಜೆ.ಎಂ. ಬಸವರಾಜ, ಎಂ.ವಿ. ಹಿರೇಮಠ್, ಬೊಮ್ಮಯ್ಯ, ಸಿ.ಎಂ. ನಾಗಭೂಷಣ, ಗೋಪಾಲ್, ಶಿವಮೂರ್ತಿಸ್ವಾಮಿ ಸೇವೇನಹಳ್ಳಿ ಉಪಸ್ಥಿತರಿದ್ದರು.