ಉಡುಪಿ: ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದ ಸಮಾಜದವರು ಮುಖ್ಯವಾಹಿನಿಗೆ ಬರಲು ಕಾರಣರಾಗಿದ್ದಾರೆ. ದೇಶದೆಲ್ಲೆಡೆ ಸಂಚರಿಸಿ, ಜಗತ್ತಿಗೆ ಸಮಾನತೆ ಮತ್ತು ಜ್ಞಾನದ ಬೆಳಕನ್ನು ಹರಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.
ದಾರ್ಶನಿಕರೂ ಆಧ್ಯಾತ್ಮಿಕ ಸಾಧಕರೀ ಆಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುಕ್ಕಾಗಿ ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿ, ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದರು, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾರಾಯಣ ಗುರುಗಳು ತಮ್ಮ ಜೀವಿತಾವಧಿಯಲ್ಲಿ ತಾಂಡವವಾಡುತ್ತಿದ್ದ ಮೇಲು-ಕೀಳು, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು, ಸಾಮಾಜಿಕ ನ್ಯಾಯ, ಸಮಬಾಳು-ಸಮಪಾಲಿನ ಪರಿಕಲ್ಪನೆಯೊಂದಿಗೆ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಾಂತಿ ಮಾರ್ಗದಲ್ಲಿ ಕ್ರಾಂತಿಯನ್ನೇ ಮಾಡಿದ್ದರು ಎಂದರು.ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು. ಉಪನ್ಯಾಸಕ ಸಚೇಂದ್ರ ಅಂಬಾಗಿಲು ನಾರಾಯಣ ಗುರುಗಳ ಜೀವನ ಸಾಧನೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಗುರುಗಳ ಕುರಿತ ನಡೆಸಲಾದ ಪ್ರಬಂಧ - ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಜಿಪಂ ಉಪ ಕಾರ್ಯದರ್ಶಿ ಎಸ್. ಎಸ್. ಕಾದ್ರೋಳ್ಳಿ, ಬಿಲ್ಲವರ ಸೇವಾ ಸಂಘ ಅಧ್ಯಕ್ಷ ಶಶಿಧರ ಎಂ. ಅಮೀನ್ ಮತ್ತಿತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ತೇಜಸ್ ಎಂ ಬಂಗೇರ ನಿರೂಪಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ವಂದಿಸಿದರು.