ಕನ್ನಡಪ್ರಭ ವಾರ್ತೆ ಮುಧೋಳಮಮತೆ, ವಾತ್ಸಲ್ಯ, ಸಂಪ್ರದಾಯ ಹಾಗೂ ಪರಂಪರೆಯ ಪ್ರತೀಕವಾದ ರಕ್ಷಾಬಂಧನದಿಂದ ಬಾಂಧವ್ಯಗಳ ಕೊಂಡಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಮನೋವೈದ್ಯೆ ಡಾ.ತ್ರಿವೇಣಿ ಮಲಘಾಣ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮಮತೆ, ವಾತ್ಸಲ್ಯ, ಸಂಪ್ರದಾಯ ಹಾಗೂ ಪರಂಪರೆಯ ಪ್ರತೀಕವಾದ ರಕ್ಷಾಬಂಧನದಿಂದ ಬಾಂಧವ್ಯಗಳ ಕೊಂಡಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಮನೋವೈದ್ಯೆ ಡಾ.ತ್ರಿವೇಣಿ ಮಲಘಾಣ ಹೇಳಿದರು.

ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಹಾಗೂ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಕ್ಷಾ ಬಂಧನ ಉಪನ್ಯಾಸ ಹಾಗೂ ಬಾಂಧವ್ಯದ ಬೆಸುಗೆ ರಕ್ಷಾ ಬಂಧನ-2026ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹೋದರಿಯು ತನ್ನ ಸಹೋದರರಿಗೆ ರಾಖಿ ಕಟ್ಟುವುದು ಪವಿತ್ರ ಸೋದರತ್ವದ ಬಾಂಧವ್ಯದ ಸಂಕೇತವಾಗಿದೆ. ಅಣ್ಣ-ತಂಗಿಯರ ಈ ಬಾಂಧವ್ಯ ನೂರ್ಕಾಲ ಬಾಳಲಿ ಎಂಬುದೆ ಇದರ ಮುಖ್ಯ ಆಶಯ, ಇಂದಿನ ಆಧುನಿಕ ಯುಗದಲ್ಲಿ ಅಳಿದು ಹೋಗುತ್ತಿರುವ ಭಾರತೀಯ ಪರಂಪರಾಗತ ಹಬ್ಬಗಳಿಗೆ ಮರುಜೀವ ತುಂಬುವ ಇಂತಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಹಾಗೂ ಶಿಕ್ಷಕರ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದರು.

ಮುಖ್ಯೋಪಾಧ್ಯಾಯ ಡಾ.ವೆಂಕಟೇಶ ಗುಡೆಪ್ಪನವರ ಮಾತನಾಡಿ, ಅಣ್ಣ-ತಂಗಿಯರ ಬಾಂಧವ್ಯದ ದ್ಯೋತಕವಾಗಿರುವ ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯುವುದರಿಂದ ಸಮಾಜದಲ್ಲಿನ ವಿಕೃತ ಭಾವನೆಗಳಿಗೆ ಕಡಿವಾಣ ಬೀಳಲಿದೆ. ಐತಿಹಾಸಿಕ ಹಾಗೂ ಪುರಾಣ ಕಾಲದ ಹಲವಾರು ಘಟನೆಗಳಲ್ಲಿ ಕಂಡು ಬಂದಂತೆ, ಒಂದು ನೂಲಿನ ಎಳೆಯ ರಾಖಿಯು ದುಷ್ಟ ಶಕ್ತಿಗಳ ಮನಸ್ಸಿನಲ್ಲಿಯೂ ಮಾನವೀಯತೆ ಯನ್ನು ತುಂಬಬಲ್ಲದು, ಅಣ್ಣ-ತಂಗಿಯರ ಈ ಪವಿತ್ರ ಸಂಬಂಧಕ್ಕೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ ಎಂದರು.

ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಪ್ರಾಚಾರ್ಯ ಸುರೇಶ ಭಜಂತ್ರಿ, ಮುಖ್ಯೋಪಾಧ್ಯಾಯ ಡಾ.ವೆಂಕಟೇಶ ಗುಡೆಪ್ಪನವರ, ಐಶ್ವರ್ಯ ಕಲಾಲ ಹಾಗೂ ಸಾಕ್ಷಿ ಕಳ್ಳೆನವರ ಉಪಸ್ಥಿತರಿದ್ದರು.

ಐಶ್ವರ್ಯ ಕಲಾಲ ಸ್ವಾಗತಿಸಿದರು. ಸಾಕ್ಷಿ ಕಳ್ಳೆನವರ ನಿರೂಪಿಸಿದರು. ಕೃತಿ ದೇಶಪಾಂಡೆ ವಂದಿಸಿದರು.

ಶಾಲಾ ಆವರಣದಲ್ಲಿ ಏಕಕಾಲಕ್ಕೆ ಒಟ್ಟು 728 ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿಕೊಂಡಿದ್ದು, ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿತ್ತು. ನಂತರ ಜರುಗಿದ ರೂಪಕ, ಹಾಡು ಹಾಗೂ ನೃತ್ಯಗಳು ನೆರೆದವರ ಗಮನ ಸೆಳೆದವು.

ಸೃಷ್ಟಿ ನರೋಜಿ, ತನುಶ್ರೀ ಹುಡೆದ, ಸೌಜನ್ಯ ಕಾಂತಿಮಠ, ಪೃಥ್ವಿ ಕಬ್ಬೂರ, ಸನ್ಮಿತಾ ತೆಗ್ಗಿ, ಸನ್ನಿಧಿ ಕುಮಕಾಲೆ ಹಾಗೂ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.