ದಶಕಗಳ ಕಾಲ ಕನ್ನಡಿಗರು ನಡೆಸಿದ ಸುದೀರ್ಘ ಹೋರಾಟದ ಫಲವಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಮುಕ್ತಗೊಳಿಸಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ.

ಮಂಗಳೂರು: ದಶಕಗಳ ಕಾಲ ಕನ್ನಡಿಗರು ನಡೆಸಿದ ಸುದೀರ್ಘ ಹೋರಾಟದ ಫಲವಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಮುಕ್ತಗೊಳಿಸಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ.ಕರಾವಳಿ ಮತ್ತು ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸೌಕರ್ಯಗಳು ಇಷ್ಟು ಕಾಲ ನೆರೆಯ ರಾಜ್ಯದ ಹಿತಾಸಕ್ತಿಗೆ ಬಲಿಯಾಗಿದ್ದವು. ಮಂಗಳೂರು ನೈಋತ್ಯ ರೈಲ್ವೆ ಸೇರುವುದರಿಂದ ಕರಾವಳಿ, ಮಲೆನಾಡು ಹಾಗೂ ರಾಜಧಾನಿ ಬೆಂಗಳೂರಿಗೆ ನೇರ, ಸುಲಭ ಮತ್ತು ಹೆಚ್ಚಿನ ರೈಲು ಸಂಪರ್ಕ ಸಿಗಲಿದ್ದು, ಈ ಭಾಗದ ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇದು ಹೊಸ ದಿಕ್ಸೂಚಿಯಾಗಲಿದೆ.

ಈ ಐತಿಹಾಸಿಕ ಬದಲಾವಣೆಗೆ ನೆರೆಯ ಕೇರಳದಿಂದ ವ್ಯಕ್ತವಾಗುತ್ತಿರುವ ವಿರೋಧ ಮತ್ತು ಒತ್ತಡಗಳಿಗೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಕೇರಳಕ್ಕೆ ಇದರಿಂದ ಯಾವುದೇ ಆರ್ಥಿಕ ನಷ್ಟವಿಲ್ಲವೆಂದು ರೈಲ್ವೆ ಮಂಡಳಿಯೇ ಸ್ಪಷ್ಟಪಡಿಸಿರುವಾಗ, ಕೇವಲ ರಾಜಕೀಯ ಲಾಭಕ್ಕಾಗಿ ಕನ್ನಡಿಗರ ಹಕ್ಕನ್ನು ಕಸಿಯಲು ಯತ್ನಿಸುವುದು ಸರಿಯಲ್ಲ. ಪಡೀಲ್‌ನಲ್ಲಿ ಆಡಳಿತಾತ್ಮಕ ತೊಡಕುಗಳು ನಿವಾರಣೆಯಾಗಿ, ಮಂಗಳೂರು-ಸುಬ್ರಹ್ಮಣ್ಯ-ಪುತ್ತೂರು ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕ ಹಾಗೂ ಗಡಿನಾಡ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ದಾರಿಯಾಲಿದೆ.ನಮ್ಮ ರಾಜ್ಯದ ನೆಲ, ಜಲ, ಬಂದರು ಮತ್ತು ಆದಾಯದ ಪ್ರಮುಖ ಮೂಲವಾಗಿರುವ ಕರಾವಳಿಯ ಅಭಿವೃದ್ಧಿಗೆ ಕನ್ನಡಿಗರ ಹಿತ ಕಾಯುವುದು ಅತ್ಯಗತ್ಯ. ಈ ನಿರ್ಧಾರದಿಂದ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ, ಅಕ್ಟೋಬರ್ 1 ರಿಂದಲೇ ಆಡಳಿತಾತ್ಮಕ ಹಸ್ತಾಂತರ ಪೂರ್ಣಗೊಳ್ಳಬೇಕು. ರಾಜ್ಯ ಸರ್ಕಾರ, ನಮ್ಮ ಜನಪ್ರತಿನಿಧಿಗಳು ಹಾಗೂ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗಟ್ಟಿನಿಂದ ನಿಂತು ಕನ್ನಡಿಗರ ಈ ನ್ಯಾಯಯುತ ಗೆಲುವನ್ನು ಉಳಿಸಿಕೊಳ್ಳಬೇಕಿದೆ.ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಾದೇಶಿಕ ಹಿತರಕ್ಷಣೆಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.-ಪುತ್ತೂರು ಉಮೇಶ್ ನಾಯಕ್, ಅಧ್ಯಕ್ಷರು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು