‘ಸುಗುರೆ’ ನಾಟಕದ ಹಿಂದೆ ‘ಕೈ’ವಾಡ; ಶೀಘ್ರ ಬಹಿರಂಗ: ಶಾಸಕ ಶರಣು ಸಲಗರ ಗುರುತರ ಆರೋಪ

KannadaprabhaNewsNetwork | Published : Oct 17, 2024 12:51 AM

ಸಾರಾಂಶ

ನಾನು ಐದಾರು ಕೋಟಿ ರುಪಾಯಿ ಸಾಲ ಬಾಕಿ ಕೊಡುವುದಿದೆ, ಮಾನಸಿಕವಾಗಿ ನೊಂದಿದ್ದೇನೆ. ಎಂದೆಲ್ಲ ನನ್ನ ವಿರುದ್ಧ ಪತ್ರ ಬರೆದಿಟ್ಟು ನಾಪತ್ತೆಯ ನಾಟಕವಾಡಿದ್ದಾರೆ ಎಂದು ಇತ್ತೀಚೆಗೆ ನಾಪತ್ತೆಯಾಗಿ ಪೊಲೀಸರಿಗೆ ಹೈದ್ರಾಬಾದ್‌ನಲ್ಲಿ ಸಿಕ್ಕಿರುವ ಉದ್ಯಮಿ ಸಂಜೀವಕುಮಾರ ಸುಗುರೆ ವಿರುದ್ಧ ಶಾಸಕ ಶರಣು ಸಲಗರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಾಂಗ್ರೆಸ್‌ ಪಕ್ಷದವರ ಸಹಕಾರದಿಂದ ನನ್ನ ತೇಜೋವಧೆಗೆ ನಾಪತ್ತೆಯ ನಾಟಕ ರೂಪಿಸಿರುವ ಉದ್ಯಮಿ ಸಂಜೀವಕುಮಾರ ಸುಗುರೆ ಅವರ ಬಣ್ಣವನ್ನು ದಾಖಲೆ ಸಮೇತ ಶೀಘ್ರದಲ್ಲಿ ತೆರೆದಿಡಲಿದ್ದೇನೆ. ನೂರಾರು ಕೋಟಿ ರುಪಾಯಿ ಆಸ್ತಿಯ ತನಿಖೆಗೆ ತೆರಿಗೆ ಅಧಿಕಾರಿಗಳಿಗೆ ದೂರು ನೀಡುತ್ತೇನೆ. ಹಾಗೆಯೇ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡ್ತೇನೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ತಿಳಿಸಿದರು.

ಅವರು ಬಸವಕಲ್ಯಾಣ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾನು ಐದಾರು ಕೋಟಿ ರುಪಾಯಿ ಸಾಲ ಬಾಕಿ ಕೊಡುವುದಿದೆ, ಮಾನಸಿಕವಾಗಿ ನೊಂದಿದ್ದೇನೆ. ಎಂದೆಲ್ಲ ನನ್ನ ವಿರುದ್ಧ ಪತ್ರ ಬರೆದಿಟ್ಟು ನಾಪತ್ತೆಯ ನಾಟಕವಾಡಿದ್ದಾರೆ ಎಂದು ಇತ್ತೀಚೆಗೆ ನಾಪತ್ತೆಯಾಗಿ ಪೊಲೀಸರಿಗೆ ಹೈದ್ರಾಬಾದ್‌ನಲ್ಲಿ ಸಿಕ್ಕಿರುವ ಉದ್ಯಮಿ ಸಂಜೀವಕುಮಾರ ಸುಗುರೆ ವಿರುದ್ಧ ಕಿಡಿಕಾರಿದರು.

ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ನನ್ನ ಹೆಸರು ಹೇಳಿಕೊಂಡು ಕೋಟ್ಯಂತರ ರುಪಾಯಿಗಳನ್ನು ಅಧಿಕಾರಿಗಳು, ಗುತ್ತಿಗೆದಾರರ ಬಳಿ ಲಪಟಾಯಿಸಿದ್ದಾನೆ. ಕೇವಲ ಒಂದು ಫೈನಾನ್ಸ್‌, ಅಡತ್‌ ಅಂಗಡಿ ಇಟ್ಟು ಕೊಂಡವ ಇವತ್ತು ನೂರಾರು ಕೋಟಿ ಒಡೆಯನಾಗಿದ್ದಾನೆ, ಈ ಕುರಿತು ಆದಾಯ ತೆರಿಗೆ ಇಲಾಖೆಗೆ ದೂರು ಕೊಡ್ತೇನೆ ನನಗೆ ನೋವಾಗಿದೆ. ನನ್ನ ಮನಸ್ಸಿಗೆ ಘಾಸಿಯಾಗಿದೆ, ನನ್ನನ್ನು ಜನ ಅನುಮಾನದಿಂದ ನೋಡುವಂತಾಗಿದೆ ಎಂದು ಸಲಗರ ಬೇಸರ ವ್ಯಕ್ತಪಡಿಸಿದರು.

ಆಣೆ ಪ್ರಮಾಣ ಮಾಡಲು ಸವಾಲು:

ಚುನಾವಣೆ ಸಂದರ್ಭದಲ್ಲಿ ಖರ್ಚಿಗಾಗಿ ದುಡ್ಡು ಹೊಂದಿಸಿಕೊಳ್ಳಲು ಕಲ್ಯಾಣದ ಆಪ್ತರು ತಮ್ಮ ಆಭರಣಗಳನ್ನು ಕೊಟ್ಟಿದ್ದರು. ಅದನ್ನು ಸಂಜೀವಕುಮಾರ ಬಳಿ ಅಡವಿಟ್ಟಿದ್ದೆ. ಅದಕ್ಕೆ ಶೇ.3ರಷ್ಟು ಬಡ್ಡಿ ಕೇಳಿ 9 ಲಕ್ಷ ರು. ಬಡ್ಡಿ ಪಡೆದಿರುವ ಕುರಿತು ರಟಕಲ್‌ ರೇವಣಸಿದ್ದೇಶ್ವರನ ಮೇಲೆ ಆಣೆ ಪ್ರಮಾಣ ಮಾಡುವಂತೆ ಸುಗುರೆಗೆ ಆಗ್ರಹಿಸಿದ್ದಾರೆ.

ನನ್ನ ಜೊತೆ ಇದ್ದು, ಐಷಾರಾಮಿ ಜೀವನ ಮಾಡಿ ಕೋಟ್ಯಂತರ ಗಳಿಕೆ ಮಾಡಿದ್ದು, ಅರಿತು ಅದರಿಂದ ನನ್ನ ತೇಜೋವಧೆಯಾಗುವುದನ್ನು ತಿಳಿದು ನಿನ್ನನ್ನು ದೂರ ಇಟ್ಟಿದ್ದಕ್ಕಾಗಿ ಇದೀಗ ನಾಪತ್ತೆ, ಮಾನಸಿಕ ಹಿಂಸೆಯ ನಾಟಕ ಪ್ರದರ್ಶನಕ್ಕೆ ಸುಗುರೆ ಮುಂದಾಗಿದ್ದಾನೆ. ನಾನು ಈಗಲೂ ಏನೂ ಗಳಿಸಿಲ್ಲ. ನನ್ನ ಪತ್ನಿ ಕೆಎಎಸ್‌ ಅಧಿಕಾರಿ, ನಾನು ಎರಡನೇ ಬಾರಿ ಶಾಸಕ ಆದರೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಆದರೆ ಶಾಸಕನ ಜೊತೆಯಿದ್ದು, ಆಪ್ತನೆಂದು ಗುರುತಿಸಿಕೊಂಡು ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಬೆದರಿಸಿ. ಹಣ ವಸೂಲಿ ಮಾಡಿದ್ದಲ್ಲದೆ 6 ಮನೆಗಳ ಮಾಲೀಕನಾಗಿರುವ, ಹೈದ್ರಾಬಾದ್‌ನಲ್ಲಿ ಕನಿಷ್ಠ 50 ನಿವೇಶನಗಳನ್ನು ಹೊಂದಿರುವ ಸಂಜೀವಕುಮಾರ ಸುಗುರೆಗೆ ಇಷ್ಟೊಂದು ಹಣ ಮಾಡಲು ಹೇಗೆ ಸಾಧ್ಯ? ಎಂಬುವುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಸಂಜೀವಕುಮಾರ ಸುಗುರೆ ಹಿಂದಿರುವ ವ್ಯಕ್ತಿಗಳು ಯಾರಿದ್ದಾರೆ ಎಂಬುವುದು ನನಗೆ ಗೊತ್ತಿದೆ. ಯಾರ ಕಾರಿನಲ್ಲಿ ಯಾರ ಜೊತೆ ಹೋಗಿದ್ದಾರೆ ಎಂಬುವುದನ್ನೆಲ್ಲ 15 ದಿನಗಳಲ್ಲಿ ದಾಖಲೆ ಸಮೇತ ಜನರ ಮುಂದಿಡುತ್ತೇನೆ, ನಾನು ಸುಗುರೆಗೆ ಒಂದು ಬಾರಿಯಾದರೂ ಸಿಟ್ಟಿನಿಂದ ಮಾತನಾಡಿದ್ದರೆ ಜನರ ಮುಂದೆ ದಾಖಲೆಗಳನ್ನು ಇಡಲಿ ನೋಡೋಣ ಎಂದು ಸವಾಲೆಸೆದರು.

ಬಹಿರಂಗವಾಗಿ ಕ್ಷಮೆ ಕೇಳಲಿ:

ಸುಳ್ಳು ಆರೋಪ ಮಾಡಿ ನನ್ನ ತೇಜೋವಧೆಗೆ ಯತ್ನಿಸಲಾಗಿದೆ. ಇದರ ಹಿಂದಿರುವವರ ಬಣ್ಣ ಶೀಘ್ರ ಬಯಲಾಗಲಿದೆ. ಸಂಜೀವಕುಮಾರ ಸುಗುರ ಎಂಥ ಕ್ರೂರಿ ಎಂಬುವದು ಇಡೀ ಸಮಾಜಕ್ಕೆ ಬೀದರ್‌ ಜಿಲ್ಲೆಗೆ ಗೊತ್ತಾಗಬೇಕು. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಬಹಿರಂಗವಾಗಿ ಕ್ಷಮೆ ಕೇಳಬೇಕು.

ಸಾವಿರಾರು ಜನರ ಕಣ್ಣೀರು ಒರೆಸಿದ್ದೇನೆ. ಸಂಜೀವಕುಮಾರ ಸುಗುರೆ ಅವರಿಗೆ ನಾನು ಬೆದರಿಕೆಯೊಡ್ಡಿಲ್ಲ. ಅ‍ವರಿಗೆ ಒಂದು ಕರೆಯನ್ನೂ ಮಾಡಿಲ್ಲ. ನನ್ನ ಮೊಬೈಲ್‌ನಿಂದ ಅವರಿಗೆ ಕರೆ ಮಾಡಿದ್ದಿರಲಿ ಒಂದು ಮಿಸ್ಡ್‌ ಕಾಲ್‌ ಹೋಗಿದ್ದರೆ ನನ್ನನ್ನು ತೇರು ಮೈದಾನದಲ್ಲಿ ಗಲ್ಲಿಗೇರಿಸಲಿ ಎಂದು ಸಲಗರ ಸವಾಲೆಸೆದರು.

ಸಾಲದ ದಾಖಲೆ ಇದ್ರೆ ಕೊಡಲಿ, ಕಿಡ್ನಿ ಮಾರಿಯಾದ್ರೂ ತೀರಿಸ್ತೇನೆ

ಬಸವಕಲ್ಯಾಣ ಆಸ್ತಿ ಕಾಯುವ ಕೆಲಸ ಮಾಡುತ್ತೇನೆ. ನನ್ನ ಅಕ್ರಮಗಳ ಕುರಿತು ಪೆನ್‌ಡ್ರೈವ್‌ ಆರೋಪ ಮಾಡುತ್ತಿರುವ ಸಂಜೀವಕುಮಾರ ಕೂಡಲೇ ಆ ಪೆನ್‌ಡ್ರೈವ್‌ ಮಾಧ್ಯಮದವರಿಗೆ ನೀಡಲಿ ನಾನು ತಪ್ಪೆಸಗಿದ್ದರೆ ಜನರ ಕಾಲಿಗೆ ಬಿದ್ದು ಕ್ಷಮೆ ಕೋರುತ್ತೇನೆ. ಕಲಬುರಗಿಯಲ್ಲಿನ ಒಂದು ಮನೆ ಬಿಟ್ಟರೆ ನನ್ನ ಹೆಸರಿನಲ್ಲಿ ಯಾವ ಆಸ್ತಿಯನ್ನೂ ಮಾಡಿಕೊಂಡಿಲ್ಲ ಅಷ್ಟೇ ಏಕೆ ಸತ್ತರೆ ಹೂಳಲೂ ಆರಡಿ ಜಾಗ ಇಲ್ಲ. ಅಷ್ಟಕ್ಕೂ ನನಗೆ ಸಾಲ ನೀಡಿದ್ದ ದಾಖಲೆ ಇದ್ದರೆ ಕೊಡಲಿ ಆಗ ನಾನು ನನ್ನ ಕಿಡ್ನಿ ಮಾರಿಯಾದರೂ ವಾಪಸ್‌ ಕೊಡ್ತೇನೆ ಇಲ್ಲಾಂದ್ರೆ ಮಾನನಷ್ಟ ಮೊಕದ್ದಮೆ ಹೂಡ್ತೇನೆ, ಪೊಲೀಸರಿಗೆ ದೂರು ಕೊಡ್ತೇನೆ ಎಂದು ಶಾಸಕ ಶರಣು ಸಲಗರ ತಿಳಿಸಿದರು.

Share this article