ತಾಲೂಕಿನಲ್ಲಿ ಒಟ್ಟು 37 ಗ್ರಾಪಂಗಳಿದ್ದು, ಜಿಲ್ಲೆಯಲ್ಲೇ ದಾಖಲೆ ಎಂಬಂತೆ ಬರೋಬ್ಬರಿ 37 ಗ್ರಾಪಂಗಳಲ್ಲಿ ಕಾಮಗಾರಿ ಪ್ರಗತಿ
ಬಿ. ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ಬರ ಆವರಿಸಿದ್ದರಿಂದ ಗ್ರಾಮೀಣ ಭಾಗದ ಬಡ ಜನರಿಗೆ ಉದ್ಯೋಗ ಭದ್ರತೆ ಕಲ್ಪಿಸಿ ಅವರ ಬದುಕಿಗೆ ಆಸರೆಯಾಗುವ ವಿಬಿ ಜಿ ರಾಮ್ ಜಿ ಯೋಜನೆಯ ಆಶಯ ಸಾಕಾರಗೊಳಿಸುವಲ್ಲಿ ಹರಪನಹಳ್ಳಿ ತಾಪಂ ವಿಜಯನಗರ ಜಿಲ್ಲೆಗೆ ಮಾದರಿಯಾಗಿದೆ.
ಕೇವಲ ಕಾಗದದ ಮೇಲಷ್ಟೇ ಗುರಿ ಸಾಧಿಸದೆ ವಾಸ್ತವದಲ್ಲಿ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರ ಹಿತರಕ್ಷಣೆ ಹಾಗೂ ಸೌಲಭ್ಯ ಕಲ್ಪಿಸುವಲ್ಲಿ ಹರಪನಹಳ್ಳಿ ತಾಪಂ ಸಿಬ್ಬಂದಿ ಯಶಸ್ಸು ಕಂಡಿದೆ. ತಾಲೂಕಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಅನುಷ್ಠಾನವು ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಸಾಗುತ್ತಿದ್ದು, ದೈನಂದಿನ ಪ್ರಗತಿ ವರದಿ ಜಿಲ್ಲೆಯಲ್ಲೇ ಅಗ್ರಸ್ಥಾನದಲ್ಲಿವೆ.
37 ಪಂಚಾಯಿತಿಗಳಲ್ಲಿ ಕಾಮಗಾರಿ ಆರಂಭ: ತಾಲೂಕಿನಲ್ಲಿ ಒಟ್ಟು 37 ಗ್ರಾಪಂಗಳಿದ್ದು, ಜಿಲ್ಲೆಯಲ್ಲೇ ದಾಖಲೆ ಎಂಬಂತೆ ಬರೋಬ್ಬರಿ 37 ಗ್ರಾಪಂಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ, ಇದು ಗ್ರಾಮ ಮಟ್ಟದಲ್ಲಿ ಕೆಲಸದ ಸಕ್ರಿಯತೆ ಸ್ಪಷ್ಟಪಡಿಸುತ್ತದೆ.
ಮೇಟಿಗಳಿಗೆ ವಾಟರ್ ಕ್ಯಾನ್: ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ಗೌರವಯುತ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು ಆಡಳಿತದ ಆದ್ಯತೆಯಾಗಿದೆ. ಕಾಮಗಾರಿ ಸ್ಥಳದಲ್ಲಿ ಮಣ್ಣು ಅಗೆಯುವಾಗ ಅಥವಾ ಕಲ್ಲು ಮುಳ್ಳುಗಳಿಂದ ಸಣ್ಣಪುಟ್ಟ ಗಾಯಗಳಾದರೆ ತಕ್ಷಣ ಚಿಕಿತ್ಸೆ ನೀಡಲು ಪ್ರತಿಯೊಂದು ಕಾಮಗಾರಿ ಸ್ಥಳದಲ್ಲೂ ಬ್ಯಾಂಡೇಜ್, ಮುಲಾಮು, ಸೋಂಕು ನಿವಾರಕಗಳನ್ನು ಒಳಗೊಂಡ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಇರಿಸಲಾಗಿದೆ.
ಬಿಸಿಲಿನಲ್ಲಿ ಶ್ರಮಿಸುವ ಕೂಲಿಕಾರರಿಗೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಲು, ಪ್ರತಿ ಕೆಲಸದ ಗುಂಪಿನ ಮೇಟಿಗೆ ಪ್ರತ್ಯೇಕವಾದ ದೊಡ್ಡ ನೀರಿನ ಕ್ಯಾನ್ಗಳನ್ನು ವಿತರಿಸಲಾಗಿದೆ. ದಿನವಿಡೀ ಶುದ್ಧ ಮತ್ತು ತಂಪಾದ ಕುಡಿಯುವ ನೀರು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಾರ್ಮಿಕರು ಕೂಲಿಕಾರ ಕೆಲಸ ಕೇಳಿ ಬೇಡಿಕೆ ಸಲ್ಲಿಸಿದರೆ ಒಂದು ದಿನವೂ ವಿಳಂಬ ಮಾಡದೆ ಉದ್ಯೋಗ ಒದಗಿಸಬೇಕು. ಯಾರೊಬ್ಬರಿಗೂ ಕೆಲಸವಿಲ್ಲ ಎಂದು ಹೇಳುವಂತಿಲ್ಲ. ಅರ್ಜಿ ಸಲ್ಲಿಸಿದ ಎಲ್ಲರಿಗೂ ತಕ್ಷಣ ಎನ್ಎಂಆರ್ ಸೃಜಿಸಿ ಕೆಲಸ ಆರಂಭಿಸಬೇಕು. ಅದೇ ರೀತಿ ಕಾಮಗಾರಿ ನಡೆಯುವ ಪ್ರತಿ ಸ್ಥಳದಲ್ಲೂ ನೆರಳು, ಕುಡಿಯುವ ನೀರು ಹಾಗೂ ವೈದ್ಯಕೀಯ ಕಿಟ್ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ತಾಪಂ ಇಒ ಅವರು ಪಿಡಿಒಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಆದೇಶದ ಹಿನ್ನೆಲೆ ತಾಲೂಕಿನ ಗ್ರಾಪಂಗಳು ಸಂಪೂರ್ಣ ಸನ್ನದ್ಧವಾಗಿದ್ದು, ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ತಕ್ಷಣ ಕೆಲಸ ನೀಡುವ ಮೂಲಕ ವಲಸೆ ತಡೆಗಟ್ಟುವಲ್ಲಿ ಯಶಸ್ವಿಯಾಗಿವೆ.
ಹರಪನಹಳ್ಳಿ ತಾಲೂಕಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಸಮುದಾಯ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಕಾಯ್ದೆಯ ಅನುಸಾರ ಈಗಾಗಲೇ ನೆರಳು, ಕುಡಿಯುವ ನೀರು, ಮೆಡಿಕಲ್ ಕಿಟ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಜಿಲ್ಲಾದ್ಯಂತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ವಿಜಯನಗರ ಜಿಪಂ ಸಿಇಒ ಗರಿಮಾ ಪನ್ವಾರ್ ತಿಳಿಸಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆಯು ಕೇವಲ ಒಂದು ಸರ್ಕಾರಿ ಯೋಜನೆಯ ಅನುಷ್ಠಾನವಾಗಿ ಉಳಿಯದೆ, ಶ್ರಮಿಕ ವರ್ಗದ ಬದುಕಿಗೆ ಭರವಸೆ ತುಂಬುವ ಜನಪರ ಆಂದೋಲನವಾಗಿ ಮಾರ್ಪಟ್ಟಿದೆ. ಮೇಲ್ವಿಚಾರಣೆ, ಮಾನವೀಯ ಸ್ಪಂದನೆ ಹಾಗೂ ಕೂಲಿಕಾರರ ಮೂಲಸೌಕರ್ಯಗಳ ಸಮರ್ಪಕ ನಿರ್ವಹಣೆ ಮೂಲಕ ನಮ್ಮ ಗ್ರಾಪಂಗಳು ಮಾದರಿಯಾಗಿ ನಿಂತಿವೆ ಎಂದು ಹರಪನಹಳ್ಳಿ ತಾಪಂ ಇಒ ಚಂದ್ರಶೇಖರ್ ವೈ.ಎಚ್. ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.