ಹುಳಸೆಕೇರಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಮೂರನೇ ದಿನ ನಡೆಯುವ ಪ್ರಸ್ತುತ ಆಗು ಹೋಗುಗಳ ದೃಶ್ಯ ರೂಪಕಗಳ ಹಗಣ ನಡೆಯಿತು.
ಕನ್ನಡಪ್ರಭ ವಾರ್ತೆ ಗೋಕರ್ಣ
ಹುಳಸೆಕೇರಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಮೂರನೇ ದಿನ ನಡೆಯುವ ಪ್ರಸ್ತುತ ಆಗು ಹೋಗುಗಳ ದೃಶ್ಯ ರೂಪಕಗಳ ಹಗಣ ನಡೆಯಿತು. ಮಧ್ಯ ಪ್ರಾಚ್ಯ ದೇಶಗಳ ಯುದ್ಧ ಪರಿಣಾಮದಿಂದಾದ ಅನಿಲ ಕೊರೆತೆ ಹಾಗೂ ಭಾರತದ ಹಡಗು ಶಿವಾಲಿಕ ಎಲ್.ಪಿ.ಜಿ. ಹೊತ್ತು ಹಾರ್ಮುಜ್ ಜಲಸಂಧಿ ದಾಟಿ ಬಂದ ದೃಶ್ಯ, ಇದರ ಪಕ್ಕದಲ್ಲೇ ಅಮೇರಿಕಾದ ಹಡಗನ್ನ ತಡೆದ ಇರಾನ್ ಇದು ಎಲ್ಲರ ಗಮನ ಸೆಳೆಯಿತು. ಇತ್ತೀಚೆಗೆ ಸರ್ಕಾರಿ ಜಾಗದಲ್ಲಿ ಕಟ್ಟಿದ ರೆರ್ಸಾಟ್ ತೆರವು ಕಾರ್ಯಾಚರಣೆಗೆ ಬಂದ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶದ ತಡೆ, ಇನ್ನೊಂದೆಡೆ ರಾಜಕಾರಣಿಗಳ ಒತ್ತಡ, ಇವೆರಡರ ನಡುವೆ ಪೇಜಿಗೆ ಸಿಲುಕಿದ ಅಧಿಕಾರಿಗಳ ಪರಿಸ್ಥಿಯ ಕುರಿತ ರೂಪಕ ವಾಸ್ತವತೆಯನ್ನ ತೆರೆದಿಟ್ಟಿತ್ತು. ಗ್ರಾಪಂ ಪ್ರವಾಸಿ ತಾಣದಲ್ಲಿ ಸ್ವಚ್ಛತೆಯನ್ನ ಸರಿಯಾಗಿ ನಿಭಾಹಿಯಿಸದ ಬಗ್ಗೆ, ಕಸ ತೆಗೆದುಕೊಳ್ಳಲು ಹಣ ತೆಗೆದುಕೊಳ್ಳುತ್ತಿರುವುದನ್ನ ನೇರವಾಗಿ ಬಿಂಬಿಸಲಾಗಿತ್ತು.ಮಕ್ಕಳಿಗೆ ಓದಿನ ಬಗ್ಗೆ ಹೆಚ್ಚು ಒತ್ತಡ ನೀಡಿ ಮಾನಸಿಕತೆಗೆ ಒಳಪಡಿಸದಂತೆ ಪಾಲಕರಿಗೆ ತಿಳುವಳಿಕೆ, ಸಾಮಾಜಿಕ ಜಾಲತಾಣದಿಂದ ಆಗುವ ಕೆಟ್ಟ ಪರಿಣಾಮ ತಡೆ, ಮಾನಸಿಕ ಒತ್ತಡ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳದಂತೆ ತಿಳಿಸುವ ದೃಶ್ಯ ಸಮಾಜಕ್ಕೆ ಉತ್ತಮ ಸಂದೇಶ ನೀಡಿತ್ತು. ಇದರಂತೆ ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್ ಬಳಸದಂತೆ ತಿಳುವಳಿಕೆ ಜೊತೆ, ಪ್ಲಾಸ್ಟಿಕ್‌ನಿಂದ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಬೀರುವ ದುಷ್ಪರಿಣಾಮ ತಿಳಿಸುವ ರೂಪಕ, ಹಾಲಕ್ಕಿ ಸಮಾಜದ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಹೆಣ್ಣು- ಗಂಡು ಸಮಾನ ಬದಲಾವಣೆ ತನ್ನಿ ಎನ್ನುವ ಸಂದೇಶ ಹೊತ್ತು, ಮಹಿಳೆ ವೈದ್ಯೆ, ಪೊಲೀಸ್, ನ್ಯಾಯಾಧೀಶೆ ಹೀಗೆ ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದು ಕಾರ್ಯನಿರ್ವಹಿಸುತ್ತಿರುವ ದೃಶ್ಯ ಬಹುವಿಶೇಷವಾಗಿತ್ತು. ಇನ್ನೂ ಗ್ಯಾಸ್ ಸಿಲಿಂಡರ್ ಕೊರೆತೆ ಮತ್ತಿತರ ಕಷ್ಟದ ಕುರಿತು ಭಗವಂತನೇ ಧರೆಗಿಳಿದು ಬಂದ ದೃಶ್ಯ. ಕೃಷ್ಣ ರಾಧೆಯರು, ಮತ್ತಿತರ ಆಕರ್ಷಕ ರೂಪಕಗಳು ಜನರನ್ನ ಆಕರ್ಷಿಸಿತು. ನಾಗಾಸಾಧುಗಳು, ಹಂದಿ ಹೊತ್ತು ಸಾಗುವ ಕಾಡು ಮನುಷ್ಯರು, ಮರಕಾಲು ಕಟ್ಟಿ ನಡೆಯುವ ವ್ಯಕ್ತಿ, ಅಜ್ಜ, ಅಜ್ಜಿ, ವೇಷಧಾರಿಯಾಗಿ ಓಡಾಟ, ವಿವಿಧ ಗೊಂಬೆಗಳ ವೇಷಧಾರಿಗಳು ಜನಸಾಗರದ ಮಧ್ಯೆ ಸಾಗುತ್ತಾ ಹಗಣದ ಮೆರಗು ಹೆಚ್ಚಿಸಿದರು. ಇವೆಲ್ಲದರ ನುಡುವೆ ಸಾಂಪ್ರದಾಯಿಕ ಸುಗ್ಗಿ ತಂಡ ಯಕ್ಷಗಾನ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ತೆರಳಿತು. ಸ್ಥಳೀಯರು, ಪ್ರವಾಶಸಿಗರು ಸೇರಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಬಹುಮಾನ;ಇನ್ನೂ ಉತ್ತಮ ರೂಪಕಗಳಿಗೆ ಸಾಮಾಜಿಕ ಕಾರ್ಯಕರ್ತ ಸಂತೋಷ ಅಡಿ ಬಹುಮಾನ ನೀಡಿದ್ದು, ಹರೀಶ ಗೌಡ, ನಾಗರಾಜ ಗೌಡ ನೇತೃತ್ವದ ಆತ್ಯಹತ್ಯೆ ತಡೆ, ಅತ್ಯಾಚಾರಿಗಳ ಬಗ್ಗೆ ಜಾಗೃತಿ, ಸಾಮಾಜಿಕ ಜಾಲತಾಣದ ಅತಿ ಬಳಕೆಯ ದುಷ್ಪರಿಣಾಮ ಕುರಿತ ರೂಪಕಕ್ಕೆ ಪ್ರಥಮ ಸ್ಥಾನ, ಗಂಡು- ಹೆಣ್ಣು ಸಮಾನ, ಹೆಣ್ಣು ವಿದ್ಯೆ ಕಲಿತು ಸಾಮಾಜಿಕವಾಗಿ ಮುಂದೆಬರಬೇಕು ಎನ್ನು ಸಂದೇಶ ಹೊತ್ತ ಅಭಿ, ಪಲ್ಲವಿಯ ಮತ್ತಿತರ ವಿದ್ಯಾರ್ಥಿನಿಯ ತಂಡಕ್ಕೆ ಎರಡನೇ ಬಹುಮಾನ, ಹಾಲಕ್ಕಿ ಒಕ್ಕಲಿಗ ಸಮಾಜದ ಹಿರಿಯರು ಪ್ರಮುಖರಾದ ಸೋಮ ಗೌಡ ಪ್ರಸ್ತುತ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಕುರಿತ ದೃಶ್ಯಕ್ಕೆ 3ನೇ ಸ್ಥಾನ ನೀಡಲಾಯಿತು. ಪಿಎಸ್‌ಐ ಅನಿಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಉದ್ಯಮಿ ಗೋವಿಂದ ಗೌಡ, ಗೋಪಾಲ ಗೌಡ ಬಹುಮಾನ ವಿತರಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ, ಹಾಲಕ್ಕಿ ಸಮಾಜದವರು ಉಪಸ್ಥಿತರಿದ್ದರು. ಫಾರಿನ್ ಜೋಡಿ:
ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಗಣದಲ್ಲಿ ವಿದೇಶಿಗರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಷ್ಯಾದ ದಂಪತಿ ತಮ್ಮ ವಿಶೇಷ ಪೋಷಾಕಿನೊಂದಿಗೆ ಅತ್ತಿತ್ತ ಸಾಗುತ್ತಾ, ತಾವು ವಾಸ್ತವ್ಯ ಮಾಡಿದ್ದ ಹಾಲಕ್ಕಿ ಸಮಾಜದವರ ಮನೆಯವರೊಂದಿಗೆ ಬೆರತು ಗಮನ ಸೆಳೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.