ಕಾರವಾರ: ಸೆಕೆ ಹಾವಳಿಯಿಂದ ನಿರ್ಮಾಣ ಕಾಮಗಾರಿ, ಬೇಕರಿ, ರಸ್ತೆ ಕಾಮಗಾರಿ, ಕೂಲಿ ಕಾರ್ಮಿಕರು ತತ್ತರಿಸಿದ್ದಾರೆ.
ಕರಾವಳಿಯಲ್ಲಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಈಗ ಮಾಮೂಲಿ ಎಂಬಂತಾಗಿದೆ. ಅದರಲ್ಲೂ ತೇವಾಂಶ 80-85 ಇರುವುದರಿಂದ ತೀವ್ರ ಸೆಕೆಯ ಅನುಭವ ಉಂಟಾಗುತ್ತಿದೆ. ಜನತೆ ಬಿರು ಬಿಸಿಲಿನಲ್ಲಿ ಮನೆಯಿಂದ ಹೊರಬೀಳಲೂ ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಹೀಗಿರುವಾಗ ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ದುಡಿಯುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.
ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರು ಬಿಸಿಲಿನ ಝಳಕ್ಕೆ ಬಸವಳಿಯುತ್ತಿದ್ದಾರೆ. ಬಿರು ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಹೊಟ್ಟೆ ತುಂಬಿಕೊಳ್ಳಬೇಕೆಂದರೆ ದುಡಿಯಲೇಬೇಕಾಗಿದೆ. ಬೆವರು ಸುರಿಸುತ್ತ ಕೆಲಸ ಮಾಡುತ್ತಿರುವ ನೋಟ ಈಗ ಎಲ್ಲೆಡೆ ಕಂಡುಬರುತ್ತಿದೆ.ಬೇಕರಿಗಳಲ್ಲಿ ಬಟ್ಟಿಯ ಎದುರು ಕೆಲಸ ಮಾಡಬೇಕು. ಮಿತಿಮೀರಿದ ಉಷ್ಣಾಂಶ, ಜತೆಗೆ ಸುಡುವ ಬೆಂಕಿಯ ಎದುರು ದುಡಿಯಬೇಕು. ಕೆಲಸಗಾರರು ಬೇಕರಿಗಳನ್ನು ತೊರೆಯುತ್ತಿದ್ದಾರೆ. ಆದರೆ ಮಾಲೀಕರಿಗೆ ಜೀವನ ನಿರ್ವಹಣೆ ಆಗಲೇಬೇಕು. ಉತ್ಪಾದನೆ ಕಡಿಮೆಯಾದರೂ ದುಡಿಯಲೇಬೇಕಾದ ಅನಿವಾರ್ಯತೆ ಇದೆ.
ಅಂಗಡಿ ಮಳಿಗೆಗಳು, ಹೊಟೇಲ್ ಗಳು ಹಾಗೂ ವಿವಿಧೆಡೆಯಲ್ಲಿನ ಕೆಲಸಗಾರರು ಕೂಡ ಈಗ ಸೆಕೆಯ ದಳ್ಳುರಿಯಲ್ಲೇ ಕೆಲಸ ಮಾಡುವಂತಾಗಿದೆ. ಅದರಲ್ಲೂ ವಿದ್ಯುತ್ ಕೈಕೊಟ್ಟಲ್ಲಿ ಫ್ಯಾನ್ ಕೂಡ ಬಂದ್ ಆಗಿ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಸೆಕೆಯ ತೀವ್ರತೆ ಕಳೆದು ಮಳೆ ಬಂದರೆ ಸಾಕು ಎಂದು ಜನತೆ ಪ್ರಾರ್ಥಿಸುತ್ತಿದ್ದಾರೆ.