ಪ್ರಸಾದ್ ನಗರೆ
ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಹೊಸ ವೇಗ ಸಿಕ್ಕಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳು ತಮ್ಮ ರಾಜಕೀಯ ಲೆಕ್ಕಾಚಾರಗಳನ್ನು ಆರಂಭಿಸಿದ್ದಾರೆ. ಮೀಸಲಾತಿ ಪ್ರಕಟಣೆಯಿಂದಾಗಿ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಸ್ಪರ್ಧಿಸುವ ಅವಕಾಶ ದೊರೆತರೆ, ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ರಾಜಕೀಯವಾಗಿ ಗುರುತಿಸಿಕೊಂಡಿರುವ ಮುಖಂಡರು ತಮ್ಮ ಮುಂದಿನ ನಡೆ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.ಮಹಿಳಾ ಅಭ್ಯರ್ಥಿಗಳ ಹುಡುಕಾಟ: ವಿಶೇಷವಾಗಿ ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಹುಡುಕಾಟ ಆರಂಭವಾಗುವ ಸಾಧ್ಯತೆಯಿದೆ. ಪಕ್ಷಗಳ ಪ್ರಮುಖ ಮುಖಂಡರು ತಮ್ಮ ಕುಟುಂಬದ ಸದಸ್ಯರು, ರಾಜಕೀಯವಾಗಿ ಗುರುತಿಸಿಕೊಂಡಿರುವ ಮಹಿಳಾ ಕಾರ್ಯಕರ್ತರು ಹಾಗೂ ಸ್ಥಳೀಯವಾಗಿ ಜನಬೆಂಬಲ ಹೊಂದಿರುವ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಿದ್ದಾರೆ.ಇನ್ನೊಂದೆಡೆ, ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಹಳೆಯ ಮತ್ತು ಹೊಸ ರಾಜಕೀಯ ಮುಖಂಡರ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ. ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳಲ್ಲಿ ಆಯಾ ವರ್ಗದ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯವೂ ರಾಜಕೀಯ ಪಕ್ಷಗಳಿಗೆ ಸವಾಲಾಗಲಿದೆ.ಆಯ್ಕೆಯ ಸವಾಲು: ತಾಲೂಕಿನಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸುವ ನಿರೀಕ್ಷೆಯಿದೆ. ಪಕ್ಷದ ಸಂಘಟನೆ, ಗ್ರಾಮಮಟ್ಟದ ಜನಸಂಪರ್ಕ, ಹಿಂದಿನ ಸ್ಥಳೀಯ ಚುನಾವಣೆಯ ಪ್ರಭಾವ, ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಹಾಗೂ ಗೆಲ್ಲುವ ಸಾಮರ್ಥ್ಯ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.ಕೇವಲ ಪಕ್ಷದ ಪ್ರಭಾವವೊಂದೇ ಗೆಲುವಿಗೆ ಸಾಕಾಗುವುದಿಲ್ಲ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಿಕೆ, ಜನರೊಂದಿಗೆ ನಿರಂತರ ಸಂಪರ್ಕ, ಗ್ರಾಮೀಣ ಭಾಗದ ಅಭಿವೃದ್ಧಿಗೆ ನೀಡಿದ ಕೊಡುಗೆ ಮತ್ತು ಜನರ ವಿಶ್ವಾಸ ಗಳಿಸಿರುವುದು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.ಗ್ರಾಮೀಣ ಜನರ ನಿರೀಕ್ಷೆಗಳೇನು?: ಹಲವು ವರ್ಷಗಳಿಂದ ಚುನಾಯಿತ ಸ್ಥಳೀಯ ಪ್ರತಿನಿಧಿಗಳ ಆಡಳಿತಕ್ಕಾಗಿ ಕಾಯುತ್ತಿರುವ ಗ್ರಾಮೀಣ ಜನರಿಗೆ ಈ ಚುನಾವಣೆ ಮಹತ್ವದ್ದಾಗಿದೆ. ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿದೀಪ, ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಜನಪ್ರತಿನಿಧಿಗಳು ಆಯ್ಕೆಯಾಗಬೇಕು ಎಂಬುದು ಜನರ ನಿರೀಕ್ಷೆಯಾಗಿದೆ.
ಬಿಜೆಪಿ ಸಿದ್ಧ: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ರಾಜ್ಯ ನಾಯಕರಿಂದ ಸೂಚನೆ ಬಂದ ಬಳಿಕ ಅಭ್ಯರ್ಥಿಗಳ ತೀರ್ಮಾನ ಆಗುತ್ತದೆ. ನಮ್ಮಲ್ಲಿ ವಿವಿಧ ಮೋರ್ಚಾಗಳಿದ್ದು, ಸ್ಥಳೀಯವಾಗಿ ಪಕ್ಷ ಸಂಘಟನೆ ಬಲವಾಗಿದೆ. ಅಲ್ಲದೆ ಮಹಿಳೆಯರಿಗೆ ಹೆಚ್ಚಿನ ಸೀಟು ಪ್ರಕಟವಾಗಿದೆ. ನಮ್ಮಲ್ಲೂ ಸೂಕ್ತ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ. ಈ ಚುನಾವಣೆಯನ್ನು ಗೆಲ್ಲುವ ಮೂಲಕ ಜಿಲ್ಲೆ ಮತ್ತು ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ತಿಳಿಸಿದರು.