ಗುಣಮಟ್ಟದ ಕಾಮಗಾರಿ ಮರೆತ ಹೆದ್ದಾರಿ ಪ್ರಾಧಿಕಾರಿ

KannadaprabhaNewsNetwork |  
Published : Dec 14, 2024, 12:47 AM IST
ಸಿಕೆಬಿ-6 ನಗರದ ಎಂಜಿ ರಸ್ತೆಯಲ್ಲಿ ಹೆದ್ದಾರಿ ಅಗಲೀಕರಣ ವೇಳೆ ಜಕ್ಕಲಮೊಡಗು ಕುಡಿಯುವ ನೀರಿನ ಮುಖ್ಯ ಪೈಪ್ ಲೈನ್ ಮೇಲೆ ಚರಂಡಿ ಕಾಮಗಾರಿ ನಡೆಸುತ್ತಿರುವುದನ್ನು ವೀಕ್ಷಸುತ್ತಿರುವ ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್ | Kannada Prabha

ಸಾರಾಂಶ

ನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವ ವೇಳೆ ನಗರಸಭೆ ಎಂಜಿನಿಯರ್‌ಗಳನ್ನು ಮುಂದಿಟ್ಟುಕೊಂಡು ಕಾಮಗಾರಿ ನಡೆಸಬೇಕಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಗರಸಭೆಗೆ ಮಾಹಿತಿಯನ್ನೇ ನೀಡದೆ ತಮಗೆ ಇಷ್ಟ ಬಂದ ರೀತಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಚರಂಡಿ ತ್ಯಾಜ್ಯ ಜಕ್ಕಲಮಡಗು ಪೈಪ್‌ಲೈನ್‌ಗೆ ಸೇರಿ, ಅದೇ ತ್ಯಾಜ್ಯ ಮಿಶ್ರಿತ ನೀರು ನಗರದ ಜನತೆ ಸೇವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗುಣಮಟ್ಟದ ರಸ್ತೆಯನ್ನು ನಗರದಲ್ಲಿ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಲಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆ ಮಾಧ್ಯಮದ ಮುಂದೆ ಹೇಳಿದ್ದರು. ಆದರೆ ಪ್ರಸ್ತುತ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ನೋಡಿದರೆ ಅವರು ಹೇಳಿದ್ದು ಕೇವಲ ಮಾತುಗಳು, ಅವು ಕೃತಿಗೆ ಇಳಿದಿಲ್ಲ ಎಂದು ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಮತ್ತು ಚಿತ್ರಗಳನ್ನು ಹಂಚಿ ಕೊಂಡಿರುವ ಅವರು, ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಚರಂಡಿ ತ್ಯಾಜ್ಯ ಜಕ್ಕಲಮಡಗು ಪೈಪ್‌ಲೈನ್‌ಗೆ ಸೇರಿ, ಅದೇ ತ್ಯಾಜ್ಯ ಮಿಶ್ರಿತ ನೀರು ನಗರದ ಜನತೆ ಸೇವಿಸುವಂತಾಗಿದೆ. ಪದೇ ಪದೇ ಮನವಿ ಮಾಡಿದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ

ಎಂಜಿ ರಸ್ತೆಯ ದರ್ಗಾ ಮೊಹಲ್ಲಾ ಮುಂದೆ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲು ಮಾಡುವ ಜೊತೆಗೆ ಕಳೆದ ಮೂರು ದಿನಗಳಿಂದ ನಗರದ ಜನತೆಗೆ ನೀರಿಲ್ಲದಂತೆ ಮಾಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವ ವೇಳೆ ನಗರಸಭೆ ಎಂಜಿನಿಯರ್‌ಗಳನ್ನು ಮುಂದಿಟ್ಟುಕೊಂಡು ಕಾಮಗಾರಿ ನಡೆಸಬೇಕಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಗರಸಭೆಗೆ ಮಾಹಿತಿಯನ್ನೇ ನೀಡದೆ ತಮಗೆ ಇಷ್ಟ ಬಂದ ರೀತಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಇದರ ಪರಿಣಾಮ ದರ್ಗಾ ಮಹಲ್ಲಾ ಮುಂದೆ ಪೈಪ್‌ಲೈನ್ ಒಡೆದು, ನೀರು ಪೋಲಾಗಿದೆ. ಸಾಲದೆಂಬಂತೆ ಮೂರು ದಿನಗಳಿಂದ ನಾಗರಿಕರಿಗೆ ನೀರು ನೀಡಲು ಸಾಧ್ಯವಾಗಿಲ್ಲ. ಈ ಹಿಂದೆ ಸಾಮಾನ್ಯ ಸಭೆಗೆ ಬರುವಂತೆ ಹೆದ್ದಾರಿ ಪ್ರಾಧಿಕಾರಿದ ಅಧಿಕರಿಗಳಿಗೆ ಪತ್ರ ಬರೆದಿದ್ದರೂ ಸಭೆಗೆ ಬಂದಿಲ್ಲ. ಶೀಘ್ರದಲ್ಲಿಯೇ ಮತ್ತೊಂದು ಸಭೆ ಕರೆದಿದ್ದು, ಆ ಸಭೆಗಾದರೂ ಬಂದು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ನಾಗರಾಜ್ ಸಲಹೆ ಮಾಡಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ