ಕರಗುತ್ತಿದೆ ಹಿಪ್ಪರಗಿ, ಜಲಕಂಟಕ ಭೀತಿ !

KannadaprabhaNewsNetwork |  
Published : Mar 17, 2026, 03:00 AM IST
ಖಾಲಿಯಾಗುತ್ತಿದೆ ಹಿಪ್ಪರಗಿ ಜಲಾಶಯ! | Kannada Prabha

ಸಾರಾಂಶ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರು, ಸಾರ್ವಜನಿಕರ ಪಾಲಿಗೆ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯದಲ್ಲಿನ ನೀರು ಬಿರು ಬೇಸಿಗೆಯಿಂದ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರು, ಸಾರ್ವಜನಿಕರ ಪಾಲಿಗೆ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯದಲ್ಲಿನ ನೀರು ಬಿರು ಬೇಸಿಗೆಯಿಂದ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಸದ್ಯ ೨.೮೫ ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಿದ್ದು, ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡದಿದ್ದರೆ ಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ.

ಹಿಪ್ಪರಗಿ ಜಲಾಶಯದಿಂದ ಪ್ರತಿದಿನ ೦.೦೭ ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಜನತೆಯ ಬಳಕೆ ಒಂದು ಕಾರಣವಾದರೆ, ಬಿರುಬಿಸಿಲಿನ ತಾಪಕ್ಕೆ ನೀರು ಬಾಷ್ಪೀಕರಣಗೊಂಡು ಜಲಾಶಯದಲ್ಲಿನ ನೀರು ಕಡಿಮೆಯಾಗುತ್ತಿದೆ.

ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿದೆ. ಇದೇ ರೀತಿ ಪ್ರತಿ ದಿನ ಖಾಲಿಯಾದರೆ ಮೇ ಎರಡನೇ ವಾರದಲ್ಲಿ ನೀರು ಸಂಪೂರ್ಣ ಖಾಲಿಯಾಗಬಹುದೆಂದು ಅಂದಾಜಿಸಲಾಗಿದೆ.

ನೀರು ಬಿಡುಗಡೆಯಾದರೆ ಕೊಂಚ ನಿರಾಳ: ಪ್ರತಿವರ್ಷ ಬೇಸಿಗೆ ಸಂದರ್ಭ ಹಿಪ್ಪರಗಿ ಜಲಾಶಯದಿಂದ ಮುಂಭಾಗಕ್ಕೆ ಅಂದಾಜು ಸುಮಾರು ೦.೫ ಟಿಎಂಸಿಯಷ್ಟು ನೀರನ್ನು ಜಮಖಂಡಿ ಭಾಗಕ್ಕೆ ಕುಡಿಯುವ ನೀರಿನ ಸಲುವಾಗಿ ಬಿಡುಗಡೆಗೊಳಿಸುತ್ತಿದ್ದರು. ಪ್ರಸಕ್ತ ವರ್ಷ ಗೇಟ್ ನಂ.೨೨ರಲ್ಲಿ ಆಗಿರುವ ಅವಘಡದಿಂದ ೨ ಟಿಎಂಸಿಗೂ ಹೆಚ್ಚು ನೀರು ಪೋಲಾಗಿದ್ದು, ಇದರ ಪರಿಣಾಮವಾಗಿ ಹಿಪ್ಪರಗಿ ಬ್ಯಾರೇಜ್‌ ಹಿನ್ನೀರಿನಲ್ಲಿರುವ ನಗರ, ಗ್ರಾಮ ಹಾಗೂ ರೈತ- ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಬೇಸಿಗೆ ಮುಗಿಯುವವರೆಗೂ ಇದೇ ನೀರು ನಿಯಂತ್ರಣದಲ್ಲಿದ್ದರೆ ಮಾತ್ರ ಮೇ ಮಧ್ಯಂತರವರೆಗೆ ಪರಿಸ್ಥಿತಿ ನಿಭಾಯಿಸಬಹುದು.

ಹಿಪ್ಪರಗಿ ಜಲಾಶಯದ ಗೇಟು ಕಿತ್ತುಹೋದಾಗ ಭಾರೀ ಪ್ರಮಾಣದಲ್ಲಿ ಹೈಡ್ರಾಮಾ ನಡೆಸಿದ್ದ ಜನಪ್ರತಿನಿಧಿಗಳು, ವಿಪಕ್ಷ ಧುರೀಣರು ಇದೀಗ ಕೃಷ್ಣೆಯ ಒಡಲು ಸಂಪೂರ್ಣ ಖಾಲಿಯಾಗುತ್ತಿದ್ದರೂ ತುಟಿ ಪಿಟಕ್ ಎನ್ನುತ್ತಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಿ ಕೃಷ್ಣೆಗೆ ನೀರು ಬಿಡಿಸಲು ಕಾಳಜಿ ತೋರಿಸುತ್ತಿಲ್ಲವೇಕೆ ಎಂಬುದು ಜನರ ಪ್ರಶ್ನೆಯಾಗಿದೆ. ಜನರ ಆಶೋತ್ತರಕ್ಕೆ ಯಾರು ಸ್ಪಂದಿಸುವರೋ ಕಾದು ನೋಡಬೇಕಿದೆ.ಕೃಷ್ಣಾ ನದಿ ನೀರು ಮೇ ೧೫ರವರೆಗೆ ಬರಬಹುದು. ಆದರೂ ಮುಂಜಾಗ್ರತಾ ಕ್ರಮವಾಗಿ ನಗರಸಭೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಮಿತವ್ಯಯವಾಗಿ ನೀರು ಬಳಕೆ ಮಾಡಬೇಕು. ನಿಂತ ನೀರು ಪೂರೈಕೆಯಾಗುವುದರಿಂದ ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಬೇಕು.

-ರಮೇಶ ಜಾಧವ ಪೌರಾಯುಕ್ತರು ನಗರಸಭೆ ರಬಕವಿ-ಬನಹಟ್ಟಿಹಿಪ್ಪರಗಿ ಜಲಾಶಯದಲ್ಲಿ ಗೇಟ್‌ ಅವಘಡದಿಂದ ನೀರಿನ ಪ್ರಮಾಣ ಕಡಿಮೆಯಿದೆ. ಜಲಾಶಯದ ನೀರಿನ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ಪೋಲು ಮಾಡದೇ ಕಾಳಜಿಯಿಂದ ಬಳಕೆ ಮಾಡಬೇಕು.

- ವಿ.ಎಸ್. ನಾಯಕ ಸಹಾಯಕ ಅಭಿಯಂತರ ಹಿಪ್ಪರಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಸಿಯನ್‌ ಹೇರಿ ಕನ್ನಡ ಕೊಲೆ ಮಾಡಿದ ಟಿಪ್ಪು: ಸಿ.ಟಿ. ರವಿ
ಲೇಡಿಗೋಶನ್‌ : ಗುತ್ತಿಗೆದಾರರ ಬಾಕಿ ಮೊತ್ತ ಲೋಕ ಅದಾಲತ್‌ನಲ್ಲಿ ಇತ್ಯರ್ಥ