ಬಸವನಬಾಗೇವಾಡಿ ಆದರ್ಶ ಮತಕ್ಷೇತ್ರವಾಗಿಸುವ ಆಶಯ

KannadaprabhaNewsNetwork | Published : Jun 29, 2025 1:33 AM

ನಾನು ಬಸವನಬಾಗೇವಾಡಿ ಕ್ಷೇತ್ರಕ್ಕೆ ಬರಬೇಕು ಎನ್ನುವದು ಬಸವೇಶ್ವರರ ಪ್ರೇರಣೆಯಾಗಿತ್ತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

2004ರಲ್ಲಿ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಬಂದಿದ್ದು, ಕಳೆದ 20 ವರ್ಷದಲ್ಲಿ ಮತಕ್ಷೇತ್ರದ ಜನರ ಆಶೀರ್ವಾದ ಫಲವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಕೈಗೊಳ್ಳುವ ಮೂಲಕ ಇದೊಂದು ಆದರ್ಶ ಮತಕ್ಷೇತ್ರವನ್ನಾಗಿಸುವ ಆಶಯ ಹೊಂದಿರುವುದಾಗಿ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಇಂಗಳೇಶ್ವರ ಎಲ್.ಟಿ ನಂ.1ನಲ್ಲಿ ಶನಿವಾರ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಉದ್ಘಾಟನೆ ಹಾಗೂ ಹೊಸ ಕೊಠಡಿಯ ಗುದ್ದಲಿ ಪೂಜೆ, ಜಲಜೀವನ ಮಿಷನ್ ಮತ್ತು ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಬಸವನಬಾಗೇವಾಡಿ ಕ್ಷೇತ್ರಕ್ಕೆ ಬರಬೇಕು ಎನ್ನುವದು ಬಸವೇಶ್ವರರ ಪ್ರೇರಣೆಯಾಗಿತ್ತು. ದಿ.ರಾಮಕೃಷ್ಣ ಹೆಗಡೆ ಅವರು ಅಡಿಗಲ್ಲು ಹಾಕಿದ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಸೌಭಾಗ್ಯ 2007ರಲ್ಲಿ ನನಗೆ ಸಿಕ್ಕಿತು. ಇದೀಗ ಕೃಷ್ಣ ನದಿಯಿಂದ ಭೀಮಾ ನದಿವರೆಗೆ ನೀರು ಹರಿಸಲಾಗಿದೆ. ಮುಂಬರುವ ದಿನಗಳಲ್ಲಿ ಸಂಪೂರ್ಣ ನೀರಾವರಿ ಮಾಡುವ ಭವಿಷ್ಯದಲ್ಲಿ ನಿಮ್ಮ ನೆಲ ಬಂಗಾರದ ಕಡ್ಡಿಯಾಗಲಿದೆ ಎಂದರು. ಈ ಮತಕ್ಷೇತ್ರವು ಪುಣ್ಯ ಕ್ಷೇತ್ರವಾಗಿದೆ. ರಾಜ್ಯದಲ್ಲಿಯೇ ಮಾದರಿ ರಸ್ತೆಗಳಿರುವ ಏಕೈಕ ಕ್ಷೇತ್ರ ಇದಾಗಿದೆ ಎಂದರೆ ತಪ್ಪಾಗಲಾರದು. ಹಂತ ಹಂತವಾಗಿ ಹೊಲಕ್ಕೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದ ಅವರು, ಮತಕ್ಷೇತ್ರವು ಮೂರು ತಾಲೂಕು ಹೊಂದಿದೆ. ನಾಲ್ಕು ಪಟ್ಟಣ ಪಂಚಾಯಿತಿ ಯನ್ನಾಗಿಸಲಾಗಿದೆ. ಒಂದು ಬಸವನಬಾಗೇವಾಡಿಯಲ್ಲಿ ಪುರಸಭೆ ಇದೆ. ಇದನ್ನು ಮುಂದಿನ ದಿನಗಳಲ್ಲಿ ನಗರಸಭೆ ಮಾಡುವ ಯೋಜನೆ ಇದೆ ಎಂದರು.

ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಾಲಕರು ತಮ್ಮ ಮಕ್ಕಳಿಗೆ ಸಿಗುವಂತೆ ಮಾಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಕರ್ನಾಟಕದಲ್ಲಿ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಇಲ್ಲ. ನಮ್ಮ ಸರ್ಕಾರದ ಲಾಭದಲ್ಲಿ ಶೇ.18ರಷ್ಟು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಪ್ರತಿ ವರ್ಷ 1 ಕೋಟಿ 4 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆಗಳು ಸಾರ್ವಜನಿಕರ ಆಸ್ತಿ. ಇದನ್ನು ಸಂರಕ್ಷಿಸಬೇಕು. ಅಬ್ದುಲ್ ಕಲಾಂ ಅವರು ಸರ್ಕಾರಿ ಶಾಲೆಯಲ್ಲಿ ಕಲಿತು ರಾಷ್ಟ್ರಪತಿಗಳಾಗುವ ಮೂಲಕ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಸಾಧನೆ ಮಾಡಿದ್ದು ನಮ್ಮ ಕಣ್ಣು ಮುಂದಿದೆ ಎಂದರು.

ಯಾರ ಮೇಲೂ ದೌರ್ಜನ್ಯ ಮಾಡದೇ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುವರು ಬಂಜಾರಾ ಸಮಾಜ ಬಾಂಧವರು. ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ತಮ್ಮ ಮಕ್ಕಳು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು. ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಜನರ ಬದುಕಿಗೆ ಸಹಕಾರವಾಗಿದೆ. ಉಳುವವನೇ ಒಡೆಯ ಮಾದರಿಯಲ್ಲಿ ಕಂದಾಯ ಗ್ರಾಮ ಯೋಜನೆಯಲ್ಲಿ ವಾಸಿಸುವವನೇ ಮನೆ ಒಡೆಯ ಎಂಬ ಯೋಜನೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ತಾಂಡಾದ ಜನರಿಗೂ ಹಕ್ಕು ಪತ್ರ ವಿತರಿಸಲಾಗುವದು ಎಂದರು.

ಸಾನ್ನಿಧ್ಯ ವಹಿಸಿದ್ದ ಚನ್ನಬಸವ ಸ್ವಾಮೀಜಿ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಶಿಕ್ಷಕ ಎ.ಎಲ್.ಗಂಗೂರ, ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮಾತನಾಡಿದರು.

ಸಾನಿಧ್ಯವನ್ನು ಸೋಮದೇವರಹಟ್ಟಿಯ ಜಗನು ಮಹಾರಾಜರು ವಹಿಸಿದ್ದರು. ಅಧ್ಯಕ್ಷತೆ ಇಂಗಳೇಶ್ವರ ಗ್ರಾಪಂ ಅಧ್ಯಕ್ಷ ಬನ್ನೆಪ್ಪ ಡೋಣೂರ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಕವಿತಾ ಚವ್ಹಾಣ, ಶರಣಪ್ಪ ಬಳ್ಳಾವೂರ, ಬಾಬು ಮಂಗಲು ಚವ್ಹಾಣ, ಬಾಳು ಬಸು ರಾಠೋಡ, ಶ್ರೀಶೈಲ ಚಾಂದಕವಟೆ, ತಿಪ್ಪರಾಯ ಡೊಳಗೊಂಡ, ಮಹಾಂತೇಶ ರಾಠೋಡ,ಮೋತಿಲಾಲ ಲಮಾಣಿ, ಸಿದ್ದು ಉಕ್ಕಲಿ, ಪ್ರಭು ಡಿಗ್ಗಾವಿ, ತಾಪಂ ಇಓ ಪ್ರಕಾಶ ದೇಸಾಯಿ, ಬಿಇಓ ವಸಂತ ರಾಠೋಡ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ. ಬಿ. ಗೊಂಗಡಿ, ಪಿಡಿಒ ವಿಜಯಕುಮಾರ ದೇವರನಾವದಗಿ ಇತರರು ಇದ್ದರು. ರಾಜು ರಾಠೋಡ ಸ್ವಾಗತಿಸಿ,ನಿರೂಪಿಸಿ, ವಂದಿಸಿದರು.