ಕಾರಟಗಿ: ಪಟ್ಟಣದ ಗ್ರಾಮದೇವತೆ ದ್ಯಾವಮ್ಮ ದೇವಸ್ಥಾನ ಪುನರ್ ನಿರ್ಮಾಣ ಕಾರ್ಯ ನಡೆದಿದ್ದು,ಸುಮಾರು ₹೪ ಕೋಟಿ ವೆಚ್ಚದಲ್ಲಿ ಈ ಬೃಹತ್ ಗ್ರಾಮ ದೇವತೆ ದೇವಸ್ಥಾನ ಎರಡು ವರ್ಷಗಳ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ದೇವಸ್ಥಾನ ನಿರ್ಮಾಣ ಉಸ್ತುವಾರಿ ಹೊಣೆ ಹೊತ್ತ ಮಾಜಿ ಸಚಿವ ನಾಗಪ್ಪ ಸಾಲೋಣಿ ಹೇಳಿದರು.
ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನ ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣ ಮಾಡಲಾಗುವುದು. ನುರಿತ ಶಿಲ್ಪಿಗಳ, ಕುಸುರಿ ಕಲಾಕಾರದಿಂದ ನಿರ್ಮಾಣ ನಡೆಯಲಿದ್ದು, ದೇವಸ್ಥಾನಕ್ಕೆ ಬೇಕಾದ ಕಲ್ಲುಗಳು ಶಿಲೆಗಳನ್ನು ಶಿರಾ ತಾಲೂಕಿನ ತಾವರಕೆರೆಯಿಂದ ವಿಶೇಷ ಕಲ್ಲುಗಳನ್ನು ತರಿಸಲಾಗಿದೆ. ಕಲ್ಲು ಕೆತ್ತನೆ ಕಾರ್ಯ ಭರದಿಂದ ನಡೆದಿದೆ ಎಂದು ವಿವರಿಸಿದರು.ಪಟ್ಟಣದ ಸರ್ವ ಸಮುದಾಯದವರು, ಉದ್ಯಮಿಗಳು, ಗಣ್ಯರು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ತನು ಮನ ಧನದಿಂದ ಸಹಕಾರ ನೀಡಿದ್ದಾರೆ. ಈಗಾಗಲೇ ಮೊದಲ ಸಭೆಯಲ್ಲಿ ಸಿಕ್ಕ ಭರವಸೆಯಂತೆ ಹಲವು ಸಮಾಜದವರು, ಉದ್ಯಮಿಗಳು ದೇಣಿಗೆ ಸಲ್ಲಿಸಿದ್ದಾರೆ. ಉದ್ಯಮಿಯೊಬ್ಬರು ದೇವಸ್ಥಾನಕ್ಕಾಗಿ ಅವಶ್ಯವಿದ್ದ ಭೂಮಿ ಸಹ ಬಿಟ್ಟುಕೊಟ್ಟಿದ್ದಾರೆ ಎಂದರು.
ದೇಣಿಗೆ:ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ₹೫೦ ಲಕ್ಷ ದೇಣಿಗೆ ನೀಡಿದ್ದಾರೆ. ಅದೇ ರೀತಿ ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ₹೪ ಲಕ್ಷ, ಗಂಗಾಮತ ಸಮಾಜ ₹ ೨,೬೨,೮೨೨, ಗುಜರಾತಿ ಮತ್ತು ರಾಜಸ್ಥಾನಿ ಸಮಾಜ ₹ ೨,೫೧,೦೦೦, ರಜಪೂತ ಸಮಾಜ ₹೨,೦೧,೦೦೦, ಹಡಪದ ಅಪ್ಪಣ್ಣ ಸಮಾಜದಿಂದ ₹೧,೧೧,೦೦೦, ಮಾತಂಗಿ ಸಮಾಜದಿಂದ ₹ ೧,೧೧,೦೦೦ ಮತ್ತು ಆರ್ಯ ಈಡಿಗೇರ ಕ್ಷೇಮಾಭಿವೃದ್ಧಿ ಸಂಘದಿಂದ ₹ ೩,೦೧,೦೦೦, ಅಕ್ಕಿಗಿರಣಿ ಮಾಲಿಕರ ಸಂಘದಿಂದ ₹೫೦ ಲಕ್ಷ ಹಾಗೂ ಸಿಂಧನೂರು ತಾಲೂಕಿನ ಕೆಲ ಭಕ್ತರು ಗಣ್ಯರು ಸಹ ದೇಣಿಗೆ ನೀಡಿದ್ದಾರೆ.ಟ್ರಸ್ಟ್ ರಚನೆ: ಗ್ರಾಮ ದೇವತೆ ದೇವಸ್ಥಾನ ಟ್ರಸ್ಟ್ ರಚಿಸಲು ಉದ್ದೇಶಿಸಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ಇವರೊಂದಿಗೆ ಅಂತಿಮ ನಿರ್ಣಯ ಕೈಗೊಂಡು ನಂತರ ಸರ್ವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಕಾನೂನು ತಿಳಿವಳಿಕೆಯುಳ್ಳವರೊಂದಿಗೆ ಟ್ರಸ್ಟ್ ರಚನೆ ಕುರಿತು ಮಾಹಿತಿ ಪಡೆಯಲಾಗಿದೆ ಎಂದರು.
ಈ ವೇಳೆ ಆರ್ಯ ಈಡಿಗೇರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ದೇವಸ್ಥಾನಕ್ಕೆ ₹೩,೦೧,೦೦೦ ದೇಣಿಗೆ ನಿರ್ಮಾಣ ಸ್ಥಳದಲ್ಲಿ ಉಸ್ತುವಾರಿ ನಾಗಪ್ಪ ಸಾಲೋಣಿ ಮತ್ತು ಖಜಾಂಚಿ ಉದ್ಯಮಿ ಪಿ. ಗೋವಿಂದರಾಜ ಇವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಉದ್ಯಮಿ ಸಣ್ಣ ವೀರೇಶಪ್ಪ, ನಾರಾಯಣಪ್ಪ ಈಡಿಗೇರ, ನಾಗಪ್ಪ ಯರಡೋಣಿ, ಶ್ರೀಕಾಂತ ಮರ್ಲಾನಹಳ್ಳಿ, ವೀರೇಶ ಮರ್ಲಾನಹಳ್ಳಿ, ತಿಪ್ಪಣ್ಣ ಮೂಲಿಮನಿ, ಹನುಮಂತಪ್ಪ ಸಿಂಗಾಪುರ, ಬಿ. ಕಾಶಿವಿಶ್ವನಾಥ, ಕಾಶಿನಾಥ ಕಂಪ್ಲಿ, ವೀರಭದ್ರಪ್ಪ ವಿಶ್ವಕರ್ಮ, ಬಸವರಾಜ ಮರಕುಂಬಿ ಸೇರಿದಂತೆ ಇನ್ನಿತರರು ಇದ್ದರು.