- ಕೊಪ್ಪ ತಾಲೂಕು ನರಸೀಪುರದ ಕಾರ್ತಿಕ ಜತೆ ಅನುಂದ್ರತಿ ವಿವಾಹ
- ಅಳಿಯ, ಆತನ ಕುಟುಂಬ, ಕಾರು ಚಾಲಕನ ವಿರುದ್ಧ ದೂರು- - - ಕನ್ನಡಪ್ರಭ ವಾರ್ತೆ ದಾವಣಗೆರೆ
4 ವರ್ಷಗಳಿಂದ ತವರಿನಲ್ಲೇ ಇದ್ದ ತಮ್ಮ ಮಗಳನ್ನು ಅಳಿಯ ಹಾಗೂ ಆತನ ಕುಟುಂಬ ಸದಸ್ಯರು ಏಕಾಏಕಿ ತಮ್ಮ ಮನೆಗೆ ನುಗ್ಗಿ, ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದ ನಿವಾಸಿ ಭಾನುಮತಿ ದೂರು ನೀಡಿದ್ದಾರೆ.ಪುತ್ರಿ ಅನುಂದ್ರತಿಯನ್ನು ಭಾನುವಾರ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ನರಸೀಪುರದ ಆಕೆಯ ಪತಿ ಕಾರ್ತಿಕ, ತಂದೆ ಕೃಷ್ಣಸ್ವಾಮಿ, ತಾಯಿ ಕಾತ್ಯಾಯಿನಿ, ಇನ್ನೊಬ್ಬ ಮಗ ಗಿರೀಶ ಹಾಗೂ ಕಾರು ಚಾಲಕ ಶಂಭು ಎಂಬುವರು ನಮ್ಮ ಮನೆಗೆ ನುಗ್ಗಿ, ಅಪಹರಿಸಿದ್ದಾರೆಂದು ದೂರಿದ್ದಾರೆ.
ಅಡುಗೆ ಮನೆಯಲ್ಲಿದ್ದ ಮಗಳಿಗೆ ಪತಿ ಕಾರ್ತಿಕ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಗಂಡನ ಮನೆಯಲ್ಲಿ ಹೊಂದಿಕೊಂಡು ಬಾಳುವೆ ಮಾಡುವುದಕ್ಕೆ ಆಗುವುದಿಲ್ಲವೆಂದು ಬೈಯ್ಯುತ್ತಾ, ಕೈಹಿಡಿದು ಎಳೆದಾಡಿದ್ದಾನೆ. ದೌರ್ಜನ್ಯ ತಡೆಯಲು ಹೋದ ತಮ್ಮ ಮೇಲೂ ಹಲ್ಲೆ ನಡೆಸಿ, ಬಲವಂತದಿಂದ ಮಗಳನ್ನು ಕಾರಿನಲ್ಲಿ ಎಳೆದೊಯ್ದಿದ್ದಾರೆ. ಈ ಬಗ್ಗೆ ತಡವಾಗಿ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ.4 ವರ್ಷದ ಹಿಂದೆ ಕಾರ್ತಿಕನಿಗೆ ಪುತ್ರಿ ಅನುಂದ್ರತಿಯನ್ನು ಮದುವೆ ಮಾಡಿಕೊಡಲಾಗಿತ್ತು. ಅಚಿಂತ್ಯ ಹೆಸರಿನ ಮಗನೂ ಇದ್ದಾನೆ. ಪತಿ, ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲದ್ದರಿಂದ 6 ತಿಂಗಳ ಹಿಂದೆ ತಮ್ಮ ಮಗಳನ್ನು ಮನೆಯಿಂದ ಹೊರಹಾಕಿದ್ದರು. ಇದರಿಂದಾಗಿ ಆಕೆ ತವರು ಮನೆಯಲ್ಲೇ ಇದ್ದಳು. ಆದರೆ, ಭಾನುವಾರ ಏಕಾಏಕಿ ಅಳಿಯ, ಆತನ ಕುಟುಂಬ ಸದಸ್ಯರು ಮನೆಗೆ ನುಗ್ಗಿ, ಮಗಳನ್ನು ಅಪಹರಿಸಿದ್ದಾರೆ ಎಂದು ಸೋಮವಾರ ದೂರು ನೀಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ಪಿಎಸ್ಐ ನೇತೃತ್ವದ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.- - - (ಸಾಂದರ್ಭಿಕ ಚಿತ್ರ)