ಮುದ್ದೆಗೆ ಸೈನೈಡ್ ಬೆರೆಸಿ ಪತ್ನಿ ಹತ್ಯೆ ಮಾಡಿದ ಪತಿ

KannadaprabhaNewsNetwork |  
Published : Dec 14, 2023, 01:30 AM ISTUpdated : Dec 14, 2023, 01:31 AM IST

ಸಾರಾಂಶ

ಮುದ್ದೆಗೆ ಸೈನೈಡ್ ಬೆರೆಸಿ ಪತ್ನಿ ಹತ್ಯೆ ಮಾಡಿದ ಪತಿ ಹೃದಾಯಾಘಾತವೆಂದು ಬಿಂಬಿಸಿದ ಆರೋಪಿ । ಕೆಮಿಕಲ್‌ ತಿನ್ನಿಸಿ ಕೊಲೆ: ವಿಕ್ರಂ ಅಮಟೆ

- ಹೃದಾಯಾಘಾತವೆಂದು ಬಿಂಬಿಸಿದ ಆರೋಪಿ । ಕೆಮಿಕಲ್‌ ತಿನ್ನಿಸಿ ಕೊಲೆ: ವಿಕ್ರಂ ಅಮಟೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯೇ ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ಪತ್ನಿಯನ್ನು ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಸಮೀಪದ ಹಕ್ಕೆರುದ್ದಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಮುದ್ದೆಗೆ ಸೈನೈಡ್‌ ಬೆರೆಸಿದ್ದೆ ಎಂದು ಆರೋಪಿ ದರ್ಶನ್‌ ತನಿಖೆ ಸಂದರ್ಭದಲ್ಲಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.

ಡಿ. 11 ರಂದು ಬೆಳಗಿನ ಜಾವ ಪತ್ನಿ ಶ್ವೇತಾ ಹತ್ಯೆ ಮಾಡಿದ ಬಳಿಕ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಪತಿ ದರ್ಶನ್‌ ಕಥೆ ಕಟ್ಟಿದ್ದ. ಊಟದಲ್ಲಿ ಸೈನೈಡ್ ಬೆರೆಸಿ ರಾಗಿ ಮುದ್ದೆ ನೀಡಿದ್ದ. ಶ್ವೇತಾ ಸಾವನ್ನಪ್ಪಿದ್ದ ಬಳಿಕ ಕೈಗೆ ಸಿರಿಂಜ್ ನಿಂದ ಇಂಜೆಕ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಪ್ಲಾನ್ ಮಾಡಿದ್ದ. ಈ ಪ್ಲಾನ್ ಉಲ್ಟಾ ಆಗುವ ಆತಂಕದಲ್ಲಿ ಹಾರ್ಟ್ ಅಟ್ಯಾಕ್ ಎಂದು ದರ್ಶನ್ ನಾಟಕ ಮಾಡಿದ್ದ.

ಅಲ್ಲದೆ, ಶ್ವೇತಾ ಸಂಬಂಧಿಕರು ಬರುವ ಮುಂಚೆ ಅಂತ್ಯಕ್ರಿಯೆಗೆ ದರ್ಶನ್ ಸಿದ್ಧತೆ ಮಾಡಿಕೊಂಡಿದ್ದ. ಅನುಮಾನ ಬಂದ ಪೋಷಕರು ದರ್ಶನ್ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಹೃದಾಯಾಘಾತ ಅಲ್ಲ ಎಂದು ತಿಳಿದು ಬಂತು. ವರದಿ ಬಂದ ಬಳಿಕ ದರ್ಶನ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ದರ್ಶನ್ ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕ್ಸ್ ಲ್ಯಾಬ್ ನಡೆಸುತ್ತಿದ್ದ. ಕಾಲೇಜು ದಿನಗಳಿಂದ ದರ್ಶನ್ ಮತ್ತು ಶ್ವೇತಾ ಪ್ರೀತಿಸುತ್ತಿದ್ದರು. ಟ್ರೂ ಮೆಡಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಜೊತೆ ದರ್ಶನ್ ಅನೈತಿಕ ಸಂಬಂಧ ಹೊಂದಿದ್ದ. ಇದನ್ನು ತಿಳಿದ ಪತ್ನಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಳು. ಗಂಡನ ಜೊತೆ ಸಂಬಂಧ ಬಿಡುವಂತೆ ಕಾಲ್‌ ಮಾಡಿ ಆಕೆಗೆ ಶ್ವೇತಾ ಎಚ್ಚರಿಕೆ ನೀಡಿದ್ದಳು.

ಕಾಲ್ ಮಾಡಿ ಎಚ್ಚರಿಕೆ ನೀಡುತ್ತಿದ್ದಂತೆ ಸೈನೈಡ್ ನೀಡಿ ಹತ್ಯೆ ಮಾಡಲು ದರ್ಶನ್ ಪ್ಲಾನ್ ಮಾಡಿದ್ದ. ಬೆಂಗಳೂರಿನಿಂದ ದೇವವೃಂದ ಸಮೀಪದ ಹಕ್ಕೆರುದ್ದಿ ಗ್ರಾಮಕ್ಕೆ ಕರೆತಂದು ಹತ್ಯೆ ಮಾಡಿದ್ದಾನೆ. ಈ ದಂಪತಿಗೆ ನಾಲ್ಕು ವರ್ಷದ ಮಗು ಇದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಮಿಕಲ್‌ ತಿನ್ನಿಸಿ ಕೊಲೆ: ಈ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಕೆಮಿಕಲ್‌ ತಿನ್ನಿಸಿ ಕೊಲೆ ಮಾಡಿರುವುದು ಕಂಡು ಬಂದಿದೆ. ಎಫ್‌ಎಸ್‌ಎಲ್‌ ಟೀಂ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡುತ್ತಿದೆ ಎಂದು ಹೇಳಿದರು.

ಸೀನ್‌ ಆಫ್‌ ಕ್ರೈಂ ತಂಡ ಕೂಡ ತನಿಖೆ ಮಾಡುತ್ತಿದೆ. ಘಟನಾ ಸ್ಥಳದಲ್ಲಿ ಮಹಜರ್‌ನಲ್ಲಿ ಸಿಕ್ಕಿರುವ ಸಾಕ್ಷಿಗಳು ಕೊಲೆ ಎಂದು ಹೇಳುತ್ತಿವೆ. ಇಂಜಕ್ಟ್‌ ಮಾಡಿ ಕೊಲೆ ಮಾಡಿಲ್ಲ, ಕೆಮಿಕಲ್‌ ತಿನ್ನಿಸಿರೋದು ಸ್ಪಷ್ಟವಾಗಿದೆ. ನುರಿತ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ನಿಖರವಾದ ಕಾರಣ ತಿಳಿಯಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ತೊಡಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಾಜೀನಾಮೆ!
ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು