ಕನ್ನಡಪ್ರಭ ವಾರ್ತೆ ಬೈಲಹೊಂಗಲ
16ನೇ ಶತಮಾನದಲ್ಲಿ ದಾಸಶ್ರೇಷ್ಠ ಕನಕದಾಸರು ನಮ್ಮ ನಾಡಿಗೆ ನೀಡಿದ ಕೀರ್ತನೆ ಪದಗಳು ಇಂದಿಗೂ, ಎಂದೆಂದಿಗೂ ಮಾನವ ಕುಲಕ್ಕೆ ದಾರಿದೀಪವೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ಪಟ್ಟಣದ ಕುರಬರ ಗಲ್ಲಿಯಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ 538ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮೂಲತಃ ತಿಮ್ಮಪ್ಪ ನಾಯಕರಾಗಿರುವ ಕನಕರು ತಮಗೆ ಸಿಕ್ಕಿರುವ ಬಂಗಾರವನ್ನು ಬಡವರಿಗೆ ದಾನ ಮಾಡುವುದರ ಮೂಲಕ ಕನಕದಾಸರಾಗಿ ಸಮಾಜಕ್ಕೆ ತ್ಯಾಗ ಮನೋಭಾವನೆ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶದೊಂದಿಗೆ ಮಾನವ ಕುಲವೊಂದೇ ಎಂದು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಕನಕದಾಸರ ಕೀರ್ತನೆಗಳು ನಮಗೆಲ್ಲ ದಾರಿದೀಪವಾಗಿವೆ. ಕನಕದಾಸರ ಪದಗಳ ಸಾರಾಂಶದಂತೆ ನಾವೆಲ್ಲರೂ ಬದುಕಿ ಅವರ ಜಯಂತಿ ಆಚರಣೆ ಅರ್ಥಪೂರ್ಣ ವಾಗಿಸೋಣ ಎಂದರು.ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ಮಾತನಾಡಿ, ಕಾಗಿನೆಲೆ ಆದಿಕೇಶವ ಎಂಬ ಅಂಕಿತ ನಾಮದೊಂದಿಗೆ ರಚಿಸಿದ ಅವರ ಕೀರ್ತನೆಗಳು ದಾಸ ಸಾಹಿತ್ಯಕ್ಕೆ ಹೊನ್ನಿನ ಕಳಶವಿದ್ದಂತೆ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ದಳವಾಯಿ ಮಾತನಾಡಿ, ಕೇವಲ ಜಯಂತಿ ಆಚರಣೆ ಮಾಡಿದರೆ ಸಾಲದು ಬದಲಾಗಿ ಕನಕದಾಸರ ತ್ಯಾಗ ಮನೋಭಾವನೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸಂಘಟನೆ ಮಾಡಬೇಕಿದೆ. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದರ ಕುರಿತು ಅವಲೋಕನ ಮಾಡಿಕೊಂಡಾಗ ಮಾತ್ರ ಕನಕದಾಸರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ, ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಮಾಜಿ ಪುರಸಭೆ ಅಧ್ಯಕ್ಷ ಬಾಬು ಕೂಡಸೋಮಣ್ಣವರ, ಶಿರಸ್ತೇದಾರ ಜಿತೇಂದ್ರ ನಿಡೋಣಿ, ಕಂದಾಯ ನಿರೀಕ್ಷಿಕ ಬಸವರಾಜ ಬೋರಗಲ್ಲ, ಗ್ರಾಮ ಆಡಳಿತಾಧಿಕಾರಿ ಪರಮಾನಂದ ಕಮ್ಮಾರ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಎನ್.ಪಾಟೀಲ, ಪ್ರ.ದ.ಸ. ಬಿ.ಐ.ಗುಡಿಮನಿ, ಕಚೇರಿ ವ್ಯವಸ್ಥಾಪಕ ಎಂ.ಐ.ಕುಟರಿ, ಕನಕದಾಸ ಜಯಂತಿ ಉತ್ಸವ ಕಮಿಟಿ ಅಧ್ಯಕ್ಷ ಲಕ್ಷ್ಮಣ ಸೋಮನಟ್ಟಿ, ಮುಖಂಡರಾದ ಮಾರುತಿ ಇಂಗಳಗಿ, ಮಂಜುನಾಥ ಗೋವಿನಕೊಪ್ಪ, ನಿಂಗಪ್ಪ ಕುರಿ, ಬಸವರಾಜ ಕುರಿ, ಗುರು ನೀಲಗಾರ, ಜಗದೀಶ ಕೊತಂಬ್ರಿ, ವಿಜಯ ಗೋವಿನಕೊಪ್ಪ, ಬೀರಪ್ಪ ಕುರುಬರ, ಮಲ್ಲಿಕಾರ್ಜುನ ದುಬ್ಬನಮರಡಿ, ಮಲ್ಲವ್ವ ಬುಡರಕಟ್ಟಿ ತಹಸೀಲ್ದಾರ್ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.