ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ, ಭಕ್ತಿ, ಸಂಕೀರ್ತನೆ, ಕನಕದಾಸರ ಆದರ್ಶ, ಪ್ರಪಂಚ ಮೆಚ್ಚುವ ಸಮ ಸಮಾಜ ನಿರ್ಮಾಣದ ಗುರಿ ಹೊಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆ ಯುವ ಜನರಿಗೆ ದಾರಿದೀಪವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಲಕ್ಯಾ ಹೋಬಳಿ ಸಾದರಹಳ್ಳಿ ಗ್ರಾಮದಲ್ಲಿ ಗುರುವಾರ ಭಕ್ತ ಶ್ರೇಷ್ಠ ಕನಕದಾಸರು, ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಈ ಮೂವರು ಮಹನೀಯರ ಪ್ರತಿಮೆ ಅನಾವರಣಗೊಳಿಸಿ ನಂತರ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಶೋಷಿತ ವರ್ಗದ ಪರವಾಗಿ ಗಟ್ಟಿಯಾಗಿ ಹೋರಾಟ ಮಾಡಿದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆತು ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಮೂವರು ಮಹಾ ಪುರುಷರ ಪ್ರತಿಮೆಗಳನ್ನು ಒಂದೇ ಗ್ರಾಮದಲ್ಲಿ ಅನಾವರಣ ಮಾಡಿರುವುದು ಶ್ಲಾಘನೀಯ ಎಂದರು.19ನೇ ಶತಮಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಪಂಚ ಮೆಚ್ಚುವ ಸಂವಿಧಾನ ನೀಡಿ ಎಲ್ಲರೂ ಸಮಾನವಾಗಿ ಬದುಕಬೇಕೆಂಬ ಆಶಯದೊಂದಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದರು. 15ನೇ ಶತಮಾನದಲ್ಲಿ ಹಿಂದೂ ಸಮಾಜದಲ್ಲಿದ್ದ ಕೆಲವು ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ ಭಕ್ತ ಶ್ರೇಷ್ಠ ಕನಕದಾಸರು ಕೀರ್ತನೆಗಳ ಮೂಲಕ ಸಂಸ್ಕೃತಿ, ಸಂಸ್ಕಾರ ನೀಡಿ ಶೋಷಿತ ವರ್ಗವನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸಿದ್ದಾರೆಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಅಪ್ರತಿಮ ವೀರ ಎಂಬ ಬಿರುದು ಪಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶದ ಎಲ್ಲಾ ಯುವಕರಿಗೆ ಮಾದರಿಯಾಗಿದ್ದಾರೆಂದು ತಿಳಿಸಿದರು.ವರ್ಣಭೇದ ನೀತಿಯನ್ನು ವಿರೋಧಿಸಿ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದು ಸಮಾಜಕ್ಕೆ ಸಾರಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಅಂಬೇಡ್ಕರ್‌ರವರು ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕೆಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಗ್ರಾಮದ ಎಲ್ಲರ ಸಹಕಾರದೊಂದಿಗೆ ಮೂವರು ಮಹನೀಯರ ಪುತ್ಥಳಿ ಅನಾವರಣ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದ್ದು ಸಂತಸ ತಂದಿದೆ ಎಂದರು.ಮಹಾತ್ಮರ ಜೀವನದ ವಿಚಾರಧಾರೆ ಎಲ್ಲರಿಗೂ ಆದರ್ಶವಾಗಿದೆ. ಈ ಪುತ್ಥಳಿಗಳ ದರ್ಶನ ಪಡೆದ ಮಕ್ಕಳು ಮಹಾತ್ಮರ ವಿಚಾರಧಾರೆ ಹಾಗೂ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಬೀರೇಗೌಡ, ತಾಪಂ ಮಾಜಿ ಅಧ್ಯಕ್ಷ ಮಲ್ಲೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಯತೀಶ್, ಲೋಕೇಶ್, ರವಿ, ಸುರೇಶ್, ಹುಲಿಯಪ್ಪಗೌಡ, ಶಶಿ, ಮಧು, ಪ್ರವೀಣ್, ಕಾಂತ್‌ರಾಜ್ ಅರಸ್, ಜಯಣ್ಣ ಉಪಸ್ಥಿತರಿದ್ದರು.