ಮಾದಕ ವಸ್ತುಗಳ ದುಷ್ಪರಿಣಾಮಗಳು ಸ್ವಾಸ್ಥ್ಯ ಸಮಾಜಕ್ಕೆ ಮಾರಕ: ಡಾ. ಬಸನಗೌಡ

KannadaprabhaNewsNetwork | Published : Mar 23, 2025 1:33 AM

ಸಾರಾಂಶ

ಬ್ಯಾಡಗಿ ನಗರದ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಹಾವೇರಿ: ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳು ಸ್ವಾಸ್ಥ್ಯ ಸಮಾಜಕ್ಕೆ ಮಾರಕವಾಗಿದೆ. ಈ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸನಗೌಡ ವಿ.ಎಂ. ಹೇಳಿದರು.

ನಗರದ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಸೇವನೆ ಎಂಬುದು ಗೊತ್ತಾಗಿಯೂ ಮಾಡುವಂತಹದ್ದು, ಗೊತ್ತಿಲ್ಲದಂತೆಯೂ ಮಾಡುವಂತಹ ದುಶ್ಚಟವಾಗಿದೆ. ಎಷ್ಟೋ ಮಾದಕ ವಸ್ತುಗಳ ಮೇಲೆ ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಮುದ್ರಿಸಿದ್ದರೂ ಜನರು ಮಾದಕ ವಸ್ತುಗಳ ಬಳಕೆಯನ್ನು ನಿಲ್ಲಿಸಿಲ್ಲ. ಇಂದು ಸಮಾಜದಲ್ಲಿ ಹೆಚ್ಚಾಗಿ ಬಡ, ಮಧ್ಯಮ ವರ್ಗದ ಜನರು ಈ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿದ್ದು, ಇದು ಸಂಘ ದೋಷದಿಂದ ವ್ಯಾಪಕವಾಗಿ ಹಬ್ಬಿದೆ ಎಂದರು.

ಜೀವನದ ಸಾರವೇನು? ಬದುಕಿನ ಅರ್ಥವೇನು? ಮನುಷ್ಯನಾಗಿ ಈ ಭೂಮಿಯ ಮೇಲೆ ನಾನೇಕೆ ಜನಿಸಿದ್ದೇನೆ ಎನ್ನುವ ಪ್ರಶ್ನೆ ಅವನಲ್ಲಿ ಬಂದಾಗ ಮಾತ್ರ ಇಂತಹ ಮಾದಕ ವಸ್ತುಗಳ ವ್ಯಸನದಿಂದ ದೂರು ಉಳಿಯಲು ಸಾಧ್ಯವಾಗುತ್ತದೆ. ಈಗಾಗಲೇ ಸರ್ಕಾರ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಇದಕ್ಕಾಗಿ ಪ್ರತಿವರ್ಷ ನಾವು ವ್ಯಸನ ಮುಕ್ತ ದಿನಾಚರಣೆ ಮಾಡುತ್ತಾ ಬಂದಿದ್ದೇವೆ. ಇಷ್ಟಾಗಿಯೂ ಮಾದಕ ವಸ್ತುಗಳ ಬಳಕೆ ನಿಲುತ್ತಿಲ್ಲ. ಇಂದು ಸಾಕಷ್ಟು ವ್ಯಸನಮುಕ್ತ ಕೇಂದ್ರಗಳು ಆರಂಭವಾಗಿವೆ, ಇದು ವಿಷಾದನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಆಗುವಂತಹ ದುಷ್ಪರಿಣಾಮ, ಸಮಸ್ಯೆಗಳನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಸಮಾಜದಲ್ಲಿ ನಾವು ಏನನ್ನಾದರೂ ಬದಲಾವಣೆ ಮಾಡಬೇಕೆಂದರೆ ಶಿಕ್ಷಣ ಮಹತ್ವದ ಅಸ್ತ್ರವಾಗಿರುತ್ತದೆ. ಕಲಿಕಾ ಹಂತದಿಂದಲೇ ಮಾದಕ ವಸ್ತುಗಳ ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದ್ದಲ್ಲಿ ಯುವ ಸಮೂಹವನ್ನು ಮಾದಕ ಸೇವನೆಗಳಿಂದ ರಕ್ಷಿಸಬಹುದಾಗಿದೆ ಎಂದರು.

ಸ್ವಾಸ್ಥ ಸಮಾಜ ಸೃಷ್ಟಿಸಲು ಮದ್ಯಪಾನ, ತಂಬಾಕು, ಸಿಗರೇಟ್ ಹಾಗೂ ಡ್ರಗ್‌ನಂತಹ ಕೆಟ್ಟ ದುಶ್ಚಟಗಳಿಂದ ದೂರವಿರಬೇಕಾಗುತ್ತದೆ ಎಂದರು.

ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಎಚ್., ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು, ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಶಂಕರಗೌಡ ವಂದಿಸಿದರು.

Share this article