- ಮಾಜಿ ಶಾಸಕ ರಾಜೇಶ್ ಅಭಿಮತ । ಮಲ್ಲಾಪುರದಲ್ಲಿ ದಸಂಸ ಶಾಖೆ ಸ್ಥಾಪನೆ, ಡಾ.ಅಂಬೇಡ್ಕರ್ ಜಯಂತಿ
- - -ಕನ್ನಡಪ್ರಭ ವಾರ್ತೆ ಜಗಳೂರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗಿ, ಎಲ್ಲ ವರ್ಗದ ಜನಸೇವೆಗೆ ಅವಕಾಶ ದೊರಕಲು ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನ ಕಾರಣವಾಗಿದೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಸ್ಥಾಪನೆ ಹಾಗೂ ಡಾ.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕನಾಗಿದ್ದ ಅವಧಿಯಲ್ಲಿ ಮಲ್ಲಾಪುರ ಗ್ರಾಮಕ್ಕೆ ₹1 ಕೋಟಿಗೂ ಹೆಚ್ಚು ಅನುದಾನ ನೀಡಿ ಸಿ.ಸಿ. ರಸ್ತೆ , ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಬೇಡ್ಕರ್ ಭವನ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಗಂಗಾ ಕಲ್ಯಾಣ, ವಸತಿ ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದೆ. ನಿಮ್ಮ ಆಶೀರ್ವಾದ ಮುಂದೆಯೂ ಹೀಗೆ ಇದ್ದರೆ ಮತ್ತಷ್ಟು ಜನಸೇವೆ ಮಾಡುವೆ ಎಂದು ತಿಳಿಸಿದರು.ಮಾಜಿ ಜಿ.ಪಂ. ಸದಸ್ಯ ಕೆ.ಪಿ.ಪಾಲಯ್ಯ ಮಾತನಾಡಿ, ಬುದ್ದ ಬಸವಣ್ಣ ಅಂಬೇಡ್ಕರ್ ಅವರು ಆಡಂಬರ ಜೀವನ ಮೂಢನಂಬಿಕೆಗಳಿಂದ ದೂರವಿದ್ದರು. ಅವರನ್ನು ಆರಾಧಿಸುವ ನಾವು ಅಷ್ಟೇ ಸರಳವಾಗಿ ಇರಬೇಕು. ಶೋಷಿತರ ಸೌಲಭ್ಯಗಳಿಗಾಗಿ ಪ್ರೊ. ಬಿ.ಕೃಷ್ಣಪ್ಪ ಅವರು ರಾಜಕಾರಣಿಗಳ ಕಾರ್ಯವೈಖರಿ ನಿಷ್ಠುರವಾಗಿ ಖಂಡಿಸುವ ಮೂಲಕ ಸಂಘಟಿತ ಹೋರಾಟ ಹಾಗೂ ಸ್ವಾಭಿಮಾನ ಜೀವನ ರೂಪಿಸಿ ಕೊಂಡಿದ್ದರು ಎಂದರು.
ಡಾ.ಅಂಬೇಡ್ಕರ್ ಜಯಂತಿ ಜೊತೆಗೆ ದೇಶ ಹಾಗೂ ಸಮಸಮಾಜಕ್ಕೆ ಕೊಡುಗೆ ನೀಡಿದ ಬಸವಣ್ಣ, ಕನಕದಾಸ, ಶ್ರೀಕೃಷ್ಣ, ಭಗೀರಥ, ಮಹರ್ಷಿ ವಾಲ್ಮೀಕಿಯಂತಹ ಎಲ್ಲ ದಾರ್ಶನಿಕರ ಜಯಂತಿ ಆಚರಿಸಬೇಕು ಎಂದು ಸಲಹೆ ನೀಡಿದರು.ಕಾಂಗ್ರೆಸ್ ಮುಖಂಡ ಕೀರ್ತಿಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೂವಿನಮಡು ಅಂಜಿನಪ್ಪ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ಧನ್ಯಕುಮಾರ್, ಎಚ್ಚೆತ್ತ ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಎಚ್.ಜೆ. ಮಹಾಲಿಂಗಪ್ಪ, ಡಾ.ಅಂಬೇಡ್ಕರ್ ಪುತ್ತಳಿ ನಿರ್ಮಾಣ ವೇದಿಕೆ ಅಧ್ಯಕ್ಷ ಪೂಜಾರಿ ಸಿದ್ದಪ್ಪ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ತಾಲೂಕು ಸಂಚಾಲಕ ಬಿ.ಸತೀಶ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಪದ್ಮಕ್ಕ ಕೃಷ್ಣಪ್ಪ, ವಿ.ಎಸ್.ಎಸ್.ಎನ್. ಅಧ್ಯಕ್ಷ ಸತ್ಯಣ್ಣ, ಗ್ರಾಪಂ ಮಾಜಿ ಸದಸ್ಯ ಕಾಮೇಶ್ ಮತ್ತು ಮುಖಂಡರು, ಗ್ರಾಮ ಶಾಖೆ ಅಧ್ಯಕ್ಷರು, ಪಧಾದಿಕಾರಿಗಳು ಇದ್ದರು.
- - -(ಕೋಟ್) ದೇಶದ ಎಲ್ಲ ವರ್ಗದ ಜನರಿಗೆ ಮೀಸಲಾತಿ ನೀಡಿದ ಅಂಬೇಡ್ಕರ್ ಅವರನ್ನು ಇಡೀ ಜಗತ್ತು ಮಹಾ ಮಾನವತಾವಾದಿ ಎಂದು ಕ್ಷಣಕ್ಷಣಕ್ಕೂ ಗೌರವ ನೀಡುತ್ತಿದೆ. ಆದರೆ, ಭಾರತದಲ್ಲಿ ಇಂದಿಗೂ ಅವರನ್ನು ಒಂದು ಜಾತಿಗೇ ಸೀಮಿತಗೊಳಿಸಿರುವುದು ದುರಂತ ಸಂಗತಿ.
-ಎ.ಡಿ.ನಾಗಲಿಂಗಪ್ಪ, ಪ್ರಾಂಶುಪಾಲ- - -
-25ಜೆ.ಜಿ.ಎಲ್.1:ಮಲ್ಲಾಪುರದಲ್ಲಿ ದಸಂಸ ಗ್ರಾಮ ಶಾಖೆ ಸ್ಥಾಪನೆ, ಡಾ.ಅಂಬೇಡ್ಕರ್ ಜಯಂತ್ಯುತ್ಸವ ನಡೆಯಿತು. ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೀರ್ತೀಕುಮಾರ್, ಕೆ.ಪಿ.ಪಾಲಯ್ಯ ಇತರರು ಪಾಲ್ಗೊಂಡಿದ್ದರು.