ಪೆನ್ನಿಗಿರುವ ಮಹತ್ವ ಯಾವತ್ತು ಕಡಿಮೆಯಾಗಲ್ಲ: ಪ್ರಸನ್ನಸಿಂಗ್ ಹಜೇರಿ

KannadaprabhaNewsNetwork | Published : May 30, 2025 11:58 PM

ಆಧುನಿಕ ಯುಗ ಎಷ್ಟೇ ಮುಂದುವರೆದರೂ ಪೆನ್ ಗೆ ಇರುವ ಮಹತ್ವ ಹಾಗೂ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ

ಮುಂಡಗೋಡ: ಆಧುನಿಕ ಯುಗ ಎಷ್ಟೇ ಮುಂದುವರೆದರೂ ಪೆನ್ ಗೆ ಇರುವ ಮಹತ್ವ ಹಾಗೂ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ ಎಂದು ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಹೇಳಿದರು.ಶುಕ್ರವಾರ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಚಾರ ಸಂಕೀರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಕಷ್ಟು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುವುದಿಲ್ಲ. ಹಾಗಾಗಿ ಅದನ್ನೆಲ್ಲ ನಾವು ಪ್ರಾಯೋಗಿಕವಾಗಿಯೇ ಅನುಭವಿಸಬೇಕು. ಕಂಪ್ಯೂಟರ್ ಟೈಪಿಂಗ್ ಮೂಲಕ ಎಷ್ಟೇ ದಾಖಲೆ ತಯಾರಿಸಿದರೂ ಅಂತಿಮವಾಗಿ ಅದಕ್ಕೆ ಸಂಬಂಧಿಸಿದವರ ಸಹಿ ಇಲ್ಲದೇ ಅದಕ್ಕೆ ಮಹತ್ವವಿರುವುದಿಲ್ಲ. ಅದು ಕಾನೂನಾತ್ಮಕ ದಾಖಲೆಯಾಗುವುದಿಲ್ಲ. ಹಾಗಾಗಿ ಹಸ್ತಾಕ್ಷರ ಹಾಗೂ ಸಹಿ ಪ್ರಾಮುಖ್ಯತೆ ಪಡೆಯುತ್ತದೆ. ಅದೇ ರೀತಿ ಸೋಶಿಯಲ್ ಮೀಡಿಯಾ ಎಷ್ಟೇ ಬಂದರೂ ಪತ್ರಿಕಾ ಮಾಧ್ಯಮವನ್ನು ಮೀರಿಸಲು ಸಾಧ್ಯವಿಲ್ಲ. ಪತ್ರಿಕಾ ಮಾಧ್ಯಮದಲ್ಲಿ ಕೂಡ ವರದಿಗಾರರು, ಸಂಪಾದಕರು ಹೀಗೆ ವಿವಿಧ ಸ್ಥಾನಮಾನಗಳಿವೆ ಎಂದರು.

೨೦೨೫ ರ ಪ್ರಕಾರ ಪತ್ರಕರ್ತರು ಮಾಹಿತಿಯನ್ನು ಕಲೆ ಹಾಕಬಹುದು. ಯಾವ ಸಂದರ್ಭ ಸೂಕ್ತ ಅನಿಸುತ್ತದೆಯೋ ಆಗ ಅದನ್ನು ಪ್ರಕಟಿಸಬಹುದು. ಎಲ್ಲವನ್ನು ಪ್ರಶ್ನಿಸುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದರಿಂದ ಶಿಕ್ಷಕರು ಕ್ರಿಯಾಶೀಲರಾಗುತ್ತಾರೆ. ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಮಾತ್ರ ಅದು ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯ. ಹಾಗಾಗಿ ನಮ್ಮ ಹಕ್ಕುನ್ನು ಬಳಸುವುದು ನಮ್ಮ ಕರ್ತವ್ಯ ಕೂಡ ಹೌದು ಎಂದರು.

ಪತ್ರಿಕಾ ಸ್ವಾತಂತ್ರ್ಯ ಎಂಬುವುದು ಕೇವಲ ಮಾದ್ಯಮ ಪ್ರತಿನಿಧಿಗಳಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಇರುತ್ತದೆ. ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾದ್ಯಮ ಮಿತ್ರರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯಬಹುದು. ಮಾಧ್ಯಮವನ್ನು ಕೇವಲ ಮಾಹಿತಿ ಕಲೆ ಹಾಕುವ ಅಥವಾ ಹಂಚಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮಾಧ್ಯಮವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂಬುವುದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಬಳಸಿಕೊಳ್ಳಲು ಎಲ್ಲ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಅವಕಾಶಗಳಿರುತ್ತವೆ. ಅದರ ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಕೇವಲ ಮೊಬೈಲ್ ಬಳಕೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಾಪ್ ಇವುಗಳಿಗೆ ಮಾರು ಹೋಗಬಾರದು ಎಂದು ಕಿವಿಮಾತು ಹೇಳಿದರು.

ಪತ್ರಕರ್ತ ಸಂತೋಷ ದೈವಜ್ಞ, ಶಿವರಾಜ ಶಿರಾಲಿ, ನಿಖಿಲ ರಾಣಿಗೇರ, ಗಜೇಂದ್ರ ಕರ್ಜಗಿ, ಉಪನ್ಯಾಸಕ ನಾಗರಾಜ ಹರಿಜನ, ಮನೋಹರ ಲಮಾಣಿ, ಅಲಿಅಹ್ಮದ ಗೋಕಾವಿ, ತಾರಾಮತಿ ನಾಕೋಡ, ಮಹಾದೇವ ಬಿಡ್ನಾಳ, ಜೆ.ಎಂ. ಶಿರೂರ, ಮಧುಶ್ರೀ, ಅನುಪಮಾ ಮಾದಾಪುರ, ಜಾಕಿ ಕಾಂಬೇಕರ, ಶ್ರೀಧರ ಕೆ.ಎನ್., ಸಂತೋಷ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥಿಸಿದರು. ಅಹ್ಮದ ಗೋಕಾವಿ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ತಿಕ ಬಸಾಪುರ ವರದಿ ವಾಚಿಸಿದರು. ರಾಜು ಮಾಕನೂರ ನಿರೂಪಿಸಿದರು. ಮನೋಹರ ಲಮಾಣಿ ವಂದಿಸಿದರು.

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಮಾತನಾಡಿದರು.