ಏಕರೂಪೀಕರಣದ ಹೇರಿಕೆಯಿಂದ ಬಹುತ್ವದ ಆಶಯಗಳಿಗೆ ಧಕ್ಕೆ

KannadaprabhaNewsNetwork |  
Published : Aug 27, 2025, 01:00 AM IST
ದೊಡ್ಡಬಳ್ಳಾಪುರದ ಡಿ.ಆರ್.ನಾಗರಾಜ್ ಬಳಗದ ನೇತೃತ್ವದಲ್ಲಿ ಬಹುತ್ವ ಕರ್ನಾಟಕ ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಡಾ.ರಹಮತ್‌ ತರೀಕೆರೆ ಪಾಲ್ಗೊಂಡರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಏಕರೂಪೀಕರಣದ ಹೇರಿಕೆಯ ಸಂದರ್ಭದಲ್ಲಿ ಬಹುತ್ವ ಪರಿಕಲ್ಪನೆ, ಸಮಷ್ಠಿಯ ಕೂಗು ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಭಾಷೆ, ರಾಜಕಾರಣ, ಸಾಂಸ್ಕೃತಿಕ ವಿಚಾರಗಳ ನಿರ್ದಿಷ್ಟತೆ ಮೀರಿ ಅದು ಸಾಮೂಹಿಕ ಪ್ರಜ್ಞೆ ಎನಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಡಾ.ರಹಮತ್‌ ತರೀಕೆರೆ ಅಭಿಪ್ರಾಯಪಟ್ಟರು.

ದೊಡ್ಡಬಳ್ಳಾಪುರ: ಏಕರೂಪೀಕರಣದ ಹೇರಿಕೆಯ ಸಂದರ್ಭದಲ್ಲಿ ಬಹುತ್ವ ಪರಿಕಲ್ಪನೆ, ಸಮಷ್ಠಿಯ ಕೂಗು ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಭಾಷೆ, ರಾಜಕಾರಣ, ಸಾಂಸ್ಕೃತಿಕ ವಿಚಾರಗಳ ನಿರ್ದಿಷ್ಟತೆ ಮೀರಿ ಅದು ಸಾಮೂಹಿಕ ಪ್ರಜ್ಞೆ ಎನಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಡಾ.ರಹಮತ್‌ ತರೀಕೆರೆ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬೆಂಗಳೂರಿನ ಆಕೃತಿ ಪುಸ್ತಕ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಆರ್.ಡಿ.ಕನ್ವೆಂಷನ್‌ ಹಾಲ್‌ನಲ್ಲಿ ಭಾನುವಾರ ನಡೆದ ತಿಂಗಳ ಮಾತುಕತೆ ಬಹುತ್ವ ಕರ್ನಾಟಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಗಾಮಿ ಸಂಸ್ಕೃತಿಯಿಂದ ಬಹುತ್ವದೆಡೆಗೆ ಸಾಗುವ ಒಲವು ಮುಖ್ಯವಾಗಿದ್ದು, ಶಕ್ತಿ ರಾಜಕಾರಣ ಸೈದ್ದಾಂತಿಕವಾಗಿ ಹೊರಹೊಮ್ಮುವುದು ಅಪರೂಪ. ನಮ್ಮ ಗ್ರಾಮೀಣ ಸಂಸ್ಕೃತಿಯ ಪರಿಭಾಷೆಗಳು ಬದಲಾದಂತೆ ಸಂಸ್ಕೃತಿಯೂ ಬದಲಾಗುತ್ತದೆ. ಈ ದೇಶದಲ್ಲಿ ವೈವಿಧ್ಯವನ್ನು ಸಂಭ್ರಮಿಸುವುದಿದೆ. ವೈವಿಧ್ಯ ಎಂಬುದು ಬಹುತ್ವದ ಮೊದಲ ಹಂತ. ಸಹಬಾಳ್ವೆಯ ವೇಳೆ ಅದು ಮಿಶ್ರಣವಾಗುತ್ತದೆ. ಬಹುತ್ವ ಎಂಬುದು ಸಮಾನತೆಯ ನೆಲೆಯಲ್ಲಿ ರೂಪಗೊಳ್ಳುವ ತತ್ವ ಎಂದರು.

ಇಂದು ತರಗತಿಗಳು ಬಹುತ್ವವನ್ನು ಭಗ್ನಗೊಳಿಸುವ ತಾಣಗಳಾಗಿ ಬದಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದೊಂದೇ ಉಳಿದಿರುವ ಮಾರ್ಗವಾಗಿದೆ. ಏಕಸಂಸ್ಕೃತಿಯನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದೇ ಸಂಸ್ಕೃತಿ, ನಾಯಕತ್ವ, ಧರ್ಮವನ್ನು ಹೇರುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗುತ್ತದೆ. ಭಾರತದ ಆರ್ಥಿಕ ಹಿಡಿತ ಶೇ.10 ಜನರಲ್ಲಿದೆ ಎಂಬುದು ಅಸಮಾನತೆಯನ್ನು ತೋರಿಸುತ್ತದೆ. ಹಲವು ಭಾಷೆ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ ಹೊಂದಿರುವ ಭಾರತಕ್ಕೆ ಬಹುತ್ವ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.

ಚಿಂತಕ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಮಾತನಾಡಿ, ಬಹುತ್ವದಲ್ಲಿ ವೈಜ್ಞಾನಿಕ ಸತ್ಯವು ಅಡಗಿದೆ. ಮನುಷ್ಯಪರವಾದ ಬಹುತ್ವ ಉಳಿದರೆ ಮನುಷ್ಯ ಉಳಿಯುತ್ತಾನೆ. ಕೋಮುವಾದ ಮತ್ತು ಮತೀಯವಾದದ ಸಂಘರ್ಷಕ್ಕೆ ಅನುಮಾನ ಕಾರಣವಾಗುತ್ತದೆ. ಅನುಮಾನ ದ್ವೇಷವಾಗಿ, ಹಿಂಸೆ ರೂಪತಾಳಿ ವಿನಾಶದ ಕಡೆಗೆ ದೂಡುತ್ತದೆ. ಕೋಮು ಸೌಹಾರ್ದತೆಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಹುತ್ವದ ಅಗತ್ಯವಿದೆ ಎಂದರು.

ಪ್ರಾಧ್ಯಾಪಕ ಡಾ.ಕಂಟನಕುಂಟೆ ರಂಗನಾಥ ಮಾತನಾಡಿ, ಪ್ರಭುತ್ವ ಮತ್ತು ಜನತೆ ಎರಡು ಕಡೆಯಿಂದಲೂ ಬಹುತ್ವ ಸಾಧಿಸಬೇಕಾಗಿದೆ. ಪ್ರಜಾಪ್ರಭುತ್ವ ಆಶಯದೊಂದಿಗೆ ಬಹುತ್ವ ಒಂದಾಗಬೇಕು. ಬಹುತ್ವವನ್ನು ಜೀವನ ಕ್ರಮದ ಪ್ರಕ್ರಿಯೆ ಆಗಬೇಕು. ಬಹುತ್ವಕ್ಕಿರುವ ಅಪಾಯಗಳನ್ನು ಅರಿಯಬೇಕು ಎಂದರು.

ವಿಮರ್ಶಕ ಡಾ.ರವಿಕುಮಾರ್ ನೀಹ ಮಾತನಾಡಿ, ಯಾವುದೇ ಧರ್ಮದಲ್ಲಿ ಏಕರೂಪತೆ ತರಲು ಸಾಧ್ಯವಿಲ್ಲ. ಒಂದೇ ರೀತಿಯ ಊಟ, ಸಿದ್ಧಾಂತವನ್ನು ಹೇರುವುದು ಅಪಾಯಕಾರಿ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವುದು ಸರಿಯಲ್ಲ ಎಂದರು.

ಬಹುತ್ವ ಕರ್ನಾಟಕ ಪುಸ್ತಕದ ಲೇಖಕರಾದ ಡಾ.ರಹಮತ್ ತರೀಕೆರೆ ಅವರೊಂದಿಗೆ ನಡೆದ ಸಂವಾದದಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗದ ಡಾ.ಪ್ರಕಾಶ್ ಮಂಟೆದ, ಹೇಮಂತ್ ಲಿಂಗಪ್ಪ, ಉಪನ್ಯಾಸಕರುಗಳಾದ ವನಿತಾ, ಪ್ರಸನ್ನ ಲಕ್ಷ್ಮೀಪುರ, ಎಚ್.ಎನ್.ರೇಣುಕಾರಾಧ್ಯ, ದೊಡ್ಡಬಳ್ಳಾಪುರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಫೋಟೋ-

24ಕೆಡಿಬಿಪಿ1- ದೊಡ್ಡಬಳ್ಳಾಪುರದ ಡಿ.ಆರ್.ನಾಗರಾಜ್ ಬಳಗದ ನೇತೃತ್ವದಲ್ಲಿ ಬಹುತ್ವ ಕರ್ನಾಟಕ ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಡಾ.ರಹಮತ್‌ ತರೀಕೆರೆ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ