ಕನ್ನಡಪ್ರಭ ವಾರ್ತೆ ಕಳಸ
ನಂಬಿಕೆಯೇ ಉಸಿರಾಗಿರುವ ಈ ಪುಣ್ಯ ಭೂಮಿಯಲ್ಲಿ ಪೂರ್ವಜರು ಹಾಕಿಕೊಟ್ಟ ಕಟ್ಟು-ಕಟ್ಟಳೆಗಳಂತೆ ಭಂಡಾರವನ್ನು ಹೊರಡಿಸುವ ಕಾರ್ಯಕ್ಕೆ ಭಕ್ತಿಯ ಚಾಲನೆ ದೊರೆಯಿತು. ಹೊಸದೇವರ ಚಾವಡಿಯಿಂದ ಪರಂಪರೆಯಂತೆ ದೇವರ ಮನೆಗೆ ತೆರಳಿ, ಅಲ್ಲಿಂದ ದೈವಗಳ ಭಂಡಾರವನ್ನು ಸ್ವೀಕರಿಸಲಾಯಿತು.
ಚೆಂಡೆ-ವಾದ್ಯಗಳ ಭೋರ್ಗರೆತ, ಛತ್ರಿ-ಚಾಮರಗಳ ಗಾಂಭೀರ್ಯ ಹಾಗೂ ಜೀಟಿಗೆಯ ಬೆಳಕಿನ ನಡುವೆ ಭಂಡಾರವು ರಾಜಪಥದಲ್ಲಿ ಸಾಗಿಬಂದಿತು.ಈ ಭವ್ಯ ಮೆರವಣಿಗೆಯು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತಲುಪಿ, ದೇವಿಯ ಅನುಗ್ರಹವನ್ನು ಪಡೆದ ನಂತರ ಪುನಃ ಚಾವಡಿಗೆ ಮರಳಿತು.ಚಾವಡಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದ ನಂತರ, ಪ್ರಧಾನ ಧರ್ಮದೇವತೆಗಳಾದ ಶ್ರೀ ವಿಷ್ಣುಮೂರ್ತಿ ದೇವತೆ, ರಾಜದೈವ ಹಾಗೂ ಪರಿವಾರ ದೈವಗಳಿಗೆ ಅತ್ಯಂತ ವಿಜೃಂಭಣೆಯ ನೇಮೋತ್ಸವವು ನಡೆಯಿತು.
ನೇಮೋತ್ಸವದ ಅಂಗವಾಗಿ ಸುಗಂಧಭರಿತ ಹೂವುಗಳಿಂದ ದೈವದ ಸನ್ನಿಧಿಯನ್ನು ಮನೋಹರವಾಗಿ ಶೃಂಗರಿಸಲಾಗಿತ್ತು. ಸಾಲು ದೀಪಗಳ ಜಗಮಗಿಸುವ ಬೆಳಕು ರಾತ್ರಿಯ ಹೊತ್ತು ದೈವಸ್ಥಾನಕ್ಕೆ ದಿವ್ಯ ಕಳೆಯನ್ನು ನೀಡಿತ್ತು.ಫೋಟೋ: ಕಳಸದ ಹೊರನಾಡಿನ ಹೊಸದೇವರ ಚಾವಡಿ ರಾಜದೇವಸ್ಥಾನದಲ್ಲಿ ನೇಮೋತ್ಸವ ಅದ್ಧೂರಿಯಾಗಿ ನೆರವೇರಿತು.