ಮೈಸೂರಿನಲ್ಲಿ ಹಾಡಹಗಲೆ ಮುಸುಕುದಾರಿಗಳಿಂದ ಡಕಾಯಿತಿ

KannadaprabhaNewsNetwork |  
Published : Jan 21, 2025, 12:33 AM IST
26 | Kannada Prabha

ಸಾರಾಂಶ

ಸಂಜೆ ವೇಳೆಗೆ ವ್ಯಾಪಾರಿ ಕಾರು, ಕೃತ್ಯಕ್ಕೆ ಬಳಸಿದ್ದ ಮತ್ತೊಂದು ಕಾರು ಪತ್ತೆ

ಕನ್ನಡಪ್ರಭ ವಾರ್ತೆ ಮೈಸೂರುಹಾಡುಹಗಲೇ ಕೇರಳ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿದ ಡಕಾಯಿತರು, ವ್ಯಾಪಾರಿ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿ, ಹಣವಿದ್ದ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಮೈಸೂರು ತಾಲೂಕು ಜಯಪುರ ಹೋಬಳಿ ಗುಜ್ಜೇಗೌಡನಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.ಕಾರನ್ನು ಅಡ್ಡಗಟ್ಟಿದ ಡಕಾಯಿತರು, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಕಾರಿನೊಂದಿಗೆ 1.50 ಲಕ್ಷ ರೂ. ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮುಸುಕುಧಾರಿಗಳ ತಂಡವು ಈ ಕೃತ್ಯವೇಸಗಿದೆ. ಸಂಜೆ ವೇಳೆಗೆ ವ್ಯಾಪಾರಿಯ ಕಾರು ಮತ್ತು ಆರೋಪಿಗಳ ಕಾರು ಪತ್ತೆಯಾಗಿದೆ. ಮತ್ತೊಂದು ಕಾರಿನಲ್ಲಿ ಅಥವಾ ಬದಲಿ ವಾಹನಗಳಲ್ಲಿ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆ ಇದೆ.ಕೇರಳದ ಸುಲ್ತಾನ್ ಬತ್ತೇರಿಯ ವ್ಯಾಪಾರಿ ಮಹಮ್ಮದ್ ಅಶ್ರಫ್ ಮತ್ತು ಕಾರು ಚಾಲಕ ಸೂಫಿ ಹಲ್ಲೆಗೊಳಗಾದವರು.ಸುಲ್ತಾನ್ ಬತ್ತೇರಿಯಿಂದ ನಂಜನಗೂಡಿಗೆ ಬಂದು, ಅಲ್ಲಿಂದ ಮೈಸೂರಿಗೆ ಬಂದು ಎಚ್.ಡಿ. ಕೋಟೆ ರಸ್ತೆಯಲ್ಲಿ ಅಡಿಕೆ ಖರೀದಿಗಾಗಿ ಮಹಮ್ಮದ್ ಅಶ್ರಫ್ ಅವರು 1.50 ಲಕ್ಷ ರೂ. ಹಣದೊಂದಿಗೆ ತೆರಳುತ್ತಿದ್ದರು.ಎಚ್.ಡಿ. ಕೋಟೆ- ಮಾನಂದನಾಡಿ ರಸ್ತೆಯಲ್ಲಿ ಹಾರೋಹಳ್ಳಿ- ಗುಜ್ಜೇಗೌಡನಪುರ ನಡುವೆ ಹೋಗುತ್ತಿದ್ದಾಗ ಎರಡು ಕಾರಿನಲ್ಲಿ ಬಂದು 6 ಮಂದಿ ಬಂದಿದ್ದು, ಇವರಲ್ಲಿ ನಾಲ್ವರು ಮುಸುಕಿದಾರಿಗಳು ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿದ್ದಾರೆ. ಇಬ್ಬರನ್ನು ಕಾರಿನಿಂದ ಕೆಳಗೆ ಇಳಿಸಿ ಮಾರಕಾಸ್ತ್ರಗಳಿಂದ ಹೆದರಿಸಿ ಹಲ್ಲೆ ನಡೆಸಿದ್ದು, ಬಳಿಕ ಅವರನ್ನು ಕಾರಿನಿಂದ ಹೊರಗೆ ತಳ್ಳಿ ಹಣವಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಗಾಯಾಳುಗಳಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ.ಈ ವಿಚಾರ ತಿಳಿದು ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್, ಡಿವೈಎಸ್ಪಿ ರಘು, ಜಯಪುರ ಠಾಣೆ ಎಸ್ಐ ಪ್ರಕಾಶ್ ಯತ್ತಿನಮನಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಲ್ಲೆಗೊಳದಾವರು ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ಕಾರು ಪತ್ತೆಡಕಾಯಿತಿ ಸಂಭವಿಸಿದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಜಿಲ್ಲೆಯಾದ್ಯಂತ ತಪಾಸಣೆ ಕೈಗೊಂಡರು. ಡಕಾಯಿತಿ ನಡೆದ 10 ಕಿ.ಮೀ. ದೂರದಲ್ಲಿ ಮಾರ್ಬಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆಯಲ್ಲಿ ಆರೋಪಿಗಳ ಕಾರು ಪತ್ತೆಯಾಗಿದೆ. ಇನ್ನೂ ಗೋಪಾಲಪುರದ ಬಳಿ ವ್ಯಾಪಾರಿಯ ಕಾರು ಪತ್ತೆಯಾಗಿದ್ದು, ಡಕಾಯಿತರು ಕಾರಿನ ಗಾಜು ಒಡೆದು ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. 3 ತಂಡ ರಚನೆಎರಡು ಕಾರುಗಳಲ್ಲಿ ಬಂದು ಡಕಾಯಿತಿ ಮಾಡಿದ್ದಾರೆ. ಕಾರಿನಲ್ಲಿ ಡ್ರೈವರ್ ಸೇರಿದಂತೆ ಇಬ್ಬರು ಇದ್ದರು. ಇಬ್ಬರ ಮೇಲೆ ಹಲ್ಲೆ ಮಾಡಿ, ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದೆ. ಗಡಿ ಭಾಗದಲ್ಲಿ ಅಲರ್ಟ್ ಮಾಡಲಾಗಿದೆ. ಕೇರಳದ ವಯನಾಡಿನ ಎಸ್ಪಿ ಜೊತೆ ಮಾತನಾಡಿದ್ದೇನೆ. ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಸಂಜೆಯ ವೇಳೆಗೆ 2 ಕಾರುಗಳು ಪತ್ತೆಯಾಗಿವೆ.- ಎನ್. ವಿಷ್ಣುವರ್ಧನ್, ಮೈಸೂರು ಎಸ್ಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!