ಎಲ್ಲರಿಗೂ ಸಮಾನತೆ ನೀಡಿದ ಭಾರತ ಸಂವಿಧಾನ: ಸಿ.ಎನ್. ಮಂಜೇಗೌಡ

KannadaprabhaNewsNetwork |  
Published : Nov 27, 2025, 01:02 AM IST
13 | Kannada Prabha

ಸಾರಾಂಶ

ಸಂವಿಧಾನ ರಚನೆ ಮಾಡದೆ ಇದ್ದಿದ್ದರೆ ನಾವು ಯಾರು ಬದುಕಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯರು, ಹಿಂದುಳಿದ ಸಮುದಾಯದವರು ಯಾರು ಕೂಡ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಹೆಣ್ಣು ಮಕ್ಕಳು ಸ್ವತಂತ್ರವಾಗಿ ಶಿಕ್ಷಣ ಪಡೆದುಕೊಳ್ಳುವುದಕ್ಕೆ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ಕಾರಣ.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸಮಾನತೆಯ ನ್ಯಾಯ ಕಲ್ಪಿಸಿ ಕೊಡುವುದಕ್ಕೆ ನಮ್ಮ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ನ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆಯನ್ನು ದೀಪ ಬೆಳಗಿಸಿ, ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಸಂವಿಧಾನ ಪೀಠಿಕೆ ಬೋಧಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಾನು ವಿಧಾನ ಪರಿಷತ್ ಸದಸ್ಯನಾಗಿ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರೆ ಅದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಹಾಗಾಗಿ ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಅದರಿಂದಲೇ ಎಲ್ಲರ ಮನದಲ್ಲೂ ಅಂಬೇಡ್ಕರ್ ನೆಲೆಸಿದ್ದಾರೆ ಎಂದು ಹೇಳಿದರು.

ಸಂವಿಧಾನ ರಚನೆ ಮಾಡದೆ ಇದ್ದಿದ್ದರೆ ನಾವು ಯಾರು ಬದುಕಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯರು, ಹಿಂದುಳಿದ ಸಮುದಾಯದವರು ಯಾರು ಕೂಡ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಹೆಣ್ಣು ಮಕ್ಕಳು ಸ್ವತಂತ್ರವಾಗಿ ಶಿಕ್ಷಣ ಪಡೆದುಕೊಳ್ಳುವುದಕ್ಕೆ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ಕಾರಣ ಎಂದರು.

ಈ ದೇಶದಲ್ಲಿ ಅಂಬೇಡ್ಕರ್ ಅವರು ಓದಿರುವ ಪದವಿ ಪರಿಗಣಿಸಿ ಅವರಿಗೆ ಸಂವಿಧಾನ ರಚಿಸುವ ಜವಾಬ್ದಾರಿ ನೀಡಲಾಯಿತು. ಯಾರೂ ಹೆಚ್ಚು ಶಿಕ್ಷಣ ಪಡೆಯುತ್ತಾರೋ ಅವರೇ ನಾಯಕರಾಗುತ್ತಾರೆ ಎನ್ನುವುದಕ್ಕೆ ಉದಾಹರಣೆ ಆಗಿದ್ದಾರೆ, ಇಂದು ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವುದು ಡಾ.ಬಿ.ಆರ್. ಅಂಬೇಡ್ಕರ್ ಅವರದ್ದು ಮಾತ್ರ. ಹಾಗಾಗಿ ಆ ಮಹಾನಾಯಕ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಹಾಕಬೇಕು. ಅದೇ ನಾವು ಅವರಿಗೆ ಕೊಡುವ ಗೌರವ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಬ್ರಿಟಿಷರ ಆಳ್ವಿಕೆ ಮಾಡುತಿದ್ದ ಕಾಲದಲ್ಲಿ ಹಸಿವು, ಅನಾರೋಗ್ಯ ಪೀಡಿತವಾಗಿ ಅನೇಕ ರೋಗಗಳಿಗೆ ತುತ್ತಾಗಿದಂತಹ ದೇಶ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ ಎಂದರು.

ನಮ್ಮ ದೇಶ ಬೇರೆ ದೇಶಗಳಿಗಿಂತ ಏನು ಕಡಿಮೆ ಇಲ್ಲ. ಕೈಗಾರಿಕೆ, ನೀರಾವರಿ, ಕೃಷಿ, ತಂತ್ರಜ್ಞಾನ , ಐಟಿಬಿಟಿ ಕ್ಷೇತ್ರದಲ್ಲಿ ಹೆಚ್ಚು ಬೆಳೆದಿದೆ ಎಂದರೆ ಅದಕ್ಕೆ ನಮ್ಮ ಅಂಬೇಡ್ಕರ್ ಅವರೇ ಕಾರಣ. ನಮ್ಮ ದೇಶ ಇನ್ನೂ ಹೆಚ್ಚು ಬೆಳೆಯಬೇಕು ಎಂದರೆ ನಮ್ಮಲ್ಲಿ ಇರುವ ಜಾತಿ ಪದ್ಧತಿ ದೂರಾಗಬೇಕು, ಜ್ಯಾತ್ಯಾತೀತವಾಗಿ ಮತ್ತು ನಾವೆಲ್ಲರೂ ಒಂದು ಎಂದು ಮುಂದೆ ಸಾಗಬೇಕು. ಸಮಾಜದಲ್ಲಿ ಸಮಾನತೆಯಿಂದ ನಾವೆಲ್ಲರೂ ಬದುಕಬೇಕು. ಭಾರತೀಯರು ನಾವೆಲ್ಲರೂ ಒಂದೇ ಎಂಬ ಮನೋಭಾವನೆ ನಮ್ಮಲ್ಲಿ ಬರಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಅವರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿರುವಂತಹ ಸಂವಿಧಾನವನ್ನು ನಾವೆಲ್ಲರೂ ಶಿಸ್ತು ಬದ್ಧವಾಗಿ ಪಾಲಿಸಬೇಕು. ಸಂವಿಧಾನದಲ್ಲಿ ನಮಗೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಿದ್ದಾರೆ. ಅದನ್ನು ಕೇಳುವಂತಹ ಅಧಿಕಾರ ನಮ್ಮ ಸಂವಿಧಾನ ನಮಗೆ ನೀಡಿದೆ. ಹಾಗಾಗಿ ನೀವೆಲ್ಲರೂ ಯುವಕರು ಮುಂದಿನ ಪ್ರಜೆಗಳು ನಾವೆಲ್ಲರೂ ಸಂವಿಧಾನ ಪಾಲಿಸಬೇಕು ಎಂದರು.

ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್ ಮಾತನಾಡಿ, ಸಂವಿಧಾನ ಜಾರಿಗೂ ಮುನ್ನ ದೀನ ದಲಿತರು, ಬಡವರು, ಮಹಿಳೆಯರ ಹಕ್ಕುಗಳನ್ನು ಉಳ್ಳವರು ಕಿತ್ತುಕೊಂಡಿದ್ದರು, ಅವರು ಈಗೆ ಬದುಕಬೇಕು ಈ ದಾರಿಯಲ್ಲೇ ನಡೆಯಬೇಕು ಎಂಬ ಮತ್ಸ್ಯ ನ್ಯಾಯ ಮಾಡಿದ್ದರು, ಆದರೆ ಅಂಬೇಡ್ಕರ್ ಅವರು ಸಂವಿಧಾನ ಮೂಲಕ ಎಲ್ಲರಿಗೂ ಸ್ವಾತಂತ್ರ್ಯ ಹಕ್ಕು ನೀಡಿದರು. ಹಾಗಾಗಿ ಇದೇ ನಮ್ಮೆಲ್ಲರ ರಕ್ಷಣೆ ಆಗಿರುವುದರಿಂದ ಸಂವಿಧಾನಕ್ಕೆ ಧಕ್ಕೆಯಾಗದ ಆಗೆ ಭವಿಷ್ಯದ ನಾಗರಿಕರಾದ ಹಕ್ಕುಗಳಿಗೆ ಚ್ಯುತಿ ಬಂದಾಗ ಧ್ವನಿ ಎತ್ತಬೇಕು. ಸಂವಿಧಾನದ ಮೂಲಭೂತ ಹಕ್ಕುಗಳು ನಮಗೆ ಬೇಕು ಎನ್ನುವ ರೀತಿ ಮೂಲಭೂತ ಕರ್ತವ್ಯ ‌ಸಹ‌ಪಾಲಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಆರ್.ಎಚ್. ಪವಿತ್ರಾ ಮಾತನಾಡಿ, ಸಂವಿಧಾನ ಎಂದರೆ ನಮ್ಮ ಉಸಿರು. ಸಂವಿಧಾನ ಎಂದರೆ ಮೈ ರೋಮಾಂಚಾರಕಾರಿಯಾಗುತ್ತದೆ. ಲಿಖಿತ ರೂಪದಲ್ಲಿ ಇರುವಂತಹ ಅತೀ ದೊಡ್ಡ ಸಂವಿಧಾನ ನಮ್ಮದು. ಸ್ವಾತಂತ್ರ್ಯ, ಸಮಾನತೆ ಭಾತೃತ್ವ ಈ ಮೂರು ಅಂಶಗಳು ನಮ್ಮ ಸಂವಿಧಾನದ ಆಧಾರಸ್ಥಂಭ. ಈ ಮೂರು ಅಂಶಗಳು ಬೆಳವಣಿಗೆಯಾದಲ್ಲಿ ಸರ್ವತೋಮುಖವಾಗಿ ಬೆಳವಣಿಗೆ ಆಗುತ್ತದೆ ಎಂಬ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಸಂವಿಧಾನ ರಚಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಯುವಕರೇ ದೇಶದ ಮುಂದಿನ ಪ್ರಜೆಗಳು. ಆದ್ದರಿಂದ ನಮ್ಮ ದೇಶದ ಸಂವಿಧಾನದಲ್ಲಿ ಯಾವೆಲ್ಲಾ ಕಾನೂನಿನಲ್ಲಿ ಏನೆಲ್ಲಾ ಇದೇ ಎಂದು ಅರಿತು ಸರಿಯಾಗಿ ಪಾಲಿಸಿದ್ದಲ್ಲಿ ವ್ಯಕ್ತಿ ವಿಕಾಸನ ಸಾಧ್ಯವಾಗುತ್ತದೆ ಎಂದರು.

ಈ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಅವರು ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಚ್‌. ನಿರ್ಮಲಾ, ಮುಖಂಡರಾದ ಸೋಮಣ್ಣ ಮೊದಲಾದವರು ಇದ್ದರು.

ಜಾಥಾಗೆ ಚಾಲನೆ:

ಪುರಭವನ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಜಾಗೃತಿ ಜಾಥಾಗೆ ಶಾಸಕರಾದ ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮೊದಲಾದವರು ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್, ಎಸ್ಪಿ ವಿಷ್ಣುವರ್ಧನ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!