‘ಮಧು ನಿವಾಸ್’ ಹೋಟೆಲ್‌ ಹೆಸರು ಕೇಳದ ಮೈಸೂರಿಗನಿಲ್ಲ..!

KannadaprabhaNewsNetwork |  
Published : Nov 27, 2025, 01:02 AM IST
ಮಧು 1 | Kannada Prabha

ಸಾರಾಂಶ

‘ಮಧುನಿವಾಸ್’ ಈ ಹೆಸರು ಕೇಳುತ್ತಲೇ ಮೈಸೂರಿನ ಹಳೇ ತಲೆಮಾರಿನವರಿಗೆ ಕಿವಿ ನಿಮಿರುತ್ತದೆ. ಅಷ್ಟು ಪ್ರಖ್ಯಾತಿಯಾದ ಹೋಟೆಲ್. ಗಾಂಧಿ ಚೌಕದಲ್ಲಿ ಕಳೆದ ಐದು ದಶಕಗಳ ಹಿಂದೆ ತೆಲೆ ಎತ್ತಿದ್ದ ಮಧುನಿವಾಸ್, ಈಗ ಹೊಸ ಮಾದರಿಯಲ್ಲಿ ಸಿದ್ಧಾರ್ಥ ಬಡಾವಣೆಯಲ್ಲಿ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

‘ಮಧುನಿವಾಸ್’ ಈ ಹೆಸರು ಕೇಳುತ್ತಲೇ ಮೈಸೂರಿನ ಹಳೇ ತಲೆಮಾರಿನವರಿಗೆ ಕಿವಿ ನಿಮಿರುತ್ತದೆ. ಅಷ್ಟು ಪ್ರಖ್ಯಾತಿಯಾದ ಹೋಟೆಲ್.

ಗಾಂಧಿ ಚೌಕದಲ್ಲಿ ಕಳೆದ ಐದು ದಶಕಗಳ ಹಿಂದೆ ತೆಲೆ ಎತ್ತಿದ್ದ ಮಧುನಿವಾಸ್, ಈಗ ಹೊಸ ಮಾದರಿಯಲ್ಲಿ ಸಿದ್ಧಾರ್ಥ ಬಡಾವಣೆಯಲ್ಲಿ ಆರಂಭವಾಗಿದೆ. ಮಧುನಿವಾಸ್ ಹೋಟೆಲ್‌ ಆರಂಭಿಸಿದ್ದ ಲೇಟ್ ಬಿ.ರಾಮದಾಸ್‌ ಭಟ್ ಅವರ ಪುತ್ರ ಬಿ.ಆರ್. ರಾಘವೇಂದ್ರ ಭಟ್ ಅವರು 1997 ರಲ್ಲಿ ಜಿಎಸ್ಎಸ್ ಶಾಲೆ ಪಕ್ಕದ ರಸ್ತೆಯಲ್ಲಿ ತೆರೆದಿರುವ ಹೊಟೇಲ್ ದೋಸೆ ಮತ್ತು ಮಧ್ಯಾಹ್ನದ ಊಟಕ್ಕೆ ಹಸರುವಾಸಿ.

ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತ ಶೈಲಿಯ ಊಟ ಇಲ್ಲಿ ಲಭ್ಯ. ದಕ್ಷಿಣ ಭಾರತ ಶೈಲಿಯ ಊಟವನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ. ಅನಿಯಮಿತ ಅನ್ನದ ಜತೆಗೆ ಹೋಳಿಗೆಯನ್ನೂ ನೀಡಲಾಗುತ್ತದೆ. ಹೋಟೆಲ್‌ ಸಮೀಪದಲ್ಲಿಯೇ ಜಿಲ್ಲಾಧಿಕಾರಿ ಕಚೇರಿ ಮತ್ತು ಡಿಎಫ್.ಆರ್.ಎಲ್ ಕಚೇರಿ ಇದ್ದು, ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಈ ಹೊಟೇಲ್ ನ ಕಾಯಂ ಗ್ರಾಹಕರು.

ಇದರ ಜೊತೆಗೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿ ಮತ್ತು ಸಿಬ್ಬಂದಿಗಳೂ ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ. ಸಿದ್ಧಾರ್ಥ ಬಡಾವಣೆಯ ಜನತೆಯ ಸಹಕಾರ ಮತ್ತು ಅವರ ಸ್ನೇಹಪರತೆಯನ್ನು ಹೋಟೆಲ್‌ ಮಾಲೀಕರಾಗಲಿ ಮತ್ತು ಸಿಬ್ಬಂದಿಯಾಗಲಿ ಮರೆತಿಲ್ಲ. ಕಳೆದ 25 ವರ್ಷಗಳಿಂದಲೂ ಪ್ರತಿನಿತ್ಯ ಭೇಟಿ ನೀಡುವ ಹಿರಿಯ ನಾಗರೀಕರು ಮತ್ತು ಸ್ನೇಹಿತ ವರ್ಗದವರು ಹೆಚ್ಚು ಆಪ್ತವಾಗಿ ನಡೆದುಕೊಳ್ಳುತ್ತಾರೆ. ಹಿರಿಯ ನಾಗರೀಕರು ಹೋಟೆಲ್‌ ಮೇಲಿಟ್ಟಿರುವ ವಿಶ್ವಾಸವನ್ನು ಅರಿತಿರುವ ಮಾಲೀಕ ರಾಗವೇಂದ್ರ ಭಟ್ ಅವರು ಅವರಿಗೆ ಉಚಿತವಾಗಿ ಕಾಫಿ, ಟೀ ನೀಡುತ್ತಾರೆ.

ಮತ್ತೊಂದು ಸೋಜಿಗದ ಸಂಗತಿ ಎಂದರೆ,ಹೋಟೆಲ್ ಆರಂಭವಾದಾಗಿನಿಂದ ಇಲ್ಲಿನ ಅಡುಗೆ ಸಿಬ್ಬಂದಿ ಕೆಲಸ ಬಿಟ್ಟಿಲ್ಲ. ಸಾಮಾನ್ಯವಾಗಿ ಹೊಟೇಲ್ಉದ್ಯಮದಲ್ಲಿ ಅಡುಗೆಯವರ ಸಮಸ್ಯ ಸಹಜ. ಒಂದು ಕಡೆ ಒಂದು ವರ್ಷವೂ ಇರುವುದಿಲ್ಲ. ಆಗಾಗ್ಗೆ ಬದಲಾಗುತ್ತಲೇ ಇರುತ್ತಾರೆ. ಆದರೆ ಇಲ್ಲಿ ಮಾತ್ರ ಆರಂಭದಿಂದಲೂ ಅಲ್ಲಿನ ಎಲ್ಲಾ ಸಿಬ್ಬಂದಿ ಕೆಲಸ ಬಿಟ್ಟಿಲ್ಲ.

ಮಧು ನಿವಾಸ ಹೋಟೆಲ್‌ ಹಿನ್ನೆಲೆ:

1954 ರಲ್ಲಿ ಉಡುಪಿಯಿಂದ ಬಂದ ಬಿ.ರಾಮದಾಸ್‌ ಭಟ್‌ ಅವರು ನಗರದ ಪ್ರೀಮಿಯರ್ ಸ್ಟುಡಿಯೋದಲ್ಲಿ ಕ್ಯಾಂಟೀನ್ ಆರಂಭಿಸಿದ್ದರು. ಬಳಿಕ ನಂಜುಮಳಿಗೆಯಲ್ಲಿ ಹೋಟೆಲ್‌ ತೆರೆದರು. ಇದನ್ನು ಈಗಲೂ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೆನಪು ಮಾಡಿಕೊಳ್ಳುತ್ತಾರೆ.

ಆದ್ದರಿಂದ 1960 ರಲ್ಲಿ ನಗರದ ಹೃದಯ ಭಾಗವಾದ ಗಾಂಧಿಚೌಕದಲ್ಲಿ ಆರಂಭಿಸಿದ ‘ಮಧುನಿವಾಸ್’ ಹೋಟೆಲ್‌ ಮನೆಮಾತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಮೊದಲ ಬಾರಿಗೆ ಹೋಟೆಲ್ ಮಧುನಿವಾಸ್ ಕೇಟರಿಂಗ್ ಎಂದರೆ ಎಲ್ಲಿಲ್ಲದ ಪ್ರೀತಿ.

ಆಗ ರಾಜ್ಯಪಾಲರಾಗಿದ್ದ ಧರ್ಮವೀರ್, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಮತ್ತು ಕೇಂದ್ರ ಸಚಿವರಾಗಿದ್ದ ರಾಜಶೇಖರಮೂರ್ತಿ ಸೇರಿದಂತೆ ಅನೇಕರಿಗೆ ಮಧುನಿವಾಸ್ ಖಾದ್ಯಗಳೆಂದರೆ ಎಲ್ಲಿಲ್ಲದ ಪ್ರೀತಿ. ಉದ್ಯಮ ಕ್ಷೇತ್ರದಲ್ಲಿಯೇ ಅತಿ ದೊಡ್ಡ ಹೆಸರು ಮಾಡಿದ್ದ ರಾಮದಾಸ್ ಭಟ್‌ ಅವರು 1977ರ ಅವಧಿಯಲ್ಲಿ ಖಾಸಗಿ ದಸರಾ ಸಮಿತಿ ಸದಸ್ಯರೂ ಆಗಿದ್ದರು.

ಮೈಸೂರಿನಲ್ಲಿ ಹೊರಗಿನಿಂದ ಬಂದು ಹೋಟೆಲ್‌ ಉದ್ಯಮ ಆರಂಭಿಸಿ ಸೈ ಎನಿಸಿಕೊಂಡರು. ಸುಮಾರು 65 ವರ್ಷಗಳಷ್ಟು ಹಳೆಯಾದ ಮಧುನಿವಾಸ್‌ ಹೋಟೆಲ್ ಬಿ. ರಾಮದಾಸ್ ಅವರ ನಿಧನದ ಬಳಿಕ ಗಾಂಧಿಚೌಕದಲ್ಲಿಯೇ ರಾಧಾಕೃಷ್ಣ ಭಟ್ ಅವರು ನಡೆಸಿಕೊಂಡು ಬರುತ್ತಿದ್ದರು. ಮೈಸೂರಿನಿಂದ ಆಚೆಗೂ ಕ್ಯಾಟರಿಂಗ್ ವ್ಯವಸ್ಥೆಯನ್ನು ವಿಸ್ತರಿಸಿದ ಕೀರ್ತಿ ಈ ಕುಟುಂಬದವರಿಗೆ ಸಲ್ಲುತ್ತದೆ.ಹೋಟೆಲ್‌ ಆರಂಭವಾದಾಗಿನಿಂದ ಇಲ್ಲಿನ ಅಡುಗೆ ಸಿಬ್ಬಂದಿ ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಲ್ಲಿನ ಗ್ರಾಹಕರು ನಮ್ಮೊಡನೆ ಉತ್ತಮ ಬಾಂಧವ್ಯ ಹೊಂದಿದ್ದು, ಪ್ರತಿನಿತ್ಯವೂ ಭೇಟಿ ನೀಡುವ ತಂಡವೇ ಇದೆ. ನಮ್ಮ ನಿತ್ಯದ ಗ್ರಾಹಕರಿಗೆ ಕೆಲವೊಂದು ವೇಳೆ ರಿಯಾಯಿತಿ ನೀಡಿರುವುದೂ ಉಂಟು.

- ಬಿ.ಆರ್. ರಾಘವೇಂದ್ರ ಭಟ್, ಹೊಟೇಲ್‌ ಮಾಲೀಕರು

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ