ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬಲಿಷ್ಠ ಸಂವಿಧಾನ ರಚನೆಯ ಮೂಲಕ ಭವ್ಯ ಭವಿಷ್ಯದ ಭಾರತದ ಕನಸಿಗೆ ಅಕ್ಷರ ರೂಪ ಕೊಟ್ಟವರು ಅಂದಿನ ನಮ್ಮ ಸಂವಿಧಾನ ರಚನಾಕಾರರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾಲೇಜು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿಯ ಪಥದಲ್ಲಿ ದೇಶ
ವಿವಿಧತೆಯಲ್ಲಿ ಏಕತೆಯನ್ನು ಹೊಂದಿ ಅಭಿವೃದ್ಧಿಯ ಪಥದಲ್ಲಿ ದೇಶ ಮುನ್ನಡೆಯುತ್ತಿದೆ. ನವೆಂಬರ್ 26, 1949ರಂದು ಸಂವಿಧಾನ ಅಂಗೀಕರಿಸಿಕೊಂಡ ಸವಿನೆನಪಿಗಾಗಿ ಸಂವಿಧಾನ ದಿನವನ್ನು 2015ರಿಂದ ಆಚರಿಸಲಾಗುತ್ತಿದೆ. ಇಂದು 10ನೇ ವರ್ಷದ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರ ನಮ್ಮ ಸಂವಿಧಾನವನ್ನು ರಚನೆ ಮಾಡಿಕೊಂಡು ನಮ್ಮ ಆಡಳಿತವನ್ನು ನಾವೇ ನಡೆಸಲು ಸಂವಿಧಾನ ರಚಿಸಲಾಯಿತು.ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ರಚನಾ ಕರಡು ಸಮಿತಿಯು 2 ವರ್ಷ, 11 ತಿಂಗಳು ಮತ್ತು 18 ದಿನಗಳ ಕಾಲ ಸಂವಿಧಾನದ ಕರಡನ್ನು ಸಿದ್ಧಪಡಿಸಿತು. ಸಂವಿಧಾನ ಎಷ್ಟೇ ಬಲಿಷ್ಠವಾಗಿದ್ದರೂ, ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವ ಆಡಳಿತ ವರ್ಗದವರು ಒಳ್ಳೆಯ ಧ್ಯೇಯೋದ್ದೇಶಗಳನ್ನು ಹೊಂದಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಮಾತ್ರ ಎಲ್ಲರಿಗೂ ನ್ಯಾಯ, ರಕ್ಷಣೆ, ಸಮಾನವಾದ ಅವಕಾಶಗಳು ಸಿಗಲು ಸಾಧ್ಯ ಎಂದರು.
ಕಡ್ಡಾಯವಾಗಿ ಮತ ಚಲಾಯಿಸಿಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಚುನಾವಣೆಗಳು ಬಂದಾಗ ಯೋಚಿಸಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಸಮರ್ಥರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದ ನ್ಯಾಯಾಧೀಶರು, ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಕರ್ತವ್ಯಗಳನ್ನು ಪಾಲಿಸಬೇಕುಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲರಾದ ಟಿ.ಎಸ್ ವಿಜಯ್ ಶಂಕರ್ ಅವರು ಮಾತನಾಡಿ, ಪ್ರಜೆಗಳನ್ನು ಮತ್ತು ದೇಶವನ್ನು ಸಶಕ್ತಗೊಳಿಸುವಲ್ಲಿ ನಮ್ಮ ಸಂವಿಧಾನದ ಪಾತ್ರ ಅಪಾರವಾದದ್ದು. ಪ್ರಜೆಗಳಾದ ನಾವೆಲ್ಲರೂ ಸಹ ಸಂವಿಧಾನವನ್ನು ಅರ್ಥೈಸಿಕೊಂಡು ಅದನ್ನು ಅನುಸರಿಸುವ ಮೂಲಕ ಸಂವಿಧಾನವನ್ನೂ ಸಶಕ್ತಗೊಳಿಸುವ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಪ್ರಜೆಗಳಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಪ್ರತಿಯೊಬ್ಬರೂ ಹಕ್ಕುಗಳನ್ನು ಚಲಾಯಿಸುವ ಜೊತೆಗೆ ಮೂಲಭೂತ ಕರ್ತವ್ಯಗಳನ್ನೂ ಚಾಚೂ ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ.ಬಿ.ಶಿಲ್ಪ, ನ್ಯಾ. ಎಸ್.ವಿ.ಕಾಂತರಾಜು, ನ್ಯಾ.ಎಂ.ಶೃತಿ, ನ್ಯಾ. ಪ್ರೇಮ್ ಕುಮಾರ್, ನ್ಯಾ. ಎಸ್.ಶ್ರೀಧರ, ನ್ಯಾ. ಬಿ.ಶಾರದ, ನ್ಯಾ. ಎಂ.ಲತಾ ಕುಮಾರಿ, ನ್ಯಾ. ಹೆಚ್.ಕೆ.ಉಮೇಶ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್, ಪ್ರಾಂಶುಪಾಲ ಜಿ.ಡಿ ಚಂದ್ರಯ್ಯ ವಿದ್ಯಾರ್ಥಿನಿಯರು ಇದ್ದರು.