ಮರಳಿಗೂಡು ಸೇರಿದ ಈರಕರ ಕುಟುಂಬ

KannadaprabhaNewsNetwork |  
Published : Sep 29, 2025, 03:02 AM IST
(28-ಕಾಗವಾಡ-1)ಅನಂತಪೂರ ಗ್ರಾಮದ ಈರಕರ ಕುಟುಂಬಸ್ಥರು.(28-ಕಾಗವಾಡ-01)ಪ್ರಶಾಂತ ಮುನ್ನೊಳ್ಳಿ ಡಿವೈಎಸ್‌ಪಿ ಅಥಣಿ | Kannada Prabha

ಸಾರಾಂಶ

ತಮಗೆ ದೇವರು ಪ್ರತ್ಯಕ್ಷವಾಗಿದ್ದು, ತಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ ಎಂದು ದೇಹತ್ಯಾಗಕ್ಕೆ ನಿರ್ಧರಿಸಿದ್ದ ಕುಟುಂಬವೊಂದು ಮರಳಿಗೂಡು ಸೇರಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ತಮಗೆ ದೇವರು ಪ್ರತ್ಯಕ್ಷವಾಗಿದ್ದು, ತಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ ಎಂದು ದೇಹತ್ಯಾಗಕ್ಕೆ ನಿರ್ಧರಿಸಿದ್ದ ಕುಟುಂಬವೊಂದು ಮರಳಿಗೂಡು ಸೇರಿದೆ.

ಅಥಣಿ ತಾಲೂಕಿನ ಅನಂತಪೂರ ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ತುಕಾರಾಮ ಈರಕರ ಸೇರಿದಂತೆ ಪತ್ನಿ ಸಾವಿತ್ರಿ, ಮಗ ರಮೇಶ ಈರಕರ, ಸೊಸೆ ವೈಷ್ಣವಿ, ಮಗಳು ಮಾಯಾ ಕೆಲ ದಿನಗಳ ಹಿಂದೆ ದೇಹತ್ಯಾಗಕ್ಕೆ ನಿರ್ಧರಿಸಿದ್ದರು.

ಈ ವಿಚಾರ ಗಮನಿಸಿದ್ದ ಜಿಲ್ಲಾ ಹಾಗೂ ತಾಲೂಕು ಆಡಳಿತ, ಮಠಾಧೀಶರು, ಜನಪ್ರತಿನಿಧಿಗಳು, ಸ್ವಯಂ ಸೇವಕರು, ಪತ್ರಕರ್ತರ ಮನವೊಲಿಕೆಯಿಂದ ಕುಟುಂಬಸ್ಥರು ಚಿಕಿತ್ಸೆ ಪಡೆದು ಮೂರು ದಿನಗಳ ಹಿಂದೆ ಸ್ವ ಗ್ರಾಮಕ್ಕೆ ಮರಳಿದ್ದಾರೆ. ತಮ್ಮ ನಿತ್ಯದ ಕಾಯಕದಲ್ಲಿ ನಿರತರಾಗಿದ್ದಾರೆ.

ಘಟನೆ ಹಿನ್ನೆಲೆ:

ರಾಮ್‌ಪಾಲ್ ಮಹಾರಾಜರ ಶಿಷ್ಯರಾಗಿ ಅಧ್ಯಾತ್ಮದತ್ತ ವಾಲಿದ್ದ ಈರಕರ ಕುಟುಂಬಸ್ಥರು, ಅಗಷ್ಟ ತಿಂಗಳಿನಿಂದ ಸೆಪ್ಟೆಂಬರ್‌ 8 ರವರೆಗೆ ಅಧ್ಯಾತ್ಮದಲ್ಲಿ ಮುಳುಗಿ ಪ್ರತಿನಿತ್ಯ ತಮ್ಮ ಕೃಷಿ ಕಾಯಕ ಬಿಟ್ಟು ಕೇವಲ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದರು. ಬಾಬಾ ಪ್ರತಿನಿತ್ಯ ಪ್ರತ್ಯಕ್ಷನಾಗಿ ಮಾತನಾಡುತ್ತಾನೆ. ಆತ ಸೆ.8ರಂದು ನಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ ಎಂದು ದೇಹತ್ಯಾಗಕ್ಕೆ ಮುಂದಾಗಿದ್ದರು.

ಈ ವಿಚಾರ ಗಮನಿಸಿದ ಜಿಲ್ಲಾ ಹಾಗೂ ತಾಲೂಕು ಆಡಳಿತ, ಮಠಾಧೀಶರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಗಳು, ಪತ್ರಕರ್ತರು ಹಲವು ಬಾರಿ ಮನವೊಲಿಸಿ, ಚಿಕಿತ್ಸೆಗಾಗಿ ಧಾರವಾಡದ ನಿಮಾನ್ಸ್‌ಗೆ ಸೇರಿಸಿದ್ದರು. ಈಗ ಐವರು ಗುಣಮುಖರಾಗಿ ಮರಳಿದ್ದಾರೆ. ಕುಟುಂಬಸ್ಥರಿಗೆ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ಇತರರು ಅಭಿನಂದಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮಠಾಧೀಶರು, ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ, ತಹಸೀಲ್ದಾರ್‌ ಸಿದರಾಯ ಭೋಸಗಿ, ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಮಲ್ಲಪ್ಪ ಉಪ್ಪಾರ, ಮಾದ್ಯಮದವರು, ವಕೀಲರ ಸಂಘ ಸೇರಿದಂತೆ ಹಲವರು ಸೇರಿದ್ದಾರೆ.

ಈರಕರ ಕುಟುಂಬ ಮೌಢ್ಯತೆಯಿಂದ ಹೊರಬಂದಿದ್ದಾರೆ. ಇಲ್ಲದಿದ್ದರೆ ಅವರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮರಳಿ ಗ್ರಾಮಕ್ಕೆ ಬಂದು ಮೂರು ದಿನಗಳು ಗತಿಸಿವೆ. ಅವರು ಆರೋಗ್ಯವಾಗಿದ್ದು, ತಮ್ಮ ದೈನಂದಿಕ ಕೃಷಿ ಮತ್ತಿತರ ಕಾಯಕದಲ್ಲಿ ತೊಡಗಿದ್ದಾರೆ.

ಪ್ರಶಾಂತ ಮುನ್ನೊಳ್ಳಿ, ಡಿವೈಎಸ್‌ಪಿ ಅಥಣಿ

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ