ನಗರದಲ್ಲಿ ಮುಂದುವರಿದ ಜಿಸಿಬಿಗಳ ಅಬ್ಬರ

KannadaprabhaNewsNetwork |  
Published : Jul 03, 2026, 02:00 AM IST
ನಗರಾಭಿವೃದ್ಧಿ ಸಚಿವ | Kannada Prabha

ಸಾರಾಂಶ

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವಾದ ಗುರುವಾರವೂ ಮುಂದುವರಿಯಿತು. ಕೋರಮಂಗಲ, ಜಯನಗರ, ಅವಿನ್ಯೂ ರಸ್ತೆ, ಮಿಷನ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಪಾಲಿಕೆಗಳ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಪಾದಚಾರಿ ಮಾರ್ಗದಲ್ಲಿನ ಅಂಗಡಿ, ಮುಂಗಟ್ಟುಗಳನ್ನು ತೆರವು ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವಾದ ಗುರುವಾರವೂ ಮುಂದುವರೆಯಿತು. ಕೋರಮಂಗಲ, ಜಯನಗರ, ಅವಿನ್ಯೂ ರಸ್ತೆ, ಮಿಷನ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಪಾಲಿಕೆಗಳ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಪಾದಚಾರಿ ಮಾರ್ಗದಲ್ಲಿನ ಅಂಗಡಿ, ಮುಂಗಟ್ಟುಗಳನ್ನು ತೆರವು ಮಾಡಿದರು.

ಅನೇಕ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಇರಿಸಲಾಗಿದ್ದ ವಸ್ತುಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಸಾಗಣೆ ಮಾಡಲಾಯಿತು. ಇನ್ನು ಫುಟ್‌ಪಾತ್ ಆಕ್ರಮಿಸಿಕೊಂಡು ನಿರ್ಮಿಸಿದ್ದ ಮೆಟ್ಟಿಲುಗಳು, ತಡೆ ಗೋಡೆಗಳು, ತಾತ್ಕಾಲಿಕ ಶೆಡ್, ಕಟ್ಟಡ ನಿರ್ಮಾಣಕ್ಕಾಗಿ ಹಾಕಿರುವ ತಾತ್ಕಾಲಿಕ ಶೆಡ್, ಅನೇಕ ಗೂಡಂಗಡಿಗಳನ್ನು ಜೆಸಿಬಿ ಯಂತ್ರಗಳ ನೆರವಿನೊಂದಿಗೆ ಅಧಿಕಾರಿಗಳು ತೆರವುಗೊಳಿಸಿದರು.

ಅನೇಕ ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಫುಟ್‌ಪಾತ್ ಮೇಲೆ ಇಟ್ಟಿದ್ದ ತಮ್ಮ ವಸ್ತುಗಳನ್ನು ಬೇರೆಡೆ ಸಾಗಿಸಿರುವುದು ಕಂಡು ಬಂತು.

ಯಾವ ಪಾಲಿಕೆಯಲ್ಲಿ ಎಷ್ಟು ತೆರವು:ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 11 ರಸ್ತೆಗಳಲ್ಲಿ 8.55 ಕಿ.ಮೀ ಉದ್ದದ ರಸ್ತೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. 80 ಕಾರ್ಮಿಕರು, 6 ಜೆಸಿಬಿ, 20 ಟ್ರ್ಯಾಕ್ಟರ್, 5 ಟಿಪ್ಪರ್ ಬಳಸಲಾಗಿದೆ. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 12 ರಸ್ತೆಗಳ 9.35 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಗಿದೆ. ಸುಮಾರು 80 ಕಾರ್ಮಿಕರು,10 ಜೆಸಿಬಿಗಳು, 20 ಟ್ರ್ಯಾಕ್ಟರ್‌ಗಳನ್ನು ಹಾಗೂ 5 ಟಿಪ್ಪರ್‌ಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12.70 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತಗೊಳಿಸಲಾಗಿದೆ. ಇದಕ್ಕಾಗಿ 9 ಜೆಸಿಬಿ, 28 ಟ್ರಾಕ್ಟರ್, 1 ಟಿಪ್ಪರ್, 1 ಇತರೆ ಯಂತ್ರ, 108 ಕಾರ್ಮಿಕರನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 127 ಸಿಬ್ಬಂದಿ ಹಾಗೂ 30 ಟ್ರ್ಯಾಕ್ಟರ್ ಬಳಸಿ ವಿವಿಧ ಮುಖ್ಯರಸ್ತೆಗಳ 10.40 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ.

ಮುಕ್ತವಾದ ಮಲ್ಲೇಶ್ವರ ಫುಟ್‌ಪಾತ್

ಮಲ್ಲೇಶ್ವರದ ಸಂಪಿಗೆ ರಸ್ತೆಯ 8ನೇ ಕ್ರಾಸ್ ಬಳಿ ಬೀದಿ ವ್ಯಾಪಾರಿಗಳು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಆದರೆ, ಬುಧವಾರ ತೆರವು ಕಾರ್ಯಾಚರಣೆಯ ಪರಿಣಾಮ ಗುರುವಾರದಂದು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಮೊದಲಿನಂತೆ ವ್ಯಾಪಾರಿಗಳು ಕಾಣಿಸಲಿಲ್ಲ.ಬೀದಿ ಬದಿ ವ್ಯಾಪಾರಿಗಳ

ಸ್ಥಳಾಂತರ: ಕೃಷ್ಣ ಸ್ಪಷ್ಟನೆ ಜಿಬಿಎ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಮಾತ್ರ ತೆರವುಗೊಳಿಸುವುದಿಲ್ಲ. ಅವರನ್ನು ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿಂದ ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ನಗರದ ಆಯ್ದ ಪ್ರಮುಖ ರಸ್ತೆಗಳಲ್ಲಿ ಶೇ.20ರಷ್ಟು ಮಾತ್ರ ತೆರವು ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ತೆರವು ಕಾರ್ಯಾಚರಣೆ ಕುರಿತು ಗುರುವಾರ ಮಾತನಾಡಿದ ಅವರು, ಸರ್ಕಾರಕ್ಕೆ ಯಾರಿಗೂ ತೊಂದರೆ ಮಾಡುವ ಉದ್ದೇಶವಿಲ್ಲ. ಪಾದಚಾರಿ ಮಾರ್ಗ ಬಿಟ್ಟು ಒಳಗಿನ ರಸ್ತೆಗಳಲ್ಲಿ ವ್ಯಾಪಾರ ಮಾಡಬಹುದು. ಮಾರ್ಗದಲ್ಲಿನ ವಿವಿಧ ಅಡೆತಡೆಗಳು, ಅನಾಥ ವಾಹನಗಳು ಹಾಗೂ ಅಕ್ರಮವಾಗಿ ನಿಲ್ಲಿಸಿರುವ ಪಾರ್ಕಿಂಗ್ ವಾಹನಗಳನ್ನು ಸಹ ತೆರವುಗೊಳಿಸಿ, ನಾಗರಿಕರಿಗೆ ಸುಗಮ ಹಾಗೂ ವ್ಯವಸ್ಥಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಒತ್ತುವರಿಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತದೆ ಎಂದರು. ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ಕುರಿತು ಯೋಜನೆ ರೂಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಜು.10ರಿಂದ ಅನಾಥ

ವಾಹನಗಳ ತೆರವು ನಗರದ ರಸ್ತೆ ಬದಿಗಳಲ್ಲಿ ನಿಂತಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ಜು.10ರಿಂದ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಗರ ಪಾಲಿಕೆ ಹಾಗೂ ಸಂಚಾರ ಪೊಲೀಸರ ಸಮನ್ವಯದೊಂದಿಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರ‍್ಯಾಂಪ್‌ಗಳ ತೆರವು ನಗರದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮುಂಭಾಗದಲ್ಲಿ ವಾಹನಗಳ ಪ್ರವೇಶಕ್ಕಾಗಿ ಪಾದಚಾರಿ ಮಾರ್ಗಗಳ ಮೇಲೆ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಮುಂದಿನ ಹಂತದಲ್ಲಿ ಇಂತಹ ರ‍್ಯಾಂಪ್‌ಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಜನಪರ ಯೋಜನೆ ಜನರಿಗೆ ತಲುಪಿಸಿ
ಭವಿಷ್ಯದ ಪೀಳಿಗೆ ಆರೋಗ್ಯ ಕಾಪಾಡಲು ಪೋಲಿಯೋ ಲಸಿಕೆ ಹಾಕಿಸಿ: ಶಾಸಕ ಸಿ.ಎನ್.ಬಾಲಕೃಷ್ಣ ಕರೆ