ಚನ್ನಪಟ್ಟಣ: ಈ ಬಾರಿ ಉಪಚುನಾವಣೆಯಲ್ಲಿ ಜೆಡಿಎಸ್‌ನ ಹಣದ ಹೊಳೆ ಕೆಲಸ ಮಾಡುವುದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಏಳು ಮಂದಿ ಶಾಸಕರಿದ್ದರು, ಅವರು ಎಷ್ಟೇ ಹಣದ ಹೊಳೆ ಹರಿಸಿದರೂ, ಅಧಿಕಾರದ ಪ್ರಭಾವ ಬೀರಿದರೂ ನಿಖಿಲ್ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಇಲ್ಲೂ ಆಗುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕುಮಾರಸ್ವಾಮಿಗೆ ಎರಡರಷ್ಟು ಲಾಭ ಪಡೆವ ಆಸೆ:
೨೫ ವರ್ಷದಿಂದ ಕುಮಾರಸ್ವಾಮಿ ಜೊತೆ ಕೆಲಸ ಮಾಡಿದ್ದೇನೆ, ಗ್ರಾಪಂ ಸದಸ್ಯನಿಗೆ ಇರುವ ಸಂಪರ್ಕವೂ ಅವರಿಗಿಲ್ಲ, ಕುಮಾರಸ್ವಾಮಿ ಒಂದಕ್ಕೆ ಎರಡರಷ್ಟು ಲಾಭದ ಆಸೆ ಇರುವ ವ್ಯಕ್ತಿ ಎಂದು ವ್ಯಂಗ್ಯವಾಡಿದ ಚಲುವರಾಯಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ಅವರ ನೇತೃತ್ವದಲ್ಲಿ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣದಲ್ಲಿ ಗೆದ್ದರೂ ಗೆದ್ದ ಕ್ಷೇತ್ರದಲ್ಲಿ ಎಲ್ಲಿನ ಸಮಸ್ಯೆಯನ್ನು ಅರಿಯಲು ಮುಂದಾಗಿಲ್ಲ, ರಾಜ್ಯ, ರಾಷ್ಟ್ರ ಮಟ್ಟದ ಯಾವುದೇ ಹುದ್ದೆಯಲ್ಲಿರಲಿ ಕ್ಷೇತ್ರದ ಸಮಸ್ಯೆಯನ್ನು ಗಮನಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ಕುಮಾರಸ್ವಾಮಿಗಿಲ್ಲ ಎಂದು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರೂ ತಾವು ಗೆದ್ದ ಕ್ಷೇತ್ರಕ್ಕೆ ಮೂರ್ನಾಲ್ಕು ಬಾರಿ ತೆರಳಿ ಸಮಸ್ಯೆ ಏನೆಂದು ಕೇಳುತ್ತಾರೆ. ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಜನರ ಕಾಳಜಿ ಮಾಡುವರು. ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ ಕುಮಾರಸ್ವಾಮಿ ಇದುವರೆಗೂ ಒಂದು ಕೆಡಿಪಿ ಸಭೆಗೆ ಹಾಜರಾಗಿಲ್ಲ ಎಂದರು.ಉಪ ಚುನಾವಣೆಯನ್ನು ಸ್ವಾಭಿಮಾನವಾಗಿ ತೆಗೆದುಕೊಂಡು ಯೋಗೇಶ್ವರ್‌ರನ್ನು ಗೆಲ್ಲಿಸಬೇಕು, ಚುನಾವಣೆ ಗಂಭೀರವಾಗಿ ಪರಿಗಣಿಸಿ, ಸಣ್ಣಪುಟ್ಟ ವ್ಯತ್ಯಾಸ ಇದ್ದರೆ ಸರಿಪಡಿಸಿಕೊಳ್ಳಿ, ಆಗದಿದ್ದರೆ ಗಮನಕ್ಕೆ ತನ್ನಿ, ಉಳಿದಂತೆ ಗ್ರಾಮಗಳ ಮುಖಂಡರು ಸಮಸ್ಯೆಗಳ ಪಟ್ಟಿಮಾಡಿ ನೀಡಿ ಎಂದು ಸಲಹೆ ನೀಡಿದರು.
ಡಿ.ಕೆ.ಶಿವಕುಮಾರ್ ಅವರು ನೀರಾವರಿ ಮಂತ್ರಿಯೂ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಯೋಗೇಶ್ವರ್ ಮತ್ತೆ ನೀರಾವರಿ ಯೋಜನೆ ಪ್ರಾರಂಭಿಸಿ ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ ಅವರು, ಅದನ್ನೂ ಮೀರಿ ಮತ್ತೆ ಕುಮಾರಸ್ವಾಮಿ ಬೆಂಬಲಿಸಿದರೆ ಅವರು ಸಮಸ್ಯೆ ಕೇಳೋದಿಲ್ಲ, ನಿಮ್ಮ ಕೈಗೂ ಸಿಗುವುದಿಲ್ಲ, ಅಭಿವೃದ್ಧಿಗೆ ಸಹಾಯಾಸ್ತ ಕೇಳಲು ಯಾವ ನೈತಿಕತೆಯು ಚನ್ನಪಟ್ಟಣ ಮತದಾರರಿಗೆ ಇಲ್ಲದಂತೆ ಆಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ತಿಳಿವಳಿಕೆ ತುಂಬಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಅಶ್ವತ್ಥ್ ಸೇರಿದಂತೆ ಸ್ಥಳೀಯ ಮುಖಂಡರು ಇತರರಿದ್ದರು.
ಪೊಟೋ೭ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಚಲುವರಾಯಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು.