‘ಶಕ್ತಿ’ ಯಡಿ 50 ಲಕ್ಷ ನಾರಿಯರ ಪಯಣ

KannadaprabhaNewsNetwork |  
Published : Jul 15, 2025, 01:10 AM IST
ಪೋಟೊ: 14ಎಸ್‌ಎಂಜಿಕೆಪಿ02ಶಿವಮೊಗ್ಗದ ಕೆಎಸ್‌ಆರ್‌ಟಿಸಿ  ಬಸ್‌ ನಿಲ್ದಾಣದಲ್ಲಿ ಸೋಮವಾರ ಏರ್ಪಡಿಸಿದ್ದ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಬಸ್‌ಚಾಲಕ ಮತ್ತು ನಿರ್ವಾಹಕರಿಗೆ ಗೌರವಿಸಲಾಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಈವರೆಗೆ ರಾಜ್ಯದಾದ್ಯಂತ 500 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆದಿರುವುದು ಸಂತಸದ ಸಂಗತಿ ಎಂದು ವಿಧಾನ ಪರಿಷತ್‌ ಸದಸ್ಯೆ ಬಲ್ಕಿಶ್‌ ಬಾನು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಈವರೆಗೆ ರಾಜ್ಯದಾದ್ಯಂತ 500 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆದಿರುವುದು ಸಂತಸದ ಸಂಗತಿ ಎಂದು ವಿಧಾನ ಪರಿಷತ್‌ ಸದಸ್ಯೆ ಬಲ್ಕಿಶ್‌ ಬಾನು ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಕೆಎಸ್ಆರ್‌ಟಿಸಿ ಸಂಸ್ಥೆಯ ಸಹಯೋಗದೊಂದಿಗೆ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್‌ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ನಾರಿಯರ ಸಬಲೀಕರಣಕ್ಕೆ ಪುಷ್ಠಿ ನೀಡಿದೆ. ರಾಜ್ಯದಾದ್ಯಂತ ಪ್ರತಿದಿನ ಸುಮಾರು 50ರಿಂದ 60ಲಕ್ಷ ಮಹಿಳೆಯರಿಗೆ ಈ ಯೋಜನೆಯ ಲಾಭ ದೊರೆಯುತ್ತಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯ ಕುರಿತು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಅಧ್ಯಯನಗಳು ನಡೆದಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನೆರೆಯ ರಾಜ್ಯಗಳೂ ಈ ಯೋಜನೆಯನ್ನು ಮಾದರಿಯಾಗಿ ಇಟ್ಟುಕೊಂಡು ಅನುಷ್ಠಾನಕ್ಕೆ ಮುಂದಾಗಿರುವುದು ಯೋಜನೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ ಶಕ್ತಿ ಯೋಜನೆ ಮಹಿಳೆಯರ ಆರ್ಥಿಕ ಶಕ್ತಿಗೆ ನವಚೈತನ್ಯ ತುಂಬಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಕಾಲಕಾಲಕ್ಕೆ ಬೆಲೆ ಏರಿಕೆಯ ಬಿಸಿ, ನಿರುದ್ಯೋಗ ಮತ್ತಿತರ ಹಲವು ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದ ಜನರ ಸ್ಥಿತಿಗತಿಗಳನ್ನು ಅರಿತು, ಆಡಳಿತಾರೂಢ ಸರ್ಕಾರವು ಜನರ ಆರ್ಥಿಕ, ಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಸದುದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ ಎಂಬ ಹೊಸ ಆರ್ಥಿಕ ಪ್ರಮೇಯವನ್ನು ಅಳವಡಿಸಿಕೊಂಡು ಶಕ್ತಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಈ ಯೋಜನೆಯು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಪುರುಷರಿಗೆ ಸಮಾನವಾಗಿ ನಿಲ್ಲುವಂತೆ ಮಾಡುವ ಪ್ರಯತ್ನಕ್ಕೆ ಸಹಕಾರಿಯಾಗಿದೆ. ದುಡಿಯುವ ಮಹಿಳೆಯರಿಗೆ ಅದರಲ್ಲೂ ಮಧ್ಯಮ ಮತ್ತು ಕೆಳವರ್ಗದ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ ಎಂದು ಹೇಳಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಈ ಸೌಲಭ್ಯ ಜಾರಿಯಿಂದ ಸಂತಸಗೊಂಡಿದ್ದಾರೆ. ನಾಲ್ಕು ಗೋಡೆಗಳ ನಡುವೆ ಸಂಸಾರದ ಕೋಟೆಯಲ್ಲಿ ಬಂಧಿಗಳಾಗಿದ್ದ ಮಹಿಳೆಯರು ಈಗ ಗೂಡಿನಿಂದ ಹೊರಬಂದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಿ, ತೀರ್ಥಕ್ಷೇತ್ರಗಳು, ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಿದ್ದಾರೆ. ಮತ್ತೊಂದ ಕಡೆಗೆ ಈ ಯೋಜನೆಯಿಂದ ವಾಣಿಜ್ಯ ಚಟುವಟಿಕೆ ಗರಿಗೆದರಲು ಅವಕಾಶ ಬಂದೊದಗಿದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮುಖಂಡರಾದ ಎಚ್.ಸಿ.ಯೋಗೀಶ್, ಎನ್.ರಮೇಶ್, ಕೆಎಸ್‌ಆರ್‌ಟಿಸಿ ಡಿಸಿ ನವೀನ್‌ಕುಮಾರ್, ಡಿಟಿಓ ದಿನೇಶ್‌ಕುಮಾರ್‌ ಚೆನ್ನಗಿರಿ, ಡಿಪೋ ವ್ಯವಸ್ಥಾಪಕ ರಾಮಚಂದ್ರ, ಜಿಲ್ಲಾ ಸಂಚಾರಿ ನಿಯಂತ್ರಕ ಎ.ವಿ.ಪ್ರಕಾಶ್‌ ಇತರರಿದ್ದರು.

-------------

ಕೋಟ್‌..

ಮಹಿಳೆಯರಿಗಾಗಿ ರೂಪಿಸಿ ಅನುಷ್ಠಾನಗೊಳಿಸಿರುವ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಬಡವರಿಗೆ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಈ ಓಡಾಟದ ವೆಚ್ಚವನ್ನು ಮನೆ ಖರ್ಚಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. - ಜಯಶ್ರೀ, ಪ್ರಯಾಣಿಕರು, ಗಜೇಂದ್ರಘಡ.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ