ದೇವರಾಜ ಅರಸು ಧೀಮಂತ ಜನನಾಯಕ: ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ

KannadaprabhaNewsNetwork |  
Published : Aug 21, 2026, 03:30 AM IST
ಜೋಯಿಡಾದಲ್ಲಿ ದೇವರಾಜ ಅರಸು ಅವರ  ಜಯಂತಿ ಆಚರಣೆ | Kannada Prabha

ಸಾರಾಂಶ

ತಾಲೂಕಾ ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜೋಯಿಡಾದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯುತ್ಸವ ಆಚರಿಸಲಾಯಿತು.

ದೇವರಾಜ ಅರಸು ಅವರ 111ನೇ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ಜೋಯಿಡಾ

ತಾಲೂಕಾ ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜೋಯಿಡಾದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯುತ್ಸವ ಆಚರಿಸಲಾಯಿತು.

ತಾಪಂ ಇಒ ಭಾರತಿ ಎನ್. ದೇವರಾಜ ಅರಸು ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಮಾತನಾಡಿ, ದೇವರಾಜ ಅರಸು ಅವರು ರಾಜ್ಯದಲ್ಲಿ ಕ್ರಾಂತಿಕಾರಕ ಭೂ ಸುಧಾರಣಾ ಕಾಯ್ದೆ ಮತ್ತು ಭೂನ್ಯಾಯಮಂಡಳಿಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಭೂ ರಹಿತ ಬಡ ರೈತರಿಗೆ ಭೂಮಿಯ ಹಕ್ಕನ್ನು ದೊರಕಿಸಿಕೊಟ್ಟ ಧೀಮಂತ ಜನನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.

ಬಿ.ಎಂ. ಸಾಣಿಕೊಪ್ಪ ಪದವಿ ಕಾಲೇಜಿನ ಪ್ರಾಚಾರ್ಯ ಆರ್.ಬಿ. ಹುಣಶೀಕಟ್ಟಿ ಉಪನ್ಯಾಸ ನೀಡಿ, ಅರಸು ಅವರು ಹಿಂದುಳಿದ ವರ್ಗಗಳ ನಿಜವಾದ ಹರಿಕಾರರಾಗಿದ್ದಾರೆ. ಭೂ ಸುಧಾರಣೆ, ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಹಾಗೂ ಜೀತಪದ್ಧತಿ ನಿರ್ಮೂಲನೆಯಂತಹ ಐತಿಹಾಸಿಕ ಕೊಡುಗೆಗಳ ಮೂಲಕ ಅವರು ಶೋಷಿತ ವರ್ಗಗಳ ಏಳಿಗೆಗಾಗಿ ಜನಪರ ಆಡಳಿತ ನೀಡಿದ್ದಾರೆ ಎಂದು ಸ್ಮರಿಸಿದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ನಜೀರ್ ಸಾಬ್‌ ಅಕ್ಕಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ, ಜೋಯಿಡಾ ಗ್ರಾಮದ ಪ್ರಮುಖರಾದ ಚಂದ್ರಕಾಂತ ದೇಸಾಯಿ, ಗುರಪ್ಪ ಹಣಬರ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆನಂದ ಪಾಟೀಲ ಸೇರಿ ತಾಲೂಕಿನ ವಿವಿಧ ಹಾಸ್ಟೇಲ್‌ನ ನಿಲಯಪಾಲಕರು, ವಿದ್ಯಾರ್ಥಿಗಳು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ, ಕ್ರಿಮಿನಾಶಕದಿಂದ ಕಿಡ್ನಿ, ಹೃದಯಕ್ಕೆ ಅಪಾಯ!
ಸಂಗೀತ ಕ್ಷೇತ್ರಕ್ಕೆ ಹೆಗಡೆ ಕೊಡುಗೆ ಅಪಾರ